ತಾಪಮಾನದ ನಡುವೆ ಕೇಂದ್ರ ಸರ್ಕಾರ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗೆ ಈವರೆಗೆ ಗಣತಿ ಕಿಟ್ ಪೂರೈಕೆಯಾಗಿಲ್ಲ.
ಮಂಜುನಾಥ ಕೆ.ಎಂ.
ಬಳ್ಳಾರಿ: ಸುಡು ಬಿಸಿಲಿನ ತಾಪಮಾನದ ನಡುವೆ ಕೇಂದ್ರ ಸರ್ಕಾರ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗೆ ಈವರೆಗೆ ಗಣತಿ ಕಿಟ್ ಪೂರೈಕೆಯಾಗಿಲ್ಲ. ಬಿಸಿಲೆನ್ನದೇ ಮನೆ ಮನೆಗೆ ಅಲೆಯುವ ಗಣತಿದಾರರು ಕನಿಷ್ಠ ಸಲಕರಣೆ ಇಲ್ಲದೇ ಪರದಾಡುವಂತಾಗಿದೆ. ಒಂದೆಡೆ ಬೇಗನೆ ಗಣತಿ ಕೆಲಸ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಕನಿಷ್ಠ ಸೌಕರ್ಯವಿಲ್ಲದೇ ಗಣಿತಿದಾರರು ಬಿಸಿಲಲ್ಲಿ ಓಡಾಡುವ ಅನಿವಾರ್ಯ ಸೃಷ್ಟಿಯಾಗಿದೆ. ಇದು ಗಣತಿದಾರರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ನಿಗದಿತ ಅವಧಿಯಲ್ಲಿ ಕಿಟ್ ಪೂರೈಕೆಗೆ ಕ್ರಮ ವಹಿಸದ ಜಿಲ್ಲಾಡಳಿತಕ್ಕೆ ಸಿಬ್ಬಂದಿ ಹಿಡಿಶಾಪ ಹಾಕುತ್ತಿದ್ದಾರೆ.
ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಆದೇಶ ಮಾಡುವ ಅಧಿಕಾರಿಗಳು ಬಿಸಿಲಿನಲ್ಲಿ ಕೆಲಸ ಮಾಡುವವರ ಕಡೆ ಗಮನ ನೀಡದಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಮೂಡಿದೆ. ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸದ ಸ್ಥಿತಿಯಲ್ಲಿರುವ ಗಣತಿ ಸಿಬ್ಬಂದಿ ಬಿಸಿಲಲ್ಲೇ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಿಟ್ ಕೊಡದೆ ಗಣತಿಗೆ ಕಳಿಸಿದ ಜಿಲ್ಲಾಡಳಿತ:
ಕೇಂದ್ರ ಸರ್ಕಾರದ ಮಹತ್ವದ ಮನೆ ಹಾಗೂ ಜನಗಣತಿ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶ ನೀಡಿರುವ ಜಿಲ್ಲಾಡಳಿತ ಕಿಟ್ ಕೊಡದೇ ಕಳಿಸಿದೆ. ಗಣತಿ ಸಂಬಂಧ ತರಬೇತಿ ನೀಡಿದ ವೇಳೆ 8 ಪುಟಗಳ ನೋಟ್‌ಬುಕ್, ಪೆನ್ ನೀಡಿದ್ದಾರೆ. ಮೊಬೈಲ್‌ನಲ್ಲಿ ಆ್ಯಪ್ ಹಾಕಿಕೊಟ್ಟಿರುವುದು ಬಿಟ್ಟರೆ ಈವರೆಗೆ ಕಿಟ್ ನೀಡಿಲ್ಲ. ಕಿಟ್‌ನಲ್ಲಿ ಬ್ಯಾಗ್, ನೋಟ್‌ಬುಕ್, ಟೋಪಿ, ಚೆಕ್‌ಬಂದಿ ನಕ್ಷೆ, ಮಾರ್ಕರ್ ಪೆನ್, ಪೆನ್ಸಿಲ್, ಎರೈಸರ್, ಬಿಳಿ ಹಾಳೆಗಳನ್ನು ನೀಡಲಾಗುತ್ತದೆ. ಮೊದಲ ಹಂತದ ಮನೆಪಟ್ಟಿಯ ಗಣತಿ ಕಾರ್ಯ ಶುರುಗೊಳ್ಳುವ ಮುನ್ನವೇ ಕಿಟ್ ಪೂರೈಸಬೇಕು. ಆದರೆ, ಗಣತಿ ಕಾರ್ಯ ಮುಗಿಯುವ ಹಂತ ತಲುಪಿದರೂ ಕಿಟ್ ವಿತರಣೆ ಮಾಡಿಲ್ಲ. ಇದರಿಂದ ನೆತ್ತಿ ಸುಡುವ ಬಿಸಿಲಿನಲ್ಲಿಯೇ ಮನೆ ಮನೆಗೆ ಅಲೆದಾಡಿ ಮಾಹಿತಿ ಸಂಗ್ರಹಿಸಬೇಕಾದ ಸ್ಥಿತಿಯಿದೆ ಎಂದು ಗಣತಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ 2027ರ ಡಿಜಿಟಲ್ ಜನಗಣತಿ ಅಂಗವಾಗಿ ಸ್ವಯಂ ಗಣತಿ ಪ್ರಕ್ರಿಯೆಯು ಏ.1ರಿಂದ ಆರಂಭವಾಗಿ ಏಪ್ರಿಲ್ 15ರ ಸಂಜೆ 6 ಗಂಟೆಗೆ ಕೊನೆಗೊಂಡಿತು. ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟಾರೆ ಪ್ರಗತಿ ಶೇ.4.80 ಆಗಿದ್ದು ಬಳ್ಳಾರಿ ಪ್ರಥಮ ಸ್ಥಾನದಲ್ಲಿದೆ. ಏಪ್ರಿಲ್ 16 ರಿಂದ ಮೇ 15 ರವರೆಗೆ ಜನಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಗಳ ಪಟ್ಟಿ ಮತ್ತು ಜನಗಣತಿ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಣತಿದಾರರು ಬ್ಲೂಫ್ರಿಂಟ್ ಹಾಕಿಕೊಂಡು ಮ್ಯಾಪಿಂಗ್ ಮಾಡಿಕೊಂಡಿದ್ದಾರೆ. ಮನೆಗಳಿಗೆ ನಂಬರ್ ನೀಡಿ ಬಳಿಕ ಸರ್ವೆ ಕಾರ್ಯ ಆರಂಭಿಸಿದ್ದಾರೆ. ಆದರೆ, ಗಣತಿದಾರರಿಗೆ ಗಣತಿ ಕಿಟ್ ಸೇರಿದಂತೆ ಪೂರಕ ಅನುಕೂಲಗಳನ್ನು ಮಾಡಿಕೊಡಲಾಗಿಲ್ಲ. ಇದು ಗಣತಿದಾರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಸಿಲಿಗೆ ಹೆದರಿಗೆ ಬೆಳಗ್ಗೆ-ಸಂಜೆ ಗಣತಿ:
ಬಳ್ಳಾರಿ ಜಿಲ್ಲೆಯಲ್ಲಿನ ಸುಡುಬಿಸಿಲಿಗೆ ಕಂಗಾಲಾಗಿದ್ದೇವೆ. ಬೆಳಿಗ್ಗೆ 8 ಗಂಟೆಯಿಂದಲೇ ಮನೆಗಳಿಗೆ ತೆರಳಿ ಗಣತಿ ಕಾರ್ಯ ನಡೆಸುತ್ತೇವೆ. ಸಂಜೆ 5 ಗಂಟೆ ಬಳಿಕ ಮತ್ತೆ ಗಣತಿ ಕೆಲಸ ಶುರು ಮಾಡಿ ರಾತ್ರಿವರೆಗೆ ಕಾರ್ಯ ನಿರ್ವಹಿಸುತ್ತೇವೆ. ಆದರೆ, ಹೆಚ್ಚು ಮನೆಗಳು ಇರುವ ಗಣತಿದಾರರು ಅನಿವಾರ್ಯವಾಗಿ ಬಿಸಿಲಿನಲ್ಲಿಯೇ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲವರಿಗೆ ಬರೀ 50 ರಿಂದ 60 ಮನೆಗಳು ಬಂದಿದ್ದರೆ, ಮತ್ತೆ ಕೆಲವರಿಗೆ 400ರಿಂದ 450 ಮನೆಗಳ ಸರ್ವೆ ನಡೆಸಬೇಕಾಗಿದೆ ಎನ್ನುತ್ತಾರೆ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕ ಸಿಬ್ಬಂದಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.