ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಶ್ರೀ ರಂಗನಾಥಸ್ವಾಮಿ ಮೈದಾನದಲ್ಲಿ ತಾಲೂಕು ಆಡಳಿತಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ಸಂಘಟನೆಗಳ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿ, ಕುವೆಂಪು ಅವರಿಗೂ ಶ್ರೀರಂಗಪಟ್ಟಣಕ್ಕೂ ನಂಟು ಇದ್ದು, ಅವರು 1935ರ ಜೂನ್ 13ರಂದು ಇಲ್ಲಿ ಮಾಡಿದ್ದ ‘ಆತ್ಮ ಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪ್ರಸಿದ್ಧ ಭಾಷಣವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ ಎಂದರು.
ತಾಲೂಕಿನ ಪ್ರಸಿದ್ಧ ವ್ಯಕ್ತಿಗಳಾದ ದಿ.ಡಾ.ಸಿ.ಬಂದೀಗೌಡ, ದಿ.ಪ್ರೊ.ಎಂ.ಕರಿಮುದ್ದೀನ್ ಹಾಗೂ ಇತರರು ಕುವೆಂಪು ಅವರ ಪ್ರಿಯ ಶಿಷ್ಯರು ಎಂಬುದು ಹೆಮ್ಮೆಯ ಸಂಗತಿ. ಹೀಗಾಗಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ನಿವೇಶನ ಗುರುತಿಸಿ ಕುವೆಂಪು ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಕುವೆಂಪು ಅವರ ಕಾವ್ಯಗಳು ನಾಡಗೀತೆ ಹಾಗೂ ರೈತ ಗೀತೆಗಳಾಗಿವೆ, ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ಧತಿಯಿಂದ ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಿವೆ. ಜಾತಿ, ಧರ್ಮ, ಮತ-ಪಂಥಗಳನ್ನು ಮೀರಿದ ‘ವಿಶ್ವಮಾನವ’ ಸಂದೇಶ ಸಾರಿದ ಮೇರು ವ್ಯಕ್ತಿಯ ಹೆಸರಿನಲ್ಲಿ ಭವನ ನಿರ್ಮಿಸಬೇಕಿದೆ. ಇದಕ್ಕಾಗಿ ತಾಲೂಕಿನ ಕೇಂದ್ರದಲ್ಲಿ 20 ಗುಂಟೆ ಜಾಗ ಮಂಜೂರು ಮಾಡಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸುಂದರ ಕುವೆಂಪು ಭವನ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ ಕನ್ನಡ ಪರ ಸಂಘಟನೆಗಳ ಮುಖಂಡರಾದ ಚಂದಗಲು ಶಂಕರ್, ಸ್ವಾಮೀಗೌಡ, ಶಂಕರ್‌ಬಾಬು, ಕೆ.ಟಿ ರಂಗಪ್ಪ, ಪ್ರಿಯಾ ರಮೇಶ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.