ಉಡುಪಿಯಲ್ಲಿ ದೇವಕಿಸುತನ ಅವತಾರ ಸಂಭ್ರಮ

KannadaprabhaNewsNetwork |  
Published : Sep 05, 2026, 02:30 AM IST
ಫೋಟೋಸ್ | Kannada Prabha

ಸಾರಾಂಶ

ಕೃಷ್ಣನಗರಿ ಉಡುಪಿಯಲ್ಲಿ ಶುಕ್ರವಾರ ಶ್ರೀ ಕೃಷ್ಣಜಯಂತಿಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು, ದಿನವಿಡೀ ಉಪವಾಸ, ಜಪ, ಪಾರಾಯಣಗಳಲ್ಲಿ ಕಳೆದ ಕೃಷ್ಣಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಟಮಿಯ ಕೃಷ್ಣನನ್ನು ವೀಕ್ಷಿಸಿದರು.

ಉಡುಪಿ : ಕೃಷ್ಣನಗರಿ ಉಡುಪಿಯಲ್ಲಿ ಶುಕ್ರವಾರ ಶ್ರೀ ಕೃಷ್ಣಜಯಂತಿಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು, ದಿನವಿಡೀ ಉಪವಾಸ, ಜಪ, ಪಾರಾಯಣಗಳಲ್ಲಿ ಕಳೆದ ಕೃಷ್ಣಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಟಮಿಯ ಕೃಷ್ಣನನ್ನು ವೀಕ್ಷಿಸಿದರು.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣಮಠವನ್ನು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ. ಮಳೆ ಇಲ್ಲದ ಕಾರಣ ಕೃಷ್ಣಮಠ ಮತ್ತು ರಥಬೀದಿ ಶುಕ್ರವಾರ ದಿನವಿಡೀ ಭಕ್ತರಿಗೆ ಗಿಜಿಗುಡುತ್ತಿತ್ತು.ಪ್ರಸ್ತುತ ಕೃಷ್ಣಮಠದಲ್ಲಿ ಪೂಜಾ ಪರ್ಯಾಯ ಪೀಠಾಧೀಶರಾಗಿರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗ ಇದು ಪ್ರಥಮ ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿದ್ದು, ಅವರು ಶುಕ್ರವಾರ ಕೃಷ್ಣನಿಗೆ ಸ್ತನ್ಯಪಾನ ಮಾಡುವ ಯಶೋದೆ ಅಲಂಕಾರ ಮಾಡಿ ಮಹಾಪೂಜೆ ಸಲ್ಲಿಸಿದರು.ಶುಕ್ರವಾರ, ಶ್ರಾವಣ ಮಾಸದ ಅಷ್ಟಮಿಯ ದಿನ ಮಧ್ಯರಾತ್ರಿಯ 12.12 ಗಂಟೆಗೆ ಚಂದ್ರೋದಯ ಕಾಲದಲ್ಲಿ, ರೋಹಣಿ ನಕ್ಷತ್ರ ಸಹಯೋಗದಲ್ಲಿ, ಶ್ರೀಕೃಷ್ಣನ ಅವತಾರದ ಪುಣ್ಯಗಳಿಗೆಯಲ್ಲಿ ಪರ್ಯಾಯ ಶ್ರೀಗಳು ಪ್ರಧಾನ ಅರ್ಘ್ಯ ಪ್ರದಾನ ಮಾಡುತ್ತಾರೆ, ನಂತರ ಶ್ರೀಮಠದ ಅಧಿಕಾರಿವರ್ಗ ಮತ್ತು ಗಣ್ಯರು ಮತ್ತು ಭಕ್ತರಿಗೂ ತುಳಸಿಕಟ್ಟೆಯಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುತ್ತಾರೆ.

ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ರಥಬೀದಿಯಲ್ಲಿ ವೈಭವದ ಶ್ರೀ ಕೃಷ್ಣ ಲೀಲೋತ್ಸವ - ಮೊಸರುಕುಡಿಕೆ ಉತ್ಸವ ನಡೆಯಲಿದೆ. ರಥಬೀದಿಯಲ್ಲಿ ಹಾಕಲಾಗಿರುವ ಗುಜ್ಜಿ (ಕಮಾನು)ಗಳಲ್ಲಿ ಕಟ್ಟಿರುವ ಪಂಚಕಜ್ಜಾಯ, ಮೊಸರು, ಓಕುಳಿ ನೀರು ಇತ್ಯಾದಿಗಳಿರುವ ಮಡಕೆಗಳನ್ನು ಗೊಲ್ಲವೇಷಧಾರಿಗಳು ಕೊಲಿನಿಂದ ಒಡೆದು ಬಾಯಿಬಡಿದುಕೊಂಡು ಕುಣಿಯುತ್ತಾ ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸುತ್ತಾರೆ.ಇಲ್ಲಿ ನೂರಾರು ಮಂದಿ ಹುಲಿವೇಷಧಾರಿಗಳ ಅಬ್ಬರದ ಕುಣಿತ ಪ್ರದರ್ಶನ ಉತ್ಸವದ ಪ್ರದಾನ ಆಕರ್ಷಣೆಯಾಗಿರುತ್ತದೆ, ಇದೇ ಸಂದರ್ಭದಲ್ಲಿ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹವನ್ನಿಟ್ಟು ಮಹಾಪೂಜೆ, ರಥೋತ್ಸವ ನಡೆಸಲಾಗುತ್ತದೆ, ನಂತರ ಆ ಮೃಣ್ಮಯ ವಿಗ್ರಹವನ್ನು ಮಧ್ವಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಳ್ಳುತ್ತದೆ.

ನೈವೇದ್ಯ ಲಡ್ಡು ತಯಾರಿಸಿದ ಶ್ರೀಗಳು

ಕೃಷ್ಣನ ನೈವೇದ್ಯಕ್ಕಾಗಿ ಸ್ವತಃ ಪರ್ಯಾಯ ಶ್ರೀ ವೇದವರ್ಧನ ತೀರ್ಥರು ವಿವಿಧ ಬಗೆಯ ಲಡ್ಡುಗಳ ತಯಾರಿಗೆ ಸ್ವತಃ ಉಂಡೆಗಟ್ಟುವ ಮೂಲಕ ಚಾಲನೆ ನೀಡಿದರು. ಅವರಿಗೆ ಮಠದ ದಿವಾಣರಾದ ವಿದ್ವಾನ್ ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರ್ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಕೃಷ್ಣಮಠದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣಂದಿರು...!
ಹಬ್ಬಗಳ ಜೊತೆ ಕಲೆ ಸಂಸ್ಕೃತಿ ಸೇರಿದಾಗ ಸಾಮರಸ್ಯ - ಎಂ. ಎ. ಗಫೂರ್