ಟ್ಯಾಂಕ್‌ಗೆ ಸಿಮೆಂಟ್‌ ಪ್ಲಾಸ್ಟರ್‌, ಮತ್ತೆ ಪೈಪ್‌ಲೈನ್‌ಗೆ ಸೂಚನೆ

KannadaprabhaNewsNetwork | Published : Jan 11, 2024 1:31 AM

ಸಾರಾಂಶ

ಹೊಳೆಜೋಳದಗುಡ್ಡೆಯಲ್ಲಿ ಕಳಪೆ ಕಾಮಗಾರಿಯಿಂದ ಸೋರುತ್ತಿದ್ದ ನೀರನ ಟ್ಯಾಂಕ್‌ ಕಾಮಗಾರಿಯನ್ನು ಸರಿಪಡಿಸಲು ಗುತ್ತಿಗೆದಾರರನಿಗೆ ಸೊರಬ ಪಂಚಾಯತ್‌ರಾಜ್‌ ಎಂಜಿನಿರಿಂಗ್‌ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಣಂತರರು ಸಲಹೆ, ಸೂಚನೆ ನೀಡಿದ್ದಾರೆ. ಕನ್ನಡಪ್ರಭ ಪತ್ರಿಕೆ ಈ ಟ್ಯಾಂಕ್‌ ಕಳಪೆ ಕಾಮಗಾರಿ ಕುರಿತು ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತಂತಾಗಿದೆ.

- ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿಗೆ ದೂರವಾಣಿ ಮುಖೇನ ಅಧಿಕಾರಿ ತರಾಟೆ

- ನೀರು ಸೋರಿಕೆ ಪತ್ತೆ ಹಚ್ಚಿ ಕಳಪೆ ಕಾಮಗಾರಿಗೆ ಅಸಮಾಧಾನಗೊಂಡಿದ್ದ ಜನತೆ

- ಉದ್ಘಾಟನೆ ಮೊದಲೇ ತೊಟ್ಟಿಕ್ಕುವ ನೀರಿನ ಟ್ಯಾಂಕ್! ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದ ಕನ್ನಡಪ್ರಭ

- - - ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ನಿರ್ಮಿಸಿರುವ ನೀರಿನ ಟ್ಯಾಂಕ್‌ ಉದ್ಘಾಟನೆಗೂ ಮೊದಲೇ ತೊಟ್ಟಿಕ್ಕುತ್ತಿತ್ತು. ಈ ಬಗ್ಗೆ ಜ.7ರಂದು ಉದ್ಘಾಟನೆ ಮೊದಲೇ ತೊಟ್ಟಿಕ್ಕುವ ನೀರಿನ ಟ್ಯಾಂಕ್! ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು.

ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಈ ಟ್ಯಾಂಕ್‌ಗೆ ಕಳೆಪೆ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಈ ಹಿನ್ನೆಲೆ ಸೊರಬ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ನಾಗರಾಜ ಅವರು ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ತಿಂಗಳ ಹಿಂದೆಯೇ ಮುಕ್ತಾಯವಾದ ಟ್ಯಾಂಕ್ ಕಾಮಗಾರಿ ಗುಣಮಟ್ಟ ಖಾತ್ರಿ ಬಗ್ಗೆ ನೀರು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದೇವೆ. ಟ್ಯಾಂಕ್ ತೊಟ್ಟಿಕ್ಕುತ್ತಿದೆ ಎನ್ನುವ ಬಗ್ಗೆ ದೂರ ಬಂದಿದೆ. ಜಲಾಗಾರ ಸುತ್ತಲೂ ಪುನಃ ಸಿಮೆಂಟ್ ಪ್ಲಾಸ್ಟರ್ ನಡೆಸಿ ದುರಸ್ತಿ ಮಾಡುವಂತೆ ಮತ್ತು ಈಗಾಗಲೇ ಅಳವಡಿಸಿರುವ ಪೈಪ್‌ಲೈನ್ ತೆಗೆದು, ಎರಡೂವರೆ ಸುತ್ತಳತೆಯ ಪೈಪ್ ಹಾಕಲು ಗುತ್ತಿಗೆದಾರರಿಗೆ ಸೂಚಿಸಿದರು. ಅಲ್ಲಲ್ಲಿ ಅಳವಡಿಸಿರುವ ವಾಲ್ವ್ ಸರಿಯಾಗಿದೆ. ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಿ, ಗುಣಮಟ್ಟ ಕಾಯ್ದುಕೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಅಧಿಕಾರಿ ಜೊತೆ ಸೊರಬ ಪಂ.ರಾ.ಇ. ಉಪ ವಿಭಾಗದ ಕಿರಿಯ ಅಭಿಯಂತರ ಗಣಪತಿ ನಾಯ್ಕ್ ಇದ್ದರು.

- - -

ಬಾಕ್ಸ್‌ ಕಳಪೆ ಕಾಮಗಾರಿ: ಎಚ್ಚೆತ್ತ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ಜಲಜೀವನ್ ಮಿಷನ್ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆ 2024ರ ವೇಳೆಗೆ ಗಾಮೀಣ ಭಾರತದ ಪ್ರತಿ ಮನೆಗೆ ನಲ್ಲಿಯ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ. ಅಂತೆಯೇ, ಹೊಳೆಜೋಳದಗುಡ್ಡೆಯಲ್ಲಿ ₹35 ಲಕ್ಷ ವೆಚ್ಚದಲ್ಲಿ 1 ಲಕ್ಷ ಲೀಟರ್‌ ಸಾಮರ್ಥ್ಯದ ಈ ಟ್ಯಾಂಕ್‌ ಕಾಮಗಾರಿ ನಡೆದಿತ್ತು. ಆದರೆ, ಕಳಪೆ ಗುಣಮಟ್ಟದ ಕಾಮಗಾರಿ ವಿರುದ್ಧ ಗ್ರಾಮಸ್ಥರು ಪತ್ರಿಕೆಗೆ ಮಾಹಿತಿ ನೀಡಿದ್ದರು. ಈಗ ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

- - - -10ಕೆಪಿಸೊರಬ02:

ಸೊರಬ ತಾಲೂಕಿನ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಜಲ ಜೀವನ್ ಯೋಜನೆಯಡಿ ನಿರ್ಮಾಣವಾದ ಕಳಪೆ ಕಾಮಗಾರಿಯ ನೀರಿನ ಟ್ಯಾಂಕ್ ಮತ್ತು ಪೈಪ್ ಲೈನ್‌ನನ್ನು ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ನಾಗರಾಜ ಪರಿಶೀಲಿಸಿದರು.

Share this article