ಎಸ್‌ಟಿಗೆ ಸೇರಿಸಲು ಕೇಂದ್ರದ ಒತ್ತಡ ಹೇರಲು ನಿರ್ಧಾರ: ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಸ್ವಾಮೀಜಿ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

೧೨ನೇ ಶತಮಾನದ ಶಿವಶರಣರಿಗೆ ತನ್ನ ದೋಣಿ ಮೂಲಕ ಅನುಭವ ಮಂಟಪಕ್ಕೆ ಸಾಗಿಸುವ ಕಾಯಕ ಮಾಡುತ್ತಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಹರಿತವಾದ ವಚನಗಳ ಮೂಲಕ ಮೂಢನಂಬಿಕೆ, ಕಂದಾಚಾರ ತೊಲಗಿಸಲು ಶ್ರಮಿಸಿದ ಕ್ರಾಂತಿಕಾರಿಯಾಗಿದ್ದಾರೆ. ಅವರ ಅನುಯಾಯಿ ಸಮಾಜವಾದ ಗಂಗಾಮತ ಸಮಾಜವು ೩೯ ಪರ್ಯಾಯ ಪದಗಳಿಂದ ರಾಜ್ಯಾದ್ಯಂತ ಹರಿದು ಹಂಚಿಹೋಗಿದ್ದು, ಅವರೆಲ್ಲರನ್ನು ಹಾವೇರಿಯ ಜಿಲ್ಲೆಯ ಸುಕ್ಷೇತ್ರ ಟಿ.ನರಸೀಪುರದ ಅವರ ಐಕ್ಯಸ್ಥಳದಲ್ಲಿನ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಪ್ರತಿವರ್ಷ ಅವರನ್ನು ಸ್ಮರಿಸುವ ಕೆಲಸ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಕಾರಟಗಿ

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ಸುಮಾರು ೩೦-೩೫ ಲಕ್ಷ ಸಂಖ್ಯೆಯಲ್ಲಿರುವ ರಾಜ್ಯದ ಅಸಂಘಟಿತ ಸಮಾಜವಾದ ಗಂಗಾಮತ-ಕೋಲಿ-ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಜ.ಶಾಂತಭೀಷ್ಮ ಚೌಡಯ್ಯ ಶ್ರೀ ಹೇಳಿದರು.

ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಗುರುವಾರ ನಡೆದ ಸಮಾಜದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯ ಕಂಚಾರಗಟ್ಟಿಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ೨೦೨೪ರ ಜನವರಿ ೧೪ ಮತ್ತು ೧೫ರಂದು ನಡೆಯಲಿರುವ ೬ನೇ ಶರಣ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಉತ್ಸವದಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಅಲ್ಲಿ ಬರುವ ಕೇಂದ್ರ ಸಚಿವರಾದಿಯಾಗಿ ಸಚಿವರು, ವಿರೋಧ ಪಕ್ಷದ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಸಮ್ಮುಖದಲ್ಲಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ. ಅದಕ್ಕಾಗಿ ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಸಮಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹೇಳಿದರು.

೧೨ನೇ ಶತಮಾನದ ಶಿವಶರಣರಿಗೆ ತನ್ನ ದೋಣಿ ಮೂಲಕ ಅನುಭವ ಮಂಟಪಕ್ಕೆ ಸಾಗಿಸುವ ಕಾಯಕ ಮಾಡುತ್ತಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಹರಿತವಾದ ವಚನಗಳ ಮೂಲಕ ಮೂಢನಂಬಿಕೆ, ಕಂದಾಚಾರ ತೊಲಗಿಸಲು ಶ್ರಮಿಸಿದ ಕ್ರಾಂತಿಕಾರಿಯಾಗಿದ್ದಾರೆ. ಅವರ ಅನುಯಾಯಿ ಸಮಾಜವಾದ ಗಂಗಾಮತ ಸಮಾಜವು ೩೯ ಪರ್ಯಾಯ ಪದಗಳಿಂದ ರಾಜ್ಯಾದ್ಯಂತ ಹರಿದು ಹಂಚಿಹೋಗಿದ್ದು, ಅವರೆಲ್ಲರನ್ನು ಹಾವೇರಿಯ ಜಿಲ್ಲೆಯ ಸುಕ್ಷೇತ್ರ ಟಿ.ನರಸೀಪುರದ ಅವರ ಐಕ್ಯಸ್ಥಳದಲ್ಲಿನ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಪ್ರತಿವರ್ಷ ಅವರನ್ನು ಸ್ಮರಿಸುವ ಕೆಲಸ ನಡೆಯುತ್ತಿದೆ ಎಂದರು.

ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಜ.೧೪, ೧೫ರಂದು ನಿಜಶರಣ ಅಂಬಿಗರ ಚೌಡಯ್ಯನವರ ೬ನೇ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೋತ್ಸವ, ಚೌಡಯ್ಯನವರ ೯೦೪ನೇ ಜಯಂತಿ, ಲಿಂ.ಶಾಂತಮುನಿ ಶ್ರೀ ೮ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ ೮ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಹೀಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು ವಿವರಿಸಿದರು.

ಗುರುಪೀಠದ ಉಪಾಧ್ಯಕ್ಷ ಮಂಜುನಾಥ್ ಪುಟಗನಳ್ಳಿ, ತಾಯಪ್ಪ ಕೋಟ್ಯಾಳ, ಗಂಗಾವತಿ ತಾಲೂಕಾಧ್ಯಕ್ಷ ಈ.ಧನರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಅಧ್ಯಕ್ಷ ವೈ.ಯಂಕೋಬಣ್ಣ, ವಾನಭದ್ರಪ್ಪ ವಾಲೇಕಾರ್, ಶಿವರಾಮಪ್ಪ ಬಾಗೋಡಿ, ಶರಣಪ್ ರಾಮಸಾಗರ, ಭೈರಿ ದೊಡ್ಡಬಸಪ್ಪ, ಈರಪ್ಪ ಅಗಸಿಮುಂದಲ, ಕೊಮಾರೆಪ್ಪ ಬಾವಿಕಟ್ಟಿ, ಸಣ್ಣ ಅಯ್ಯಪ್ಪ ಗೂಳಿ, ಫಕೀರಪ್ಪ ಕೊಂಡಿ, ರಾಮಣ್ಣ ದಮ್ಮೂರು, ಸುರೇಶ ಗಂಗಲ್, ವಿರುಪಣ್ಣ ಗೋಮರ್ಶಿ, ಗಣೇಶ್ ವಾಲೇಕಾರ್, ರವಿ ಮುಸ್ಟೂರು, ಶಿವಪುತ್ರಪ್ಪ, ಹನುಮೇಶಪ್ಪ ಕುಂಟೋಜಿ, ಕನಕಪ್ಪ ಸೊಂಡೆ, ಚಂದ್ರಪ್ಪ, ಮರಿಯಪ್ಪ ಡಾಣಿ, ಮಹಾದೇವಪ್ಪ ಮೋಟಿ, ಸಿದ್ದು ಪುಟಗಿ ಇನ್ನಿತರರು ಇದ್ದರು. ಶರಣಪ್ಪ ಕಾಯಿಗಡ್ಡಿ, ಸಿದ್ದು ಪುಟಗಿ ಕಾರ್ಯಕ್ರಮ ನಿರ್ವಹಿಸಿದರು.

Share this article