ಧಾರವಾಡ:
ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಇಲ್ಲಿಯ ರೆಡ್ಡಿ ಸಹಕಾರಿ ಬ್ಯಾಂಕಿನ ಶತಮಾನೊತ್ಸವ, ಪ್ರಧಾನ ಕಚೇರಿ ನೂತನ ಕಟ್ಟಡದ ಉದ್ಘಾಟನೆ, ಬ್ಯಾಂಕಿನ ಸಂಸ್ಥಾಪಕರ ಪುತ್ಥಳಿ ಅನಾವರಣ ಅ. 13ರ ಸಂಜೆ 4ಕ್ಕೆ ಜರುಗಲಿದೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ, ಗ್ರಾಮೀಣ ಪ್ರದೇಶದಲ್ಲಿನ ಸಮಾಜದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಲೇವಾದೇವಿಗಾರ ಕಪಿಮುಷ್ಠಿಯಿಂದ ಪಾರು ಮಾಡುವ ಉದ್ದೇಶದಿಂದ 1914ರಲ್ಲಿ ಎಫ್.ಡಿ. ನಲವಡಿ, ಟಿ.ಟಿ. ಮುದರೆಡ್ಡಿ, ಆರ್.ವೈ. ಹುಲಕೋಟಿ ಹಾಗೂ ಸಮಾಜದ ಧುರೀಣರಿಂದ ಸೊಸೈಟಿ ರೀತಿಯಲ್ಲಿ ಈ ಬ್ಯಾಂಕ್ ಪ್ರಾರಂಭವಾಯಿತು. 1921ರಲ್ಲಿ ರಡ್ಡಿ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಕ್ ಎಂದು ಪರಿವರ್ತನೆಯಾಯಿತು. ಸಮಾಜದ ಹಿರಿಯರಾದ ಆರ್.ಎಂ. ಪಾಟೀಲ, ರಾವಬಹೂದ್ದೂರ ಡಿ.ಎಲ್. ಪಾಟೀಲ, ಲಿಂಗನಗೌಡ ಪಾಟೀಲ, ಎಲ್.ಜಿ. ಸಾವಕಾರ ಅಂತಹ ಅನೇಕರು ಬ್ಯಾಂಕ್ ಮುನ್ನಡೆಸಿದ್ದು, ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಬ್ಯಾಂಕ್ ರಾಜ್ಯದಲ್ಲಿ ವಿಸ್ತರಣೆ ಮಾಡಿ ಮತ್ತಷ್ಟು ಬಲ ತುಂಬಿದರು ಎಂದು ಸ್ಮರಣೆ ಮಾಡಿದರು.
ನಂತರ ಸಚಿವ ಎಚ್.ಕೆ. ಪಾಟೀಲ ಮಾರ್ಗದರ್ಶನದಲ್ಲಿ ಸಹಕಾರಿ ಬ್ಯಾಂಕ್ ಮುನ್ನಡೆಯುತ್ತಿದೆ. ರಡ್ಡಿ ಬ್ಯಾಂಕ್ 110 ವರ್ಷಗಳ ಸಂಭ್ರಮದಲ್ಲಿದ್ದು, ₹ 2400 ಶೇರು ಬಂಡವಾಳದಿಂದ ಶುರುವಾಗಿ ಸದ್ಯ ₹ 20.45 ಕೋಟಿ ಶೇರು ಬಂಡವಾಳ, ₹ 739 ಕೋಟಿ ದುಡಿಯುವ ಬಂಡವಾಳ, ₹ 639 ಕೋಟಿ ಠೇವಣಿ ಹೊಂದಿದ್ದು, 27 ಶಾಖೆ, 37 ಸಾವಿರ ಸದಸ್ಯರು ಒಳಗೊಂಡು 2023-24ನೇ ಸಾಲಿಗೆ ₹ 3.14 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.ಅ. 13ರ ಸಂಜೆ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಕಚೇರಿ ಉದ್ಘಾಟನೆ ಜತೆಗೆ ಬ್ಯಾಂಕ್ ಸಂಸ್ಥಾಪಕ ಎಫ್.ಟಿ. ನಲವಡಿ, ಬ್ಯಾಂಕಿನ ಅಭಿವೃದ್ಧಿ ಹರಿಕಾರ ಕೆ.ಎಚ್. ಪಾಟೀಲ ಅವರ ಪುತ್ಥಳಿ ಅನಾವರಣ ಮಾಡಲಿದ್ದು, ಸರ್ಕಾರದ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ನಂತರ ಸತ್ತೂರಿನ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶತಮಾನೋತ್ಸವಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಚಾಲನೆ ನೀಡಲಿದ್ದು, ವಿಪ ಸದಸ್ಯ ಬಸವರಾಜ ಹೊರಟ್ಟಿ ''''''''ಕೆ.ಎಚ್. ಪಾಟೀಲರ ವಿಚಾರಧಾರೆ'''''''' ಪುಸ್ತಕ ಲೋಕಾರ್ಪಣೆ ಮಾಡುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಹಾಯೋಗಿ ವೇಮನ ಭಾವಚಿತ್ರ, ಸಚಿವ ರಾಮಲಿಂಗಾರೆಡ್ಡಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರ, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.
ಎರೆಹೊಸಳ್ಳಿ ವೇಮನ ಮಠದ ವೇಮನಾನಂದ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕರು, ಸಚಿವರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳಾದ ಎಚ್.ಎಂ. ಕಮ್ಮಾರ, ಡಿ.ಟಿ. ಪಾಟೀಲ, ಬಿ.ಎಸ್. ಪರಮಶಿವಯ್ಯ, ಡಿ. ಕೃಷ್ಣ, ಜಯಕುಮಾರ, ಕೆ. ಕಾಳಪ್ಪ, ಪಿ. ಮಹೇಶ, ಪುಂಡಲೀಕ ಎನ್, ರಮೇಶ ಬಗಲಿ, ನಿಂಗರಾಜ ಬೆಣ್ಣಿ ಸೇರಿದಂತೆ ಅನೇಕರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ರಡ್ಡಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಕೆ. ನಾಯಿಕ, ನಿರ್ದೇಶಕ ವಿ.ಡಿ. ಕಾಮರೆಡ್ಡಿ, ಎ.ಜಿ. ಮುಳ್ಳೂರ, ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್.ನಾಗಲಾವಿ ಇದ್ದರು.