ಶತಮಾನೋತ್ಸವ ಸಂಭ್ರಮದ ಜತೆ ಸವಾಲುಗಳಿವೆ: ಸಾತಿಸುಂದ್ರೇಶ್‌

KannadaprabhaNewsNetwork |  
Published : Dec 19, 2025, 01:30 AM IST
ಚಿಕ್ಕಮಗಳೂರಿನ ಅಜಾದ್ ಪಾರ್ಕ್‌ ವೃತ್ತದಲ್ಲಿ ಗುರುವಾರ ಸಿಪಿಐ ಪಕ್ಷದ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು. ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿಸುಂದರೇಶ್‌, ಜಿ. ರಘು, ರಾಧಾ ಸುಂದರೇಶ್‌, ರವೀಶ್‌ ಬಸಪ್ಪ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂದರ್ಭದಲ್ಲಿ ಸಂಭ್ರಮದ ಜತೆಗೆ ನಮ್ಮ ಎದುರು ಹಲವು ಸವಾಲುಗಳು ಇವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದ್ರೇಶ್‌ ಹೇಳಿದರು.

- ಸಿಪಿಐ ಪಕ್ಷದ ಶತಮಾನೋತ್ಸವದ ಅಂಗವಾಗಿ ಜಾಥಾ- ಬಹಿರಂಗ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂದರ್ಭದಲ್ಲಿ ಸಂಭ್ರಮದ ಜತೆಗೆ ನಮ್ಮ ಎದುರು ಹಲವು ಸವಾಲುಗಳು ಇವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದ್ರೇಶ್‌ ಹೇಳಿದರು.

ನಗರದ ಅಜಾದ್ ಪಾರ್ಕ್‌ ವೃತ್ತದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಏರ್ಪಡಿಸಿದ್ದ ಸಮತಾ ರಾಜ್ಯದ ಕನಸುಗಳೊಂದಿಗೆ ಶ್ರಮ ಶಕ್ತಿ ಸಂಘರ್ಷದ ಶತಮಾನದ ಪಯಣ ಶತಮಾನೋತ್ಸವದ ಜಾಥಾ ಹಾಗೂ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.ಬಿಜೆಪಿಯ ಸರ್ವಾಧಿಕಾರಿ ಧೋರಣೆ ಎದುರಿಸಲು ಸಮಾನ ಮನಸ್ಕ ನಾಯಕರು ಕೈಜೋಡಿಸಬೇಕೆಂದು ಮನವಿ ಮಾಡಿದ ಅವರು, ದೇಶದಲ್ಲಿ ಕೋಮುವಾದಿ ಪ್ಯಾಸಿಸ್ಟ್ ನೀತಿಯಿಂದ ಬಂಡವಾಳಶಾಹಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಗೆ ಭೂಮಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ದಲಿತರು, ಆದಿವಾಸಿಗಳು, ರೈತರು, ಯುವ ಜನರು, ಮಹಿಳೆಯರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆಂದು ಹೇಳಿದರು.ಸಿಪಿಐ ಪಕ್ಷ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮ ಮಾಡುವ ಸಲುವಾಗಿ ದೇಶಪ್ರೇಮಿಗಳು, ಜಾತ್ಯಾತೀತ ಪ್ರಗತಿಪರ ಸಂಘಟನೆಗಳು, ವಿವಿಧ ಪಕ್ಷಗಳು, ಪ್ರಸ್ತುತ ಇರುವ ಸವಾಲುಗಳನ್ನು ಎದುರಿಸಲು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.ದುಡಿಯುವ ಜನರನ್ನು ಬ್ರಿಟೀಷರು ಶೋಷಿಸುತ್ತಿದ್ದರೆ ಜೊತೆಗೆ ದೇಶದ ಬಂಡವಾಳಶಾಹಿಗಳು, ಭೂಮಾಲೀಕರು ಜನರನ್ನು ಕಿತ್ತು ತಿನ್ನುತ್ತಿದ್ದರು. ಪುರೋಹಿತಶಾಹಿ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ಆದಿವಾಸಿಗಳು ದಲಿತರನ್ನು ಊರಿನಿಂದ ಹೊರಗಿಟ್ಟು ಜಾತೀಯತೆ, ಅಸ್ಪೃಶ್ಯತೆ ಆಚರಿಸುತ್ತಿದ್ದ ಸಂದರ್ಭಗಳಿಗೆ ಸಿಪಿಐ ಜನ್ಮ ತಾಳಿತು ಎಂದರು.ಈ ಎಲ್ಲಾ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಕಾನ್ಪುರದಲ್ಲಿ 1925 ರ ಡಿ.26 ರಂದು ಸಿಪಿಐ ಪಕ್ಷ ಉದಯವಾಯಿತು. ಆ ಸಂದರ್ಭದಲ್ಲಿ ಸಭೆ ನಡೆಸುವಾಗ ಬ್ರಿಟೀಷರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂದು ಆರೋಪಿಸಿ ಪಕ್ಷದ ನಾಯಕರು ಹಾಗೂ ಮುಖಂಡರನ್ನು ಜೈಲಿಗೆ ಕಳುಹಿಸಿದರು ಎಂದು ಹೇಳಿದರು.ಸಮತಾ ಸಮಾಜ ನಿರ್ಮಾಣವಾಗಬೇಕಾದರೆ ದಲಿತರಿಗೆ, ಆದಿವಾಸಿಗಳಿಗೆ ಸಮಾನವಾಗಿ ಭೂಮಿ ಹಂಚಿಕೆಯಾಗಬೇಕು. ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಆಡಳಿತದಲ್ಲಿ ಶೇ.60 ರಷ್ಟು ಆಸ್ತಿ ಶೇ.1 ರಷ್ಟು ಇರುವ ಶ್ರೀಮಂತರ ಕೈಯಲ್ಲಿ ಇರುವುದು ದುರಂತ ಎಂದು ತಿಳಿಸಿದರು.ಆರ್‌ಎಸ್‌ಎಸ್ ಬಿಜೆಪಿಯನ್ನು ಅಧಿಕಾರದಲ್ಲಿ ಮುಂದುವರಿಯಲು ಬಿಡದೆ ಸಿಪಿಐ ಸಮತಾ ಸಮಾಜ ನಿರ್ಮಾಣಕ್ಕಾಗಿ ಹೋರಾಟ ರೂಪಿಸಲಿದೆ. ಜಾತ್ಯಾತೀತ, ಪ್ರಜಾಪ್ರಭುತ್ವವಾದಿ ಎಡಪಕ್ಷಗಳು ಈ ಸಂದರ್ಭದಲ್ಲಿ ಗಂಭೀರ ಹೋರಾಟಕ್ಕೆ ಪ್ರತಿಜ್ಞೆ ಮಾಡಬೇಕೆಂದು ವಿನಂತಿಸಿದರು.ಜಿಲ್ಲೆಯಲ್ಲಿ ಭೂಮಿ ಹೋರಾಟ ಮುಂದುವರಿಯಲಿದೆ. ರಾಜ್ಯದಲ್ಲಿ ಸಮತಾ ಕನಸು ನನಸಾಗಬೇಕಾದರೆ ರೋಟಿ, ಕಪಡ, ಮಖಾನ್ ಈ ಮೂರೂ ಇರಬೇಕು. ರಾಜ್ಯದಲ್ಲಿ 27 ಲಕ್ಷ ಕುಟುಂಬಗಳಿಗೆ ಸ್ವಂತ ಮನೆಯಿಲ್ಲ, ಜಿಲ್ಲೆಯಲ್ಲಿ ಸೂರಿಲ್ಲದವರಿಗೆ ಮನೆ ಕೊಡಿಸುವುದೇ ಸಿಪಿಐ ಶತಮಾನದ ಸಂಭ್ರಮದ ಪ್ರತಿಜ್ಞೆ ಎಂದರು.ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿ, ಈ ದೇಶದಲ್ಲಿ ನದಿ ನೀರು ಹರಿದಿದೆ, ಗಾಳಿಯಲ್ಲಿ ಬದಲಾವಣೆ, ಭೂಮಿಯಲ್ಲಿ ಸಾಕಷ್ಟು ಸ್ಥಿತ್ಯಂತ್ರ ಆಗಿದೆ. ರಾಜಕಾರಣದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಕಾಣುತ್ತಿದ್ದೇವೆ ಎಂದರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಬ್ರಿಟೀಷರ ಪರವಾಗಿದ್ದವರು ಇಂದು ಅಧಿಕಾರ ನಡೆಸುತ್ತಿರುವವರ ಬದಲಾವಣೆ ಕಾಣುತ್ತಿದ್ದೇವೆ. ಸಮಾನತೆಗಾಗಿ ಕನಸು ಕಂಡು ಹೋರಾಟ ಮಾಡಿದವರು ಹಿಂದೆ ಸರಿಯುವ ಸನ್ನಿವೇಶ ನಿರ್ಮಾಣ ವಾಗಿದೆಎಂದು ವಿಷಾಧ ವ್ಯಕ್ತಪಡಿಸಿದರು.ಮೈತ್ರಿ ಹೋರಾಟ, ಐಕ್ಯ ಹೋರಾಟ, ಸಮಾನ ಶತೃ ಇವುಗಳನ್ನು ಗುರುತಿಸಬೇಕಾಗಿದೆ. ಈ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿರುವ ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರೋಧಿ ಸುವವರೆಲ್ಲ ಒಂದೆಡೆ ನಿಲ್ಲಬೇಕಾಗಿದೆ ಎಂದು ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ವಹಿಸಿದ್ದರು. ಮುಖಂಡ ವಿಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ, ರಾಧಾ ಸುಂದರೇಶ್, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ರವೀಶ್‌ ಬಸಪ್ಪ, ಮಹೇಶ್, ಅಣ್ಣಯ್ಯ, ರಾಜ್ಯ ಸಹ ಕಾರ್ಯದರ್ಶಿ ಸಂತೋಷ್, ಎಚ್.ಕೆ.ಸೋಮೇಗೌಡ, ವಸಂತ್‌ಕುಮಾರ್, ಧರ್ಮರಾಜ್, ರಮೇಶ್‌ ಉಪಸ್ಥಿತರಿದ್ದರು. ಕೆರೆಮಕ್ಕಿ ಮಹೇಶ್ ಸ್ವಾಗತಿಸಿದರು.18 ಕೆಸಿಕೆಎಂ 1ಚಿಕ್ಕಮಗಳೂರಿನ ಅಜಾದ್ ಪಾರ್ಕ್‌ ವೃತ್ತದಲ್ಲಿ ಗುರುವಾರ ಸಿಪಿಐ ಪಕ್ಷದ ಶತಮಾನೋತ್ಸವ ನಡೆಯಿತು. ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿಸುಂದರೇಶ್‌, ಜಿ. ರಘು, ರಾಧಾ ಸುಂದರೇಶ್‌, ರವೀಶ್‌ ಬಸಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು