ಕನ್ನಡಪ್ರಭ ವಾರ್ತೆ ಮೈಸೂರು
ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ಉಪ ಕೃಷಿ ನಿರ್ದೇಶಕ ಕೆ. ನಾಗರಾಜ, ಸಹಾಯಕ ಕೃಷಿ ನಿರ್ದೇಶಕರು, ಐಕಾಂತಿಕ ತಂಡದ ಸಂಸ್ಥಾಪಕ ರಾಘವ ಮತ್ತು ತಂಡ ಹಾಗೂ ತರಬೇತಿ ಕೇಂದ್ರದ ಅಧಿಕಾರಿಗಳು ಹಾಗೂ ರೈತ, ರೈತ ಮಹಿಳೆಯರು ತರಬೇತಿಗೆ ಚಾಲನೆ ನೀಡಿದರು.
ತರಬೇತಿಯ ಮೊದಲನೇ ದಿನ ಮೊದಲನೇ ಅಧಿವೇಶನದಲ್ಲಿ ದಾವಣಗೆರೆಯ ಐಕಾಂತಿಕ ಫಾರಂನ ರಾಘವ ಮಾತನಾಡಿ, ಆಧುನಿಕ ಕೃಷಿಯಿಂದ ಆಗುತ್ತಿರುವ ಅಡ್ಡ ಪರಿಣಾಮ ನಮ್ಮ ನೈಜ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ, ಇದನ್ನು ಸರಿಪಡಿಸಲಿರುವ ಅವಕಾಶಗಳು ಹಾಗೂ ಅಗತ್ಯತೆಗಳ ಕುರಿತು ಸುದೀರ್ಘ ಚರ್ಚೆಯೊಂದಿಗೆ ತಮ್ಮ ಅಧಿವೇಶನವನ್ನು ಪ್ರಾರಂಭಿಸಿ ಸಹಜ ಕೃಷಿಯ ಪರಿಕಲ್ಪನೆ ಮತ್ತು ಸಹಜ ಕೃಷಿ ಆನಂದಮಯ ಜೀವನಕ್ಕೆ ನಾಂದಿ ವಿಷಯದ ಕುರಿತು ಮಾಹಿತಿ ನೀಡಿದರು.ಮುಂದಿನ ಅಧಿವೇಶನಗಳಲ್ಲಿ ಕೃಷಿ ಚರಿತ್ರೆ ಮತ್ತು ಕೃಷಿಯಲ್ಲಿ ಅನಿಮಿಯತ ಪ್ಲಾಸ್ಟಿಕ್ ಬಳಕೆ, ಸಹಜ ಕೃಷಿಯಿಂದ ನೈಜ ಆಹಾರ ಮತ್ತು ಉತ್ತಮ ತೋಟದ ನಿರ್ವಹಣೆಯ ಮಾರ್ಗೋಪಾಯಗಳು ವಿಷಯಗಳ ಕುರಿತು ಐಕಾಂತಿಕ ತಂಡದ ಸಂಪನ್ಮೂಲ ವ್ಯಕ್ತಿಗಳು ವಿಸ್ತಾರವಾದ ಮಾಹಿತಿಯನ್ನು ರೈತ ಬಾಂಧವರಿಗೆ ನೀಡಿದರು.
ತರಬೇತಿಯ ಎರಡನೇ ದಿನ ಐಕಾಂತಿಕ ತಂಡದ ಸಂಪನ್ಮೂಲ ವ್ಯಕ್ತಿಗಳು ಮಣ್ಣಿನ ಮನೆ ಮಹತ್ವ ಮತ್ತು ಬಿದಿರಿನ ಬೇಸಾಯ, ಸಜೀವ ಮಣ್ಣು ಮತ್ತು ನೀರಿನ ನಿರ್ವಹಣೆ, ನಾಟಿ ಬೀಜ ಸಂಗ್ರಹಣೆ, ಸಂಸ್ಕರಣೆ ಮತ್ತು ಜೀವಂತ ಬೇಲಿಯ ಮಹತ್ವ ವಿಷಯಗಳ ಕುರಿತು ಮಾಹಿತಿಯನ್ನು ರೈತ ಬಾಂಧವರಿಗೆ ನೀಡಿದರು.ತರಬೇತಿಯ ಮೂರನೇ ದಿನ ಮಳೆಯಾಶ್ರಿತ ಕೃಷಿ ಮತ್ತು ಕೃಷಿಯಲ್ಲಿ ಚೌಕಾಬಾರ ವಿಧಾನ, ಕೀಟಗಳ ವಿಸ್ಮಯ ಲೋಕ, ಸಹಜ ಕೃಷಿಯಲ್ಲಿ ಜೇನಿನ ಪಾತ್ರ ಹಾಗೂ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ವಿಷಯಗಳ ಕುರಿತು ಐಕಾಂತಿಕ ತಂಡದ ಸಂಪನ್ಮೂಲ ವ್ಯಕ್ತಿಗಳು ವಿಸ್ತಾರವಾದ ಮಾಹಿತಿಯನ್ನು ರೈತ ಬಾಂಧವರಿಗೆ ನೀಡಿದರು.
ನಂತರ ರೈತರು ಗುಂಪು ಚರ್ಚೆಯಲ್ಲಿ ಭಾಗವಹಿಸಿ ವಿಷಯಗಳ ಕುರಿತು ತಮಗಿರುವ ಸಂದೇಹಗಳನ್ನು ವ್ಯಕ್ತಪಡಿಸಿ ಸೂಕ್ತ ಮಾಹಿತಿ ಪಡೆದರು.ನಂತರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕೇಂದ್ರದ ಮುಖ್ಯಸ್ಥರು ಹಾಗೂ ಉಪ ಕೃಷಿ ನಿರ್ದೇಶಕ ಕೆ. ನಾಗರಾಜ, ಐಕಾಂತಿಕ ತಂಡದ ಸಂಸ್ಥಾಪಕ ರಾಘವ ಮತ್ತು ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಹಾಗೂ ತರಬೇತಿ ಸಂಯೋಜಕರಾದ, ಕೃಷಿ ಅಧಿಕಾರಿ ಎಲ್. ಮಾಲತಿ, ಎಂ.ಬಿ. ಮಂಜುಳ, ತರಬೇತಿ ಕೇಂದ್ರ ಸಿಬ್ಬಂದಿ ಭಾಗವಹಿಸಿದ್ದರು.
ರೈತರು ತರಬೇತಿಯ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ತಮ್ಮ ಅನಿಸಿಕೆಗಳ ಮೂಲಕ ವ್ಯಕ್ತಪಡಿಸಿದರು. ನಂತರ ಉಪ ಕೃಷಿ ನಿರ್ದೇಶಕರು ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬರಲು ಕಾರಣರಾದ ಐಕಾಂತಿಕ ತಂಡ, ರೈತ ಬಾಂಧವರು ಮತ್ತು ಕೇಂದ್ರದ ಅಧಿಕಾರಿ, ಸಿಬ್ಬಂದಿಯನ್ನು ಅಭಿನಂದಿಸಿದರು.