ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಆರಾಧ್ಯ ದೈವ ಶ್ರೀ ಸಿದ್ಧಾರೂಢ ಸ್ವಾಮಿಗಳ ಕಥಾಮೃತದ ಶತಮಾನೋತ್ಸವ ಆದ ಹಿನ್ನೆಲೆಯಲ್ಲಿ ಈ ಗ್ರಂಥದ ಮೆರವಣಿಗೆ ಹಾಗೂ ಶೋಭಾ ಯಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಗ್ರಂಥದ ಶತಮಾನೋತ್ಸವ ಹಾಗೂ ಶಿವರಾತ್ರಿ ಮಹೋತ್ಸವಕ್ಕೆ ಮಠದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಅಜ್ಜನ ಜಾತ್ರೆ ಈ ಸಲ ಹಲವು ವಿಶೇಷತೆಯಿಂದ ಕೂಡಿದಂತಾಗಿದೆ.
ಚಾಲನೆ: ಐರಣಿಯ ಮುಪ್ಪಿನಾರ್ಯ ಹೊಳೆಮಠದ ಜಗದ್ಗುರು ಡಾ. ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಕಥಾಮೃತದ ಭವ್ಯ ಮೆರವಣಿಗೆಗೆ ಚಾಲನೆ ನೀಡುವರು.
ಮೆರವಣಿಗೆಯು ಜಡಿಸಿದ್ದೇಶ್ವರ ಮಠ, ಗಣೇಶಪೇಟೆ, ಮರಾಠಾಗಲ್ಲಿ, ಕೊಪ್ಪೀಕರ ರಸ್ತೆ, ಮಹಾನಗರ ಪಾಲಿಕೆ, ಉಪನಗರ ಪೊಲೀಸ್ ಠಾಣೆ, ದಾಜಿಬಾನ ಪೇಟೆ, ಮೈಸೂರು ಸ್ಟೋರ್ಸ್, ಸರಾಫ ಗಟ್ಟಿ, ಬಮ್ಮಾಪುರ ಓಣಿ, ನ್ಯೂ ಇಂಗ್ಲೀಷ್ ಸ್ಕೂಲ್, ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಇಂಡಿಪಂಪ್ ವೃತ್ತ, ಮಹಾದ್ವಾರ ಮೂಲಕ ಹಾಯ್ದು ಶ್ರೀಮಠ ತಲುಪಲಿದೆಬೃಹತ್ ವೇದಿಕೆ
ಹತ್ತು ದಿನಗಳ ಕಾಲ ನಡೆಯಲಿರುವ ಗ್ರಂಥ ಶತಮಾನೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಬರುವ ಭಕ್ತಾಧಿಗಳಿಗೆ ಅನ್ನಪ್ರಸಾದದ ವ್ಯವಸ್ಥೆಗೆ ಯಾವುದೇ ಬಗೆಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹಳ್ಳಿಗಳಿಂದ ಈಗಲೇ ಭಕ್ತರು ಆಗಮಿಸಿ ಸ್ವಯಂಪ್ರೇರಿತವಾಗಿ ಸೇವೆಯಲ್ಲಿ ನಿರತರಾಗಿರುವುದು ವಿಶೇಷ.