ಟಾಯ್ಸ್‌ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಜಟಾಪಟಿ

KannadaprabhaNewsNetwork |  
Published : Nov 03, 2026, 01:45 AM IST
ಪೊಟೋ೨ಸಿಪಿಟಿ೩: ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟಾಯ್ಸ್ ಪಾರ್ಕ್ ಜಾಗವನ್ನು ಈ ಹಿಂದೆ ಪರಿಶೀಲಿಸಿದ್ದ ಸಂಸದ ಡಾ.ಸಿನ್.ಮಂಜುನಾಥ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್. | Kannada Prabha

ಸಾರಾಂಶ

ಚನ್ನಪಟ್ಟಣ: ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆಗಳ ಉದ್ಯಮಕ್ಕೆ ಚೈತನ್ಯ ನೀಡುವ ಉದ್ದೇಶದಿಂದ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟಾಯ್ಸ್ ಪಾರ್ಕ್ ಜಾಗದ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಮಸ್ಯೆ ತಲೆದೋರಿದೆ

ಚನ್ನಪಟ್ಟಣ: ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆಗಳ ಉದ್ಯಮಕ್ಕೆ ಚೈತನ್ಯ ನೀಡುವ ಉದ್ದೇಶದಿಂದ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟಾಯ್ಸ್ ಪಾರ್ಕ್ ಜಾಗದ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಮಸ್ಯೆ ತಲೆದೋರಿದೆ.

ಟಾಯ್ಸ್ ಪಾರ್ಕ್ ನಿರ್ಮಾಣಕ್ಕೆ ಗುರುತಿಸಿರುವ ಜಾಗವನ್ನು ಉಚಿತವಾಗಿ ನೀಡುವಂತೆ ಹೆದ್ದಾರಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದ್ದರೆ, ಗುರುತಿಸಿರುವ ಜಾಗಕ್ಕೆ ಮಾರ್ಗಸೂಚಿಯಂತೆ ದರ ಪಾವತಿಸುವಂತೆ ರಾಜ್ಯ ಸರ್ಕಾರ ತಿಳಿಸಿರುವುದರಿಂದ ಹಗ್ಗಜಗ್ಗಾಟ ನಡೆದಿದೆ.

ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಟಾಯ್ಸ್‌ ಪಾರ್ಕ್ ಮತ್ತು ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರೇಷ್ಮೆಯ ಬಗ್ಗೆ ಪ್ರವಾಸಿಗರಲ್ಲಿ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಸಿಲ್ಸ್‌ ಮ್ಯೂಜಿಯಂ ಹಾಗೂ ಎಕ್ಸ್‌ಪ್ರೆಸ್‌ ವೇನ ಪ್ರಯಾಣಿಕರಿಗೆ ಅಗತ್ಯವಿರುವ ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ಇ-ಚಾರ್ಜರ್ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನ ಸರ್ವೀಸ್ ರಸ್ತೆಯಲ್ಲಿ ೮.೫ ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಈ ಸ್ಥಳದಲ್ಲಿ ಎನ್‌ಎಚ್‌ಎನಿಂದ ಟಾಯ್ಸ್‌ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.

ಈ ಸಂಬಂಧ ಕೆಲ ತಿಂಗಳ ಹಿಂದೆ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳ ಜೊತೆಗೂಡಿ ಯೋಜನೆಗೆ ಉದ್ದೇಶಿಸಿರುವ ಜಾಗದ ಪರಿಶೀಲನೆ ನಡೆಸಿದ್ದರು. ಈ ಜಾಗವನ್ನು ಎನ್‌ಎಚ್‌ಎಐಗೆ ರಾಜ್ಯ ಸರ್ಕಾರ ಉಚಿತವಾಗಿ ನೀಡಿದರೆ ಇಲ್ಲಿ ಪ್ರಾಧಿಕಾರದಿಂದ ಟಾಯ್ಸ್‌ ಪಾರ್ಕ್ ಮತ್ತು ಸಿಲ್ಸ್‌ ಮ್ಯೂಜಿಯಂ ಸ್ಥಾಪನೆ ಮಾಡುವುದಾಗಿ ತಿಳಿಸಿತ್ತು. ಈ ಭೂಮಿಯನ್ನು ಉಚಿತವಾಗಿ ಎನ್‌ಎಚ್‌ಎಐಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಒಪ್ಪುತ್ತಿಲ್ಲ.

ಎನ್‌ಎಚ್‌ಎಐ ಜಾಗವನ್ನು ಉಚಿತವಾಗಿ ನೀಡಿ ನಾವು ಟಾಯ್ಸ್‌ ಪಾರ್ಕ್ ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದರೆ. ರಾಜ್ಯ ಸರ್ಕಾರ ಈ ಜಾಗವನ್ನು ಉಚಿತವಾಗಿ ನೀಡಲು ಬರುವುದಿಲ್ಲ ಎನ್‌ಎಚ್‌ಎಐ ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ದರದ ಅನ್ವಯ ಹಣ ನೀಡಿದರೆ ಮಾತ್ರ ಭೂಮಿ ಕೊಡುತ್ತೇವೆ ಎಂದು ಹೇಳುತ್ತಿದೆ.

ಕೊರೊನಾ, ಎಕ್ಸ್‌ಪ್ರೆಸ್ ವೇ ಸಂಕಷ್ಟ:

ಚನ್ನಪಟ್ಟಣದ ಬೊಂಬೆಗಳು ವಿಶ್ವವಿಖ್ಯಾತಿ ಪಡೆದಿವೆ. ಇಲ್ಲಿ ತಯಾರಾದ ಬೊಂಬೆಗಳು ಹಾಗೂ ಮರದ ಆಟಿಕೆಗಳು ಅಮೇರಿಕಾ, ಯು.ಕೆ. ಸೇರಿದಂತೆ ಹಲವು ಯೂರೋಪ್ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಆದರೆ, ಕೊರೋನಾ ಅವಧಿಯ ನಂತರ ಚನ್ನಪಟ್ಟಣದ ಬೊಂಬೆಗಳ ಉದ್ಯಮ ಕೊಂಚ ಸೊರಗಿತ್ತು. ಆ ನಂತರ ಬೆಂ-ಮೈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ನಂತರ ಇನ್ನಷ್ಟು ಇಳಿಕೆ ಕಂಡಿದೆ.

ಬೆಂ-ಮೈ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವ ವೇಳೆ ರಾಮನಗರ ಮತ್ತು ಚನ್ನಪಟ್ಟಣಕ್ಕೆ ಬೈಪಾಸ್ ನಿರ್ಮಾಣ ಮಾಡಿದ ಬಳಿಕ ಹೆಚ್ಚಿನ ವಾಹನಗಳು ಚನ್ನಪಟ್ಟಣಕ್ಕೆ ಬಾರದೆ ನೇರವಾಗಿ ಬೈಪಾಸ್‌ನಲ್ಲೇ ಸಂಚರಿಸುತ್ತಿರುವುದರಿಂದ ನಗರದ ಮೂಲಕ ಹಾದುಹೋಗುತ್ತಿದ್ದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಇದರಿಂದಾಗಿ ಚನ್ನಪಟ್ಟಣದ ಸಾಂಪ್ರದಾಯಿಕ ಕರಕುಶಲ ಉದ್ಯಮಕ್ಕೆ ಹೊಡೆತ ಬಿದಿದ್ದು, ಬೊಂಬೆಗಳ ಮಾರಾಟ ಅರ್ಧದಷ್ಟು ಕುಸಿತ ಕಂಡಿದೆ.

ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ ಕರಕುಶಲ ಕರ್ಮಿಗಳು ಸಿದ್ದಪಡಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡಲು ಅನುಕೂಲವಾಗುವಂತೆ ಎನ್‌ಎಚ್‌ಎಐ ಬದಿಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ ಮಾಡುವುದರಿಂದ ಕರಕುಶಲ ಉದ್ಯಮಕ್ಕೆ ಉತ್ತೇಜನ ಸಿಗಲಿದೆ. ಇದರಿಂದಾಗಿ ೩ ಸಾವಿರಕ್ಕೂ ಹೆಚ್ಚು ಚನ್ನಪಟ್ಟಣದ ಸಾಂಪ್ರದಾಯಿಕ ಕರಕುಶಲ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಆದರೀಗ ಜಾಗದ ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಜಟಾಪಟಿಯಿಂದ ಯೋಜನೆ ವಿಳಂಬವಾಗಿದೆ.

ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಪ್ರವಾಸಿಗರು ಒಂದೇ ಸ್ಥಳದಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ವೀಕ್ಷಿಸಿ, ಖರೀದಿಸಲು ಅವಕಾಶ ಕಲ್ಪಿಸಿದರೆ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಬಹುದು. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ಸಾಧ್ಯತೆಯಿದೆ.

ಕೋಟ್

ಬೊಂಬೆ ಉದ್ಯಮ ಮತ್ತು ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಚನ್ನಪಟ್ಟಣದ ಬಳಿ ೮.೫ ಎಕರೆ ಜಾಗವನ್ನು ಗುರುತಿಸಲಾಗಿದ್ದು, ಭೂಮಿಯನ್ನು ಉಚಿತವಾಗಿ ನೀಡಿದರೆ, ಟಾಯ್ಸ್ಪಾರ್ಕ್ ಮತ್ತು ಸಿಲ್ಕ್ಪಾರ್ಕ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಸಿದ್ದವಿತ್ತು. ಆದರೆ, ಭೂಮಿಯನ್ನು ಹಸ್ತಾಂತರ ಮಾಡಲು ೨ ಕೋಟಿ ರೂ. ಹಣ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದು, ಈ ಸಂಬಂಧ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತೀನ್‌ಗಡ್ಕರಿ ಅವರನ್ನು ಭೇಟಿ ಮಾಡಿ ಅವರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ.

-ಡಾ.ಸಿ.ಎನ್.ಮಂಜುನಾಥ್, ಸಂಸದರು

ಪೊಟೋ೨ಸಿಪಿಟಿ೩:

ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟಾಯ್ಸ್ ಪಾರ್ಕ್ ಜಾಗವನ್ನು ಹಿಂದೆ ಪರಿಶೀಲಿಸಿದ್ದ ಸಂಸದ ಡಾ.ಸಿನ್.ಮಂಜುನಾಥ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು