ಕನ್ನಡಪ್ರಭ ವಾರ್ತೆ ಬೆಳಗಾವಿ/ವಿಜಯಪುರ
ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದು, ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.ಕಳೆದ 9 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದ ಬೆಳಗಾವಿ ಜಿಲ್ಲೆ ಗುರ್ಲಾಪುರಕ್ಕೆ ಭೇಟಿ ನೀಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಸರ್ಕಾರದ ಆದೇಶ ಪ್ರತಿಯನ್ನು ನೀಡಿ, ಹೋರಾಟಗಾರರ ಎದುರಲ್ಲೇ ದರ ಘೋಷಣೆ ಮಾಡಿದರು. ಬಳಿಕ, ರೈತರು ತಮ್ಮ ಹೋರಾಟವನ್ನು ಕೈಬಿಟ್ಟು, ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ವೇದಿಕೆ ಮೇಲೆಯೇ ಹಸಿರು ಟವೆಲ್ ಹಾರಿಸಿ, ಕುಣಿದು ಕುಪ್ಪಳಿಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರಿಗೆ ರೈತ ಮುಖಂಡರಾದ ಚೂನಪ್ಪ ಪೂಜಾರಿ, ಶಿವಾನಂದ ಪಡಸಲಗಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, ಕಬ್ಬಿನ ದರ ಸ್ವಾಗತಿಸಿ ಕರವೇ (ನಾರಾಯಣ ಗೌಡ ಬಣ) ಕಾರ್ಯಕರ್ತರೂ ಕೂಡ ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸಿದರು.
ಇದೇ ವೇಳೆ, ವಿಜಯಪುರದಲ್ಲಿ ಜಿಲ್ಲಾಧಿಕಾರಿ ಆನಂದ ಕೆ. ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿರುವ ಸರ್ಕಾರದ ಆದೇಶ ಪ್ರತಿಯನ್ನು ನೀಡಿ, ಹೋರಾಟಗಾರರ ಎದುರಲ್ಲೇ ದರ ಘೋಷಣೆ ಮಾಡಿದರು. ಬಳಿಕ, ರೈತರು ತಮ್ಮ ಹೋರಾಟ ಕೈಬಿಟ್ಟು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ಹುಬ್ಬಳ್ಳಿ, ಗದಗ, ಚಿಕ್ಕೋಡಿ, ಕಲಬುರಗಿ ಸೇರಿ ಇತರೆಡೆಯೂ ರೈತರ ಸಂಭ್ರಮಾಚರಣೆ ನಡೆಯಿತು.ಕಬ್ಬು ಬೆಳೆಗಾರರ ಕಿವಿಯಲ್ಲಿ ಹೂ ಇಟ್ಟು ಧೋಖಾ: ಎಚ್ಡಿಕೆಬೆಂಗಳೂರು: ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ಧೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ 100 ರು. ಹೆಚ್ಚಳ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಅವರು, ಮೋದಿಗೆ ಅವರಿಗೆ ಪತ್ರ ಬರೆದು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಹಿಂದೆ ಒಮ್ಮೆ ವಿಧಾನಸಭೆಯಲ್ಲಿ ಇದೇ ಸಿಎಂ, ಡಿಸಿಎಂ ಸೇವಂತಿಗೆ ಹೂವನ್ನು ಕಿವಿ ಮೇಲೆ ಇಟ್ಟುಕೊಂಡು ಬಂದಿದ್ದರು. ಇವರು ಇಂದು ಎರಡೂವರೆ ವರ್ಷದಲ್ಲಿ ನಿತ್ಯವೂ ಜನರಿಗೆ ಕಿವಿಗೆ ಹೂ ಮುಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿದ್ದು ಮುಂದುವರೆದಿದ್ದರೆ ಸರ್ಕಾರ ಪತನ: ಶೆಟ್ಟರ್:ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ ಕ್ರಾಂತಿಯ ಬಗ್ಗೆ ಬಿಜೆಪಿ ನಾಯಕರು ಯಾರೂ ಮಾತನಾಡಿಲ್ಲ. ಕ್ರಾಂತಿ ಮತ್ತು ಭ್ರಾಂತಿಯ ಬಗ್ಗೆ ಕಾಂಗ್ರೆಸ್‌ನವರೇ ಹೇಳಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ನವೆಂಬರ್ ಅಂತ್ಯಕ್ಕೆ ರಾಜಕೀಯ ಬದಲಾವಣೆ ಆಗುವುದು ಖಚಿತ. ಇವರ ತಿಕ್ಕಾಟದಲ್ಲಿ ಸರ್ಕಾರ ಪತನವಾಗುವುದು ಅಷ್ಟೇ ಸತ್ಯ ಎಂದರು.ರೈತರ ಸಭೆಗೇಕೆ ಜೋಶಿ ಬರ್ಲಿಲ್ಲ?: ಸಿದ್ದು
ಬೆಂಗಳೂರು: ಕಬ್ಬು ಬೆಳೆಗಾರರ ಸಂಕಷ್ಟ ಕುರಿತು ಮಾತನಾಡುತ್ತಿರುವ ರಾಜ್ಯದವರೇ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಧ್ವನಿ ರಾಜ್ಯದ ಜನರ ಪರವಾಗಿ ಇರಬೇಕೆ ಹೊರತು, ಅವರ ವಿರುದ್ಧವಾಗಿರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಎಥೆನಾಲ್ ಖರೀದಿಗೆ ಸಂಬಂಧಿಸಿದಂತೆ ಜೋಶಿ ಅವರು ತಮಗೆ ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಶೇ.10.25ರ ರಿಕವರಿ ದರದ ಪ್ರತಿ ಕ್ವಿಂಟಲ್ ಕಬ್ಬಿಗೆ 355 ರು. ನಿಗದಿ ಮಾಡಿದೆ. ಆದರೆ, ರಸಗೊಬ್ಬರ ಬೆಲೆ, ಕಾರ್ಮಿಕರ ಕೂಲಿ, ಸಾರಿಗೆ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳು ದುಪ್ಪಟ್ಟಾಗಿವೆ. ಹೀಗಾಗಿ ಕೇಂದ್ರ ನಿಗದಿ ಮಾಡಿರುವ ದರ ತೀರಾ ಕಡಿಮೆಯಿದ್ದು, ರೈತರಿಗೆ ಪ್ರತಿ ಕ್ವಿಂಟಲ್‌ಗೆ 20 ರು. ನಷ್ಟವಾಗುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದಿದ್ದಾರೆ.
ಇನ್ನು ಜೋಶಿ ಅವರು ಬರೆದಿರುವ ಪತ್ರದಲ್ಲಿ ಸಕ್ಕರೆ ವಲಯಕ್ಕೆ ಎಥೆನಾಲ್ ಬ್ಲೆಂಡಿಂಗ್ ಮತ್ತು ಸಂಗ್ರಹದಲ್ಲಿನ ಹೆಚ್ಚಳವು ವರದಾನವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ. 2022-23ರಲ್ಲಿ 38 ಕೋಟಿ ಲೀ.ನಷ್ಟಿದ್ದ ಎಥೆನಾಲ್ ಪೂರೈಕೆ ಪ್ರಮಾಣ 2024-25ರಲ್ಲಿ 47 ಕೋಟಿ ಲೀ.ಗೆ ತಲುಪಿದೆ. ಆದರೆ, ರಾಜ್ಯದಲ್ಲಿನ ಸ್ಥಾಪಿತ ಸಾಮರ್ಥ್ಯ 270 ಕೋಟಿ ಲೀ.ಗಳಾಗಿದೆ. ಇನ್ನು ಎಥೆನಾಲ್ ಬ್ಲೆಂಡಿಂಗ್‌ನ ಪ್ರಮಾಣ, ಚೇತರಿಕೆ ದರ ಸೇರಿದಂತೆ ಮತ್ತಿತರ ಅಂಶಗಳು ಸಮರ್ಪಕವಾಗಿಲ್ಲ. ಕೇಂದ್ರ ಸರ್ಕಾರ ಸಮಾನ ವಿತರಣೆ ಖಚಿತಪಡಿಸುವ ಬೆಲೆ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಎಥೆನಾಲ್ ವಿಚಾರದಲ್ಲಿ ರೈತರಿಗೆ ಲಾಭವಾಗುತ್ತಿಲ್ಲ ಎಂದಿದ್ದಾರೆ.ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಗಣನೀಯ ಪ್ರಮಾಣದ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡಿದೆ ಎಂದು ಜೋಶಿ ಹೇಳಿದ್ದಾರೆ. ಹಾಗಿದ್ದರೆ ರಾಜ್ಯದಲ್ಲಿ ಕಾರ್ಖಾನೆಗಳಿಗೆ ನೀಡಲಾಗಿರುವ ಬೆಂಬಲ, ವಿತರಿಸಿದ ಮೊತ್ತ, ನೆರವಿನ ಸ್ವರೂಪ ಮತ್ತು ಪ್ರಯೋಜನ ಕುರಿತ ದಾಖಲೆಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುತ್ತೇನೆ. ಅದನ್ನಾಧರಿಸಿ ಕೇಂದ್ರದ ನೆರವು ಉದ್ದೇಶಿತ ಪಾಲುದಾರರಿಗೆ ತಲುಪಿವೆಯೇ ಎಂಬುದನ್ನು ರಾಜ್ಯ ಸರ್ಕಾರ ತಿಳಿಯಲು ಸಹಕಾರಿಯಾಗಲಿದೆ ಎಂದಿದ್ದಾರೆ.ರೈತರ ಸಮಸ್ಯೆ ಬಗ್ಗೆ ಹೇಳುವ ಜೋಶಿ ಅವರು, ನ. 7ರಂದು ಕರೆದಿದ್ದ ಸಭೆಗೆ ಆಹ್ವಾನವಿದ್ದರೂ ಭಾಗವಹಿಸಲಿಲ್ಲ. ಅಲ್ಲಿ ಭಾಗವಹಿಸಿ ರೈತರ ಸಮಸ್ಯೆ ಬಗ್ಗೆ ಮಾತನಾಡಬಹುದಿತ್ತು. ರಾಜ್ಯ ಸರ್ಕಾರದ ಗಮನಕ್ಕೆ ತರಬಹುದಿತ್ತು ಎಂದಿದ್ದಾರೆ.