ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ, ಆಧ್ಯಾತ್ಮಿಕ ಚಿಂತಕ ಶ್ರೀ ರಮಾನಂದ ಗುರೂಜಿ 60ನೇ ವರ್ಷದ ಹುಟ್ಟುಹಬ್ಬ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನೆರವೇರಿತು.ವೇ.ಮೂ. ವಿಖ್ಯಾತ ಭಟ್ ನೇತೃತ್ವದಲ್ಲಿ ನೆರವೇರಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಜೆ ಪೂರ್ಣಮಾನ ಸುದರ್ಶನ ಯಾಗ, ಕಲಶ ಪ್ರತಿಷ್ಠಾಪನ ವಿಧಿಗಳು, ಪ್ರಾತಃ ಕಾಲದಲ್ಲಿ ತ್ರಿನಾಳಿಕೇರ ಗಣಯಾಗ, ಧನ್ವಂತರಿಯಾಗ, ಮಾರ್ಕಂಡೇಯ ಹೋಮ, ನವಗ್ರಹ ಯಾಗಗಳು ಸಂಪನ್ನಗೊಂಡವು.
ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ 60ನೇ ವರ್ಷದ ಸಾಂಪ್ರದಾಯಿಕ ಆಚರಣೆ ವಿಪ್ರಮೋತ್ತಮರ ಸಮಕ್ಷಮದಲ್ಲಿ ಶ್ರೀ ಗುರೂಜಿ ಅನುಯಾಯಿಗಳ ಸಹಕಾರದೊಂದಿಗೆ ನೆರವೇರಿತು. ಗುರೂಜಿ ದಂಪತಿಯನ್ನು ಅವರ ಅನುಯಾಯಿಗಳು, ಕ್ಷೇತ್ರದ ಭಕ್ತ ಸಮೂಹ ಗೌರವಿಸಿ ಅಭಿನಂದಿಸಿದರು. ಸುಹಾಸಿನಿಯರು ದಂಪತಿಗೆ ಆರತಿ ಬೆಳಗಿ ಶೋಭಾನೆ ಹಾಡಿದರು. ಋತ್ವಿಜರ ಆರಾಧನೆ, ಷೋಡಶ ದಂಪತಿ ಆರಾಧನೆ, ಪಂಚ ಬ್ರಹ್ಮಚಾರಿ ಆರಾಧನೆ, ಪಂಚ ಕನ್ನಿಕರಾಧನೆಗಳು, ಅಷ್ಟೊತ್ತರ ಶತ ಸುಹಾಸಿನಿ ಆರಾಧನೆಗಳು ನೆರವೇರಿದವು. ಶ್ರೀಶ ಆಚಾರ್ಯ, ಕೃಷ್ಣಮೂರ್ತಿ ತಂತ್ರಿ, ಗಣೇಶ ಸರಳಾಯ, ಸರ್ವೇಶ ತಂತ್ರಿ ಮತ್ತು ಶಿಷ್ಯ ವರ್ಗದವರಿಂದ ಪೂಜೆ, ಪ್ರಾರ್ಥನೆ, ಅರಾಧನೆ, ಪ್ರಸಾದ ವಿತರಣೆ ನೆರವೇರಿತು.ಅನುಗ್ರಹಿತ ಭಕ್ತನಾಗಿ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿರುವ ಗುರೂಜಿ ಕಾಲಾಯ ತಸ್ಮೈ ನಮಃ ಪರಿವರ್ತಿತ ಜೀವನ ಅನುಗ್ರಹಿಸಿದ ಕಾಲಕ್ಕೆ ಶರಣು ಎಂದು ಆಗಮಿಸಿದ ಎಲ್ಲರಿಗೂ ಶ್ರೀ ವಿಷ್ಣು ಸಹಸ್ರನಾಮ ಹೊತ್ತಗೆಯನ್ನು ನೆನಪಿನ ಕಾಣಿಕೆಯಗಿ ವಿತರಿಸಿದರು.ಬನ್ನಂಜೆ ಶನಿ ಕ್ಷೆತ್ರದ ಶ್ರೀ ರಾಘವೇಂದ್ರ ತೀರ್ಥರು ಹಾಗೂ ಚಿತ್ರದುರ್ಗ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಆಗಮಿಸಿ ಆಶೀರ್ವದಿಸಿದರು. ಬಹುಭಾಷಾ ನಟಿ ಮೀನಾ, ನಟ ನಿರ್ಮಾಪಕ ರಮೇಶ್ ಸುರ್ವೆ ಉಪಸ್ಥಿತರಿದ್ದರು.ಈ ಕಾರ್ಯಕ್ರಮ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.