ಕೇಂದ್ರ, ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಕಮೀಷನ್ ಹಣ ಹೆಚ್ಚಳ: ಕೆ.ಕೃಷ್ಣಪ್ಪ

KannadaprabhaNewsNetwork |  
Published : Oct 08, 2026, 01:45 AM IST
6ಕೆಎಂಎನ್ ಡಿ18 | Kannada Prabha

ಸಾರಾಂಶ

ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಬಾಕಿಯಿರುವ ಕಮೀಷನ್ ಹಣವನ್ನು ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಈ ವಿಚಾರವಾಗಿ ಇತ್ತೀಚೆಗೆ ಆಹಾರ ಸಚಿವ ರಿಜ್ವಾನ್ ಹರ್ಷದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಸಚಿವರು ಕೂಡ ಒಂದು ವಾರದೊಳಗೆ ಕಮೀಷನ್ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಮತ್ತು ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಕಮೀಷನ್ ಹಣ ಹೆಚ್ಚಳ ಮಾಡಬೇಕು ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪಡಿತರ ವಿತರಕರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ 25 ರು. ಮತ್ತು ರಾಜ್ಯ ಸರ್ಕಾರ 25 ರು. ಗಳನ್ನು ಪಡಿತರ ವಿತರಕರಿಗೆ ಕಮೀಷನ್ ಹೆಚ್ಚಳ ಮಾಡಬೇಕು. ಹೀಗಾಗಿ ಶೀಘ್ರ ದೆಹಲಿಯಲ್ಲಿ ಕೇಂದ್ರ ಆಹಾರ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಸಾವಿರಾರು ಮಂದಿ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಬಾಕಿಯಿರುವ ಕಮೀಷನ್ ಹಣವನ್ನು ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಈ ವಿಚಾರವಾಗಿ ಇತ್ತೀಚೆಗೆ ಆಹಾರ ಸಚಿವ ರಿಜ್ವಾನ್ ಹರ್ಷದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಸಚಿವರು ಕೂಡ ಒಂದು ವಾರದೊಳಗೆ ಕಮೀಷನ್ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ಪಡಿತರ ವಿತರಣೆ ಕೇಂದ್ರದ ಜೊತೆಗೆ ಉಪ ಕೇಂದ್ರಗಳನ್ನು ತೆರೆದು ಪಡಿತರ ವಿತರಿಸುವಂತೆ ಕೆಲವು ರಾಜಕಾರಣಿಗಳು ಒತ್ತಡ ಹೇರುತ್ತಿರುವುದು ಸರಿಯಲ್ಲ. ಪಡಿತರ ವಿತರಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ, ಪಡಿತರ ಕೇಂದ್ರಗಳನ್ನು ಬಿಟ್ಟು ಬೇರೆ ಗ್ರಾಮಗಳ ಉಪ ಕೇಂದ್ರಗಳಿಗೆ ಆಹಾರ ಪದಾರ್ಥ ಸರಬರಾಜು ಮಾಡುವುದಿಲ್ಲ. ಇದರ ಜೊತೆಗೆ ಇಂಟರ್ ನೆಟ್, ತೂಕದ ಯಂತ್ರ, ಕಂಪ್ಯೂಟರ್ ಸೇರಿದಂತೆ ಯಂತ್ರಗಳನ್ನು ಕೊಂಡೋಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ 500ಕ್ಕಿಂತ ಹೆಚ್ಚಿನ ಕಾರ್ಡ್ ಗಳಿದ್ದರೇ ಅಲ್ಲಿಯೇ ಮತ್ತೊಂದು ಪಡಿತರ ಕೇಂದ್ರ ತೆರೆಯುವಂತೆ ತಿಳಿಸಿದರು.

ಉಪಕೇಂದ್ರ ತೆರೆಯುವುದು ಅವೈಜ್ಞಾನಿಕ:

ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿ ಉಪ ಕೇಂದ್ರ ತೆರೆದು ಪಡಿತರ ವಿತರಣೆ ಮಾಡುವ ಕ್ರಮ ಅವೈಜ್ಞಾನಿಕವಾಗಿದೆ. ಸರ್ಕಾರಕ್ಕೆ ಆಸಕ್ತಿ ಇದ್ದರೆ ಕನಿಷ್ಠ ಒಂದು ಸಾವಿರ ಕಾರ್ಡ್‌ಗಳು ಇದ್ದರೆ ಹೊಸದಾಗಿ ಪಡಿತರ ವಿತರಣಾ ಕೇಂದ್ರ ತೆರೆಯಲು ನಮ್ಮ ಆಕ್ಷೇಪಣೆ ಇಲ್ಲ ಎಂದರು.

ಪಡಿತರ ಸಗಟು ಕೇಂದ್ರಗಳನ್ನು ಪ್ರಾಧಿಕಾರ ನಿಗದಿಪಡಿಸಿದ ಅಧಿಕೃತ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ಉಪ ಕೇಂದ್ರಗಳನ್ನು ತೆರೆದು ಪಡಿತರ ವಿತರಣೆ ಮಾಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ. ಅಲ್ಲದೆ ಅವ್ಯವಹಾರಗಳಿಗೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ಸಭೆಯಲ್ಲಿ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ವಿ.ಕೆ.ನಾಗೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಖಂಡ್ರೆ
ಮೀನು ಹಿಡಿಯುವ ಕಾರ್ಯ ಟೆಂಡರ್ ಮೂಲಕ ನಡೆಸಿ