ರಣಬಿಸಿಲಿಗೆ ಗಣತಿದಾರರು ತೀವ್ರ ಹೈರಾಣು

KannadaprabhaNewsNetwork |  
Published : May 01, 2026, 02:30 AM IST
ಬಿಸಿಲು  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಜನಗಣತಿ, ಜಾನುವಾರುಗಳ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಬೇಸಿಗೆ ವೇಳೆ ಕಾದು ಕೆಂಡವಾಗಿರುವ ಉಷ್ಣಾಂಶದಲ್ಲಿ ಹೇಗೆ ಗಣತಿ ಕಾರ್ಯ ನಡೆಸಬೇಕು ಎಂಬ ಚಿಂತೆ ಗಣತಿದಾರರದ್ದು.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಜನಗಣತಿ, ಜಾನುವಾರುಗಳ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಬೇಸಿಗೆ ವೇಳೆ ಕಾದು ಕೆಂಡವಾಗಿರುವ ಉಷ್ಣಾಂಶದಲ್ಲಿ ಹೇಗೆ ಗಣತಿ ಕಾರ್ಯ ನಡೆಸಬೇಕು ಎಂಬ ಚಿಂತೆ ಗಣತಿದಾರರದ್ದು.

ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು ಜನಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. 548 ಬ್ಲಾಕ್ ಗಳಲ್ಲಿ ನಡೆಯುತ್ತಿರುವ ಗಣತಿ ಕಾರ್ಯದಲ್ಲಿ 661 ಪ್ರಾಥಮಿಕ ಶಾಲಾ ಶಿಕ್ಷಕ ಮತ್ತು ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. 105 ಜನ ಪ್ರೌಢಶಾಲಾ ಶಿಕ್ಷಕರು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಗಣತಿ ಸುಡು ಬಿಸಿಲಿನ ತಾಪಮಾನದ ನಡುವೆ ಈ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಈವರೆಗೆ ಗಣತಿ ಕಿಟ್ ಪೂರೈಕೆಯಾಗಿಲ್ಲ. ಬಿಸಿಲೆನ್ನದೇ ಮನೆ ಮನೆಗೆ ಅಲೆಯುವ ಗಣತಿದಾರರು ಕನಿಷ್ಠ ಸಲಕರಣೆ ಇಲ್ಲದೇ ಪರದಾಡುವಂತಾಗಿದೆ. ಅನಿವಾರ್ಯವಾಗಿ ಸ್ವಂತ ಖರ್ಚಿನಲ್ಲಿ ತಲೆಗೆ ಕ್ಯಾಪ್, ಮಹಿಳಾ ಸಿಬ್ಬಂದಿ ಛತ್ರಿಗಳನ್ನು ಹಿಡಿದು ಕಾರ್ಯನಿರ್ವಹಿಸುತ್ತಿರುವ ದೃಶ್ಯಗಳು ನೋಡುಗರನ್ನು ಮಮ್ಮಲ ಮರಗುವಂತೆ ಮಾಡುತ್ತಿದೆ.

ಒಂದೆಡೆ ಬೇಗನೆ ಗಣತಿ ಕೆಲಸ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಕನಿಷ್ಠ ಸೌಕರ್ಯವಿಲ್ಲದೇ ಗಣಿತಿದಾರರು ಬಿಸಿಲಿನಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಗಣತಿದಾರರಿಗೆ ಸಂಕಷ್ಟ ತಂದಿಟ್ಟಿದೆ. ನಿಗದಿತ ಅವಧಿಯಲ್ಲಿ ಕಿಟ್ ಪೂರೈಕೆಗೆ ಕ್ರಮ ವಹಿಸದ ಜಿಲ್ಲಾಡಳಿತ ಗಣತಿ ಕಾರ್ಯವನ್ನು ಶೀಘ್ರ ಮುಗಿಸುವಂತೆ ಸೂಚನೆ ನೀಡುತ್ತಿದೆ. ಇದರಿಂದ ನಿತ್ಯ ಸುಡು ಬಿಸಿಲಿನಲ್ಲಿ ಮನೆ ಮನೆ ಓಡಾಡುತ್ತಿರುವ ಗಣತಿ ಸಿಬ್ಬಂದಿ ಬಳಲಿ ಬೆಂಡಾಗಿದ್ದಾರೆ. ಕಿಟ್‌ ನೀಡಿದ್ದರೆ ಸಿಬ್ಬಂದಿ ಅವುಗಳೊಂದಿಗೆ ಗಣತಿ ಕಾರ್ಯ ನಡೆಸುತ್ತಿದ್ದರು, ಆದರೆ, ಇದುವರೆಗೂ ನೀಡದ ಹಿನ್ನಲೆಯಲ್ಲಿ ಬಿಸಿಲಿನಲ್ಲಿಯೇ ಕೆಲಸ ಮಾಡಬೇಕಿದೆ.

ಗಣತಿ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಅದೇ ವೇಳೆಯಲ್ಲಿ 8 ಪುಟಗಳ ನೋಟ್‌ಬುಕ್, ಪೆನ್ ನೀಡಿದ್ದಾರೆ. ಮೊಬೈಲ್‌ನಲ್ಲಿ ಆ್ಯಪ್ ಹಾಕಿಕೊಟ್ಟಿರುವುದು ಬಿಟ್ಟರೆ ಈವರೆಗೆ ಕಿಟ್ ನೀಡಿಲ್ಲ. ಕಿಟ್‌ನಲ್ಲಿ ಬ್ಯಾಗ್, ನೋಟ್‌ಬುಕ್, ಟೋಪಿ, ಚೆಕ್‌ಬಂದಿ ನಕ್ಷೆ, ಮಾರ್ಕ್‌ ಪೆನ್‌, ಪೆನ್ಸಿಲ್, ಎರೇಸರ್, ಹಾಳೆಗಳನ್ನು ನೀಡಲಾಗುತ್ತದೆ. ಮೊದಲ ಹಂತದ ಮನೆಪಟ್ಟಿಯ ಗಣತಿ ಕಾರ್ಯ ಶುರುವಾಗುವ ಮುನ್ನವೇ ಕಿಟ್ ಪೂರೈಸಬೇಕು. ಆದರೆ, ಗಣತಿ ಕಾರ್ಯ ಈಗಾಗಲೇ ಶೇ.70 ರಷ್ಟು ಮುಗಿಯುವ ಹಂತ ತಲುಪಿದರೂ ಕಿಟ್ ವಿತರಣೆ ಮಾಡಿಲ್ಲ. ಇದರಿಂದ ನೆತ್ತಿ ಸುಡುವ ಬಿಸಿಲಿನಲ್ಲಿಯೇ ಮನೆ ಮನೆಗೆ ಅಲೆದಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಗಣತಿ ಸಿಬ್ಬಂದಿ.

ಬಿಸಿಲಿಗೆ ಸಿಬ್ಬಂದಿ ಹೈರಾಣು:

ಜನಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಈ ಬಾರಿ ಹೆಚ್ಚಾಗಿರುವ ಬೇಸಿಗೆಯ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಮನೆಗಳಿಗೆ ಹೋಗಿ ಗಣತಿ ಕಾರ್ಯ ನಡೆಸುತ್ತೇವೆ. ಮತ್ತೆ ಸಂಜೆ ಗಣತಿ ಕೆಲಸ ಆರಂಭಿಸಿ ರಾತ್ರಿವರೆಗೆ ಕಾರ್ಯ ನಿರ್ವಹಿಸುತ್ತೇವೆ. ಆದರೆ, ಹೆಚ್ಚು ಮನೆಗಳು ಇರುವ ಗಣತಿದಾರರು ಅನಿವಾರ್ಯವಾಗಿ ಬಿಸಿಲಿನಲ್ಲಿಯೇ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲವರಿಗೆ ಬರೀ 30 ರಿಂದ 50 ಮನೆಗಳು ಬಂದಿದ್ದರೆ, ಮತ್ತೆ ಕೆಲವರಿಗೆ 200ರಿಂದ 400 ಮನೆಗಳ ಗಣತಿ ನಡೆಸಬೇಕಾಗಿದೆ. ಏಪ್ರಿಲ್ 16 ರಿಂದ ಗಣತಿ ಕಾರ್ಯಾ ಆರಂಭವಾಗಿದ್ದು, ಮೇ 15ರವರೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಕೆಲವು ಶಿಕ್ಷಕರಿಗೆ ಶಾಲೆ ರಜೆ ಇದ್ದರೆ, ಇನ್ನು ಕೆಲವು ಶಿಕ್ಷಕರಿಗೆ ಶಾಲೆಯ ಕರ್ತವ್ಯದ ಜೊತೆಗೆ ರಜೆ ದಿನಗಳಲ್ಲಿ ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬದಿಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

---------

ಕೋಟ್

ಅಥಣಿ ತಾಲೂಕಿನಲ್ಲಿ ಈಗಾಗಲೇ ಮೊದಲ ಹಂತದ ಮನೆಗಳ ಸರ್ವೆ ಕಾರ್ಯ ಶೇ.70 ರಷ್ಟು ಪೂರ್ಣಗೊಂಡಿದ್ದು, ಜನಗಣತಿ ಕಿಟ್ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಜಿಲ್ಲಾಡಳಿತದಿಂದ ಅಥಣಿ ತಾಲೂಕಿಗೆ ಕಿಟ್‌ಗಳು ಆಗಮಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಗಣಿತಿದಾರರಿಗೆ ಕಿಟ್‌ ವಿತರಿಸುತ್ತೇವೆ.

- ಸಿದರಾಯ ಬೋಸಗಿ, ತಹಸೀಲ್ದಾರ ಅಥಣಿ.ಬೆಳಗ್ಗೆ 7 ಗಂಟೆಯಿಂದಲೇ ಮನೆಗಳಿಗೆ ಹೋಗಿ ಗಣತಿ ಕಾರ್ಯ ನಡೆಸುತ್ತೇವೆ. ಮತ್ತೆ ಸಂಜೆ ಗಣತಿ ಕೆಲಸ ಆರಂಭಿಸಿ ರಾತ್ರಿವರೆಗೆ ಕಾರ್ಯ ನಿರ್ವಹಿಸುತ್ತೇವೆ. ಆದರೆ, ಹೆಚ್ಚು ಮನೆಗಳು ಇರುವ ಗಣತಿದಾರರು ಅನಿವಾರ್ಯವಾಗಿ ಬಿಸಿಲಿನಲ್ಲಿಯೇ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲವರಿಗೆ ಬರೀ 30 ರಿಂದ 50 ಮನೆಗಳು ಬಂದಿದ್ದರೆ, ಮತ್ತೆ ಕೆಲವರಿಗೆ 200ರಿಂದ 400 ಮನೆಗಳ ಗಣತಿ ನಡೆಸಬೇಕಾಗಿದೆ. ಏಪ್ರಿಲ್ 16 ರಿಂದ ಗಣತಿ ಕಾರ್ಯಾರಂಭವಾಗಿದ್ದು, ಮೇ 15ರವರೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ಗಣತಿ ಸಿಬ್ಬಂದಿ, ಅಥಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಶಾಸಕ ವೈದ್ಯ
ಮುಂದುವರಿದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ