ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ರದ್ದು

KannadaprabhaNewsNetwork |  
Published : Apr 23, 2026, 02:00 AM IST
ಸ್ಥಳಾಂತರ ರದ್ದು ಮಾಡಿರುವ ಆದೇಶ ಪ್ರತಿ. | Kannada Prabha

ಸಾರಾಂಶ

ತೀವ್ರ ಒತ್ತಡ ಹಾಗೂ ಹೋರಾಟದ ಎಚ್ಚರಿಕೆಯ ಹಿನ್ನೆಲೆ ಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಆದೇಶವನ್ನು ಪ್ರಸಾರ ಭಾರತಿ ಹಿಂಪಡೆದುಕೊಂಡಿದೆ.

ಧಾರವಾಡ:

ಇಲ್ಲಿಯ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಹುನ್ನಾರಕ್ಕೆ ತಡೆ ಬಿದ್ದಿದೆ. ಪ್ರಸಾರ ಭಾರತಿ ಸಕ್ಷಮ ಪ್ರಾಧಿಕಾರದ ಈ ಆದೇಶಕ್ಕೆ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರಸಾರ ಭಾರತಿ ಸ್ಥಳಾಂತರದ ಆದೇಶ ಹಿಂಪಡೆದಿದೆ.

ಸ್ಥಳಾಂತರದ ಆದೇಶದಿಂದಾಗಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜನತೆಯಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಸಂಪರ್ಕಿಸಿ ವಿಭಾಗವನ್ನು ಧಾರವಾಡದಲ್ಲಿಯೇ ಮುಂದುವರಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯು ಏ. 17ರಂದು ಮಾಡಿದ್ದ ಸ್ಥಳಾಂತರದ ಆದೇಶ ಹಿಂಪಡೆದಿದೆ.

ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ 15 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗವು 45 ವರ್ಷಗಳಿಂದ ಈ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿತ್ತು. ಅನವಶ್ಯಕ ಕಾರಣ ಹಾಗೂ ಈ ವಿಭಾಗದ ಮಹತ್ವ ಅರಿಯದೇ ಪ್ರಸಾರ ಭಾರತಿಯು ಈ ವಿಭಾಗವನ್ನು ತಾತ್ಕಾಲಿಕವಾಗಿ ಬೆಂಗಳೂರಿಗೆ ಸ್ಥಳಾಂತರಿಸಲು ಆದೇಶಿಸಿತ್ತು. ಈ ಕುರಿತು ಕನ್ನಡಪ್ರಭ ಏ. 18ರಂದು "ಧಾರವಾಡ ಆಕಾಶವಾಣಿ ಕೇಂದ್ರ ಶೀಘ್ರ ಸ್ಥಳಾಂತರ? " ಹಾಗೂ ಏ. 22ರಂದು "ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ನ್ಯಾಯವೇ " ಎಂದು ವಿಶೇಷ ವರದಿ ಪ್ರಕಟಿಸಿತ್ತು. ಇದರೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಸಭೆ ನಡೆಸಿ ಸ್ಥಳಾಂತರ ಆದೇಶ ಕೈಬಿಡದೆ ಹೋದಲ್ಲಿ ಏ. 23ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ಮಾಡಿ ಧರಣಿಯ ಎಚ್ಚರಿಕೆ ನೀಡಿತ್ತು. ಈ ಪರಿಸ್ಥಿತಿ ಅರಿತ ಪ್ರಹ್ಲಾದ ಜೋಶಿ, ಸ್ಥಳಾಂತರದ ಆದೇಶ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಜತೆಗೆ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಜೋಶಿ ಧನ್ಯವಾದ ತಿಳಿಸಿದ್ದಾರೆ. ಪದೇ ಪದೇ ಸ್ಥಳಾಂತರ ಏಕೆ?

2020 ಹಾಗೂ 2023ರಲ್ಲಿ ಇದೇ ತರನಾಗಿ ಪ್ರಸಾರ ಭಾರತಿಯು ಕುಂಟು ನೆಪ ಹೇಳಿ ತಾತ್ಕಾಲಿಕ ಸ್ಥಳಾಂತರದ ಆದೇಶ ಮಾಡಿತ್ತು. ಅಂದು ಸಹ ಇದೇ ರೀತಿ ಆಕಾಶವಾಣಿ ಅಭಿಮಾನಿಗಳ, ಮಾಧ್ಯಮಗಳ ಒತ್ತಡದ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ಅವರು ವಿಭಾಗ ಉಳಿಸಿಕೊಂಡಿದ್ದರು. ಇದು ಮೂರನೇ ಬಾರಿ ಸ್ಥಳಾಂತರ ಹುನ್ನಾರ ಕೈ ತಪ್ಪಿದೆ. ಪದೇ ಪದೇ ಈ ರೀತಿಯ ಸ್ಥಳಾಂತರ ಆದೇಶಕ್ಕೆ ಪ್ರಸಾರ ಭಾರತಿ ಪ್ರಯತ್ನ ಮಾಡದಂತೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಹಾಗೂ ಪೂರ್ಣ ಪ್ರಮಾಣದ ವಿಭಾಗ ನಡೆಯುವಂತೆ ಸಿಬ್ಬಂದಿ ಹಾಗೂ ಇತರೆ ಸೌಲಭ್ಯ ಕಲ್ಪಿಸುವಂತೆ ಪ್ರಹ್ಲಾದ ಜೋಶಿ ಅವರು ಕ್ರಮಕೈಗೊಳ್ಳಬೇಕೆಂದು ಆಕಾಶವಾಣಿ ನಿವೃತ್ತ ಅಧಿಕಾರಿಯೊಬ್ಬರು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಜೇಥಿಯಾ, ಫ್ರೊ.ಅಚ್ಯುತ್‌, ಸಂಗ್ರೇಶಿಗೆ ಕವಿವಿ ಗೌಡಾ
ಕಳ್ಳಬಟ್ಟಿ, ನಕಲಿ ಮದ್ಯ ತಡೆಯಿರಿ: ಜಿಲ್ಲಾಧಿಕಾರಿ