ಮೊಬೈಲ್‌ ಹಾವಳಿಯಿಂದ ಮಕ್ಕಳು ಕ್ರೀಡೆಯಿಂದ ದೂರ: ಸಿದ್ದೇಗೌಡ

KannadaprabhaNewsNetwork | Published : Apr 17, 2025 12:07 AM

ಸಾರಾಂಶ

ಮೊಬೈಲ್ ಬಂದ ಮೇಲೆ ನಮ್ಮ ಪರಂಪರೆ ಅಳಿಸಿ ಹೋಗುತ್ತಿದೆ. ಮಕ್ಕಳು ಅಪ್ಪ-ಅಮ್ಮನ, ಅಣ್ಣ-ತಂಗಿಯರ ಪ್ರೀತಿಯಿಂದ ವಂಚಿತರಾಗಿದ್ದಾರೆ. ಮೊಬೈಲಿನಿಂದ ಮಕ್ಕಳ ದೂರವಿರಿಸಲು ಅಕ್ಕಪಕ್ಕದ ಮನೆಯ ಸ್ನೇಹಿತರ ಜೊತೆ ಆಟ ಆಡಲು ಹಚ್ಚಬೇಕು. ‌ಜೊತೆಗೆ ಸಾಹಿತ್ಯಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಅವರನ್ನು ತೊಡಗಿಸಿ ಅವರನ್ನ ಖುಷಿ ಪಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೊಬೈಲ್ ಸಹವಾಸ ಮತ್ತು ಹಾವಳಿಯಿಂದಾಗಿ ಮಕ್ಕಳು ಕ್ರೀಡೆಗಳಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ದೃಶ್ಯ ವಿಭಾಗದ ಮುಖ್ಯಸ್ಥ ಹಾಗೂ ಚಲನಚಿತ್ರ ನಿರ್ದೇಶಕ ಸಿದ್ದೇಗೌಡ ಜಿ.ಬಿ. ಸರಗೂರು ಆತಂಕ ವ್ಯಕ್ತಪಡಿಸಿದರು.

ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹಿನಕಲ್‌ನ ವಿಜಯನಗರದ ಎರಡನೇ ಹಂತದಲ್ಲಿರುವ ಎಚ್.ಆರ್.ಎಸ್ ಲಿಟಲ್ ಕಿಡ್ಸ್ ಕೇರ್ ನಲ್ಲಿ ನಡೆದ ಬಾಲಂಗೋಚಿ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಮೊಬೈಲ್ ಬಳಕೆಯಲ್ಲಿ ಮುಳುಗಿ ಹೋದ ಮೇಲೆ ಗ್ರಾಮೀಣ ಕ್ರೀಡೆಗಳು ಮಾಯವಾದವು ಎಂದು ವಿಷಾದಿಸಿದರು.

ನಾವೆಲ್ಲ ಬಾಲ್ಯ ಕಾಲದಲ್ಲಿ ಗೋಲಿ, ಬುಗರಿ, ಚಿನ್ನಿದಾಂಡು, ಲಗೋರಿ, ಕುಂಟಾಬಿಲ್ಲೆ ಆಟಗಳನ್ನು ಆಡಿ ಸಂಭ್ರಮಿಸುತ್ತಿದ್ದೆವು. ಆದರೆ ಇಂದಿನ ಮಕ್ಕಳು ಇಂತಹ ಆಟಗಳಿಂದ ದೂರ ಉಳಿದಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಮರಳಿ ಇಂತಹ ಕ್ರೀಡೆಗಳತ್ತ ಕರೆತರಬೇಕು ಎಂದರು.

ಮೊಬೈಲ್ ಬಂದ ಮೇಲೆ ನಮ್ಮ ಪರಂಪರೆ ಅಳಿಸಿ ಹೋಗುತ್ತಿದೆ. ಮಕ್ಕಳು ಅಪ್ಪ-ಅಮ್ಮನ, ಅಣ್ಣ-ತಂಗಿಯರ ಪ್ರೀತಿಯಿಂದ ವಂಚಿತರಾಗಿದ್ದಾರೆ. ಮೊಬೈಲಿನಿಂದ ಮಕ್ಕಳ ದೂರವಿರಿಸಲು ಅಕ್ಕಪಕ್ಕದ ಮನೆಯ ಸ್ನೇಹಿತರ ಜೊತೆ ಆಟ ಆಡಲು ಹಚ್ಚಬೇಕು. ‌ಜೊತೆಗೆ ಸಾಹಿತ್ಯಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಅವರನ್ನು ತೊಡಗಿಸಿ ಅವರನ್ನ ಖುಷಿ ಪಡಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವೇಗೌಡ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳನ್ನು ಶಾಲೆಯ ಪಠ್ಯದ ಓದು ಮತ್ತು ಹೋಂವರ್ಕ್ ಒತ್ತಡದಿಂದ ದೂರ ಮಾಡುತ್ತವೆ. ಹಾಡು, ನಾಟಕ, ನೃತ್ಯ, ಬರೆವಣಿಗೆ, ಚಿತ್ರಕಲೆಯಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಉತ್ತಮ‌ಗುಣಗಳನ್ನು ಬೆಳೆಸುತ್ತವೆ ಎಂದರು.

ಮಕ್ಕಳ ದೇಹ, ಬುದ್ದಿ, ಮನಸ್ಸು ವಿಕಾಸವಾಗಲು ಉತ್ತಮ ಸ್ನೇಹಿತರ ಒಡನಾಟವೂ ಬೇಕು. ಇಂತಹ ಸ್ನೇಹಿತರ ಸಂಪರ್ಕವನ್ನು ಬೇಸಿಗೆ ಶಿಬಿರಗಳು ಕಲ್ಪಿಸುತ್ತವೆ. ಇದರಿಂದ ಮಕ್ಕಳು ಪರಸ್ಪರ ಬೆರೆತು ಆಡಿ ಮತ್ತು ಹಾಡಿ ನಲಿದು ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳು ಕೂಡ ತಮ್ಮ ಪೋಷಕರಿಗೆ ‘ನಮಗೆ ಮೊಬೈಲ್ ಬೇಡ. ಕತೆ, ಕವನ, ಹಾಡಿನ ಪುಸ್ತಕಗಳನ್ನು ಕೊಡಿಸಿ’ ಎಂದು ಕೇಳಬೇಕು. ಮನೆಯಲ್ಲಿನ ಅಜ್ಜ-ಅಜ್ಜಿಯರನ್ನು ಕತೆ ಮತ್ತು ಹಾಡು ಹೇಳಿಕೊಡುವಂತೆ ಒತ್ತಾಯಿಸಬೇಕು. ಮೊಬೈಲ್ ಮತ್ತು ಟಿವಿ ವೀಕ್ಷಣೆಗೆ ಸ್ವಲ್ಪ ಸಮಯವಷ್ಟೇ ಮೀಸಲಿಡಬೇಕು. ಹೆಚ್ಚಿನ ಸಮಯವನ್ನು ಪುಸ್ತಕಗಳ ಜೊತೆ ಕಳೆಯಬೇಕು ಎಂದರು.

ವೇದಿಕೆಯಲ್ಲಿ ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಉಪನ್ಯಾಸಕಿ ಸುಪ್ರಿಯಾ ಶಿವಣ್ಣ, ಯುವ ಕವಿ ಎನ್. ನವೀನ್ ಕುಮಾರ್, ರಂಗ ಕಲಾವಿದ ಮನೋಜ್ ಅದಮ್ಯ ಇದ್ದರು.

ಈ ವೇಳೆ ಚಲನಚಿತ್ರ ನಿರ್ದೇಶಕ ಸಿದ್ದೇಗೌಡ ಜಿ.ಬಿ. ಸರಗೂರು ಅವರನ್ನು ಸನ್ಮಾನಿಸಲಾಯಿತು.

Share this article