ಧಾರವಾಡ: ಮನೆಯೊಳಗೆ ಕುಳಿತು ಸಮಾಜ ಒಡೆಯಲು ರೂಪಿಸಿದ ಕುತಂತ್ರದ ಕೂಸೇ ಈ ಸಿದ್ದರಾಮಯ್ಯನವರ ಸರ್ಕಾರ ನಡೆಸಿದ ಜಾತಿಗಣತಿ ಎಂದು ಶಾಸಕ ಅರವಿಂದ ಬೆಲ್ಲದ ಜಾತಿ ಗಣತಿಯನ್ನು ಕಟುವಾಗಿ ಟೀಕಿಸಿದ್ದಾರೆ.
66.35 ಲಕ್ಷ ಲಿಂಗಾಯತರು ಹಾಗೂ 10.49 ಲಕ್ಷ ವೀರಶೈವ ಲಿಂಗಾಯತರನ್ನಾಗಿ ಪ್ರತ್ಯೇಕಿಸಿ, ಬಣಜಿಗ, ಗಾಣಿಗ, ಸಾದರ, ಉಪ್ಪಾರ, ಕುಡು ಒಕ್ಕಲಿಗ, ಜಂಗಮ ಸೇರಿದಂತೆ ಇತ್ಯಾದಿಗಳನ್ನು ಉಪಪಂಗಡಗಳನ್ನು ವಿಭಜಿಸಿ, ಲಿಂಗಾಯತ ಸಮಾಜದ ಅಸ್ತಿತ್ವವನ್ನೇ ದುರ್ಬಲಗೊಳಿಸಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಇದು ಸಾಮಾಜಿಕ ನ್ಯಾಯ ಒದಗಿಸಲು, ನೀತಿ ರೂಪಿಸಲು ಮಾಡಿದ ಗಣತಿ ಅಲ್ಲ, ಇದು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹೂಡಿರುವ ಕುತಂತ್ರದ ಮುಂದುವರೆದ ಭಾಗ!
ಸಿದ್ದರಾಮಯ್ಯನವರು ತಮ್ಮ ಕಳೆದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯಲು ಮಾಡಿದ ಯತ್ನ ವಿಫಲವಾದುದರಿಂದ, ಈ ಬಾರಿ ಗಣತಿಯ ಹೆಸರಿನಲ್ಲಿ ಮತ್ತೊಮ್ಮೆ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಇಂತಹ ಅವೈಜ್ಞಾನಿಕ, ಅಪಾರದರ್ಶಕ ವರದಿಯ ಮೂಲಕ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹೊಸ ಅಸಮಾನತೆಯನ್ನು ಸೃಷ್ಟಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ ಎಂದು ಬೆಲ್ಲದ ತೀಕ್ಷ್ಮವಾಗಿ ಪ್ರತಿಕ್ರಯಿಸಿದ್ದಾರೆ.ಜಾತಿ ಗಣತಿ ಒಪ್ಪುವ ಪ್ರಶ್ನೆಯೇ ಇಲ್ಲ: ಟೆಂಗಿನಕಾಯಿಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರಿಗೆ ಬೇಕಾದಂತೆ ಜಾತಿ ಗಣತಿ ವರದಿ ಸಿದ್ಧವಾಗಿದ್ದು, ಸಂಪೂರ್ಣ ಷಡ್ಯಂತ್ರದಿಂದ ಕೂಡಿದೆ. ವೀರಶೈವ, ಒಕ್ಕಲಿಗ, ಬ್ರಾಹ್ಮಣರು, ಮರಾಠಿಗರು ಸೇರಿದಂತೆ ಯಾರೂ ಕೂಡ ಇದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಕೇಂದ್ರ ಸರ್ಕಾರದಿಂದ ಆಗಬೇಕು. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡಲು ಪರವಾನಗಿ ಇಲ್ಲ. ಸಿಎಂ ಸಿದ್ದರಾಮಯ್ಯ ಅವರು ಇಂತಹ ಹೊಸ ಹೊಸ ಮುಖಗಳ ಹುಡಕಾಟದಲ್ಲಿಯೇ ಇರುತ್ತಾರೆ ಎಂದು ದೂರಿದರು.ಇನ್ನೊಂದೆಡೆ ಜಾತಿಗಣತಿ ವರದಿಗೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಇದನ್ನು ವಿಷಯಾಂತರ ಮಾಡಲು ಇಡಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ಯೋಜಿಸಲಾಗುತ್ತಿದೆ. ಆ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ವಕ್ಫ್ ಕಾನೂನು ಅನುಷ್ಠಾನಕ್ಕೆ ತರಲ್ಲ ಎಂಬ ಸಚಿವ ಜಮೀರ ಅಹ್ಮದ ಹೇಳಿಕೆ ತಿರುಗೇಟು ನೀಡಿದ ಅವರು, ಯಾವುದೇ ಕಾನೂನು, ಕಾಯಿದೆ ಜಾರಿಯಾದ ದೇಶ ಮತ್ತು ಎಲ್ಲ ರಾಜ್ಯಗಳು ಫೆಡರಲ್ ವ್ಯವಸ್ಥೆಯನ್ನು ಒಪ್ಪಬೇಕು. ಬೇರೆ ರಾಜ್ಯಗಳಿಗೆ ಒಂದು, ಜಮೀರ್ ಅಹ್ಮದ್ ಅವರಿಗೆ ಒಂದು ಕಾನೂನು ಎಂಬುದಿಲ್ಲ. ದೇಶದ 140 ಕೋಟಿ ಜನರಿಗೆ ಒಂದೇ ಕಾನೂನು ಇದೆ. ವಕ್ಫ್ ಕಾನೂನು ಒಪ್ಪಲ್ಲ, ಜಾರಿ ಮಾಡಲ್ಲ ಎಂದು ಹೇಳಲು ಇವರ್‍ಯಾರು? ಸರ್ಕಾರ ಇದೆ ಎಂದ ಮಾತ್ರ ಏನು ಬೇಕಾದರೂ ನಡೆಯುತ್ತದೆ ಎಂದುಕೊಂಡಿದ್ದರೆ ಅದು ಅವರ ಭ್ರಮೆ. ಕೇಂದ್ರ ಸರ್ಕಾರ ರೂಪಿಸಿದ ಕಾನೂನುಗಳನ್ನು ಎಲ್ಲ ರಾಜ್ಯಗಳಲ್ಲಿ ಅನ್ವಯಿಸುತ್ತದೆ ಎಂದರು.