ಡಿಕೆಶಿ ಸ್ಟಿಂಗ್‌ ಪಿತಾಮಹ: ಎಚ್ಡಿಕೆ

KannadaprabhaNewsNetwork |  
Published : Oct 08, 2026, 01:45 AM IST
ಎಚ್ಡಿಕೆ | Kannada Prabha

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ಟಿಂಗ್‌ ಆಪರೇಷನ್ ಪಿತಾಮಹ. ಅವರು ಮುಖ್ಯಮಂತ್ರಿ ಆಗಿದ್ದೇ ಸ್ಟಿಂಗ್‌ ಆಪರೇಷನ್‌ನಿಂದ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ಟಿಂಗ್‌ ಆಪರೇಷನ್ ಪಿತಾಮಹ. ಅವರು ಮುಖ್ಯಮಂತ್ರಿ ಆಗಿದ್ದೇ ಸ್ಟಿಂಗ್‌ ಆಪರೇಷನ್‌ನಿಂದ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿನ ಕೆಲವರು ನನ್ನೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿ ಸಚಿವ ಸಂಪುಟ ಸಭೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರಿಗೆ ಈಗ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದರು.

ಸ್ಟಿಂಗ್ ಆಪರೇಷನ್‌ ಮಾಡಿ ರಮೇಶ್ ಜಾರಕಿಹೊಳಿ, ಕೆ.ಎನ್‌.ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ? ಇಂಥ ವಿಷಯದಲ್ಲಿ ಅವರು ದೊಡ್ಡ ಅನುಭವಸ್ಥರು. ಅವರೇ ಎಲ್ಲವನ್ನೂ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ಈಗ ನಮ್ಮ ಮೇಲೆಯೇ ಅವರು ಆರೋಪ ಮಾಡುವುದು ಹಾಸ್ಯಾಸ್ಪದ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸ್ಟಿಂಗ್ ಆಪರೇಷನ್‌ ನಿಪುಣ, ಸ್ಟಿಂಗ್‌ ಆಪರೇಷನ್ ಪಿತಾಮಹ ಅವರು. ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರು ಎಲ್ಲಾ ಸಚಿವರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

ಅಂತೂ ಇಂತೂ ಸಿಎಂ ಆಗಿರುವ ಈ ವ್ಯಕ್ತಿ ಜನರ ಕೆಲಸ ಮಾಡುತ್ತಿಲ್ಲ. ಬದಲಿಗೆ ಬೆಳಗ್ಗೆಯಿಂದ ಸಂಜೆವರೆಗೂ ಸ್ಟಿಂಗ್ ಆಪರೇಷನ್ ಮಾಡಿಕೊಂಡು ಕೂತಿರುತ್ತಾರೆ ಎಂದರು.

ಈ ಹಿಂದೆ ಎಚ್‌.ಡಿ.ರೇವಣ್ಣನ ಮಗನ ಬಗ್ಗೆ ಈ ರೀತಿ ಮಾಡಿಸಿದ್ದರಲ್ವಾ? ಅದರ ಬಗ್ಗೆ ಏನೋ ಮಾತನಾಡಿದ್ದರಲ್ವಾ? ಸ್ಟಿಂಗ್‌ ಆಪರೇಷನ್‌ ಬಗ್ಗೆ ಕೆ.ಎನ್‌.ರಾಜಣ್ಣ ಕಲಾಪದಲ್ಲಿ ಏನು ಹೇಳಿದ್ದಾರೆ? ಸಚಿವ ಸಂಪುಟದ ಮಂತ್ರಿಯೊಬ್ಬರು ಇದನ್ನು ಮಾಡಿದ್ದಾರೆ ಎಂದು ಹೇಳಿದ್ದರು. ಬಳಿಕ ರಾಜಣ್ಣ ಅವರ ಬಾಯ್ಮುಚ್ಚಿಸಿದರು ಎಂದು ಹರಿಹಾಯ್ದರು.

ದೇವೇಗೌಡರ ಕುಟುಂಬ ಮುಗಿಸಲು ಮುಖ್ಯಮಂತ್ರಿ ಇಂಥದ್ದೇ ಸಂಚು ರೂಪಿಸಿದ್ದರು. ತಡಿಯಪ್ಪಾ ಒಬ್ಬರನ್ನು ಕರೆಸಿ ಮಾಡೋಷ್ಟೊತ್ತಿಗೆ ಸಾಕಾಗಿದೆ ಎಂದು ಹೇಳಿದವರು ಯಾರಪ್ಪಾ? ಈಗ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಈ ಮುಖ್ಯಮಂತ್ರಿ ಅದೇ ಕುತಂತ್ರ ಬಳಸುತ್ತಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

ಕೆಲಸದ ಬದಲು ಸ್ಟಿಂಗ್‌ ಆಪರೇಷನ್‌:ಅವರ ಪಕ್ಷದ ಶಾಸಕರೇ ಬಂದು ನನಗೆ ಹೇಳುತ್ತಾರೆ. ಈಗ ಅದೇ ವಿಷಯ ಮಾಧ್ಯಮಗಳಲ್ಲಿ ಬರುತ್ತಿದೆ. ಒಂದು ವೇಳೆ ನಾನು ಸ್ಟಿಂಗ್ ಮಾಡಿದರೆ ಕ್ರಮ ಕೈಗೊಳ್ಳಲಿ. ಇವರ ಬಳಿ ಎಸ್ಐಟಿ ಇದೆಯಲ್ಲವೇ? ಅದಕ್ಕೆ 35 ಲಕ್ಷ ರು. ಬಹುಮಾನ ಬೇರೆ ಕೊಟ್ಟಿದ್ದಾರೆ. ತನಿಖೆ ಮಾಡಿಸಲಿ. ಬೇಡ ಅಂದವರು ಯಾರು? ವಿಧಾನಸಭೆಯಲ್ಲಿ ರಾಜಣ್ಣ ಏನು ಹೇಳಿದ್ದರು? ನನ್ನದಷ್ಟೇ ಅಲ್ಲ, ಇನ್ನೂ ನಲವತ್ತು ಜನರ ಸ್ಟಿಂಗ್ ಮಾಡಿಸಿದ್ದಾರೆ ಎಂದು ಹೇಳಿರಲಿಲ್ಲವೇ? ಅವರ ಹೇಳಿಕೆ ಏನಾಯಿತು? ನಂತರ ಅವರ ಬಾಯಿ ಮುಚ್ಚಿಸಿದರು ಎಂದು ವಾಗ್ದಾಳಿ ನಡೆಸಿದರು.

ಸ್ಟಿಂಗ್‌ ಬ್ಲ್ಯಾಕ್‌ಮೇಲ್ ಚರಿತ್ರೆ ಕಾಂಗ್ರೆಸ್‌ದು: ಬಿವೈವಿ

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಯಾರದ್ದು ಎಂಬುದು ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರನ್ನೇ ಕೇಳಿದರೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.ಗದಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರತಿಪಕ್ಷಗಳು ಸರ್ಕಾರದ ಪ್ರಭಾವಿ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮುಖಾಂತರ ರಹಸ್ಯ ಕಾರ್ಯಚರಣೆ ನಡೆಸಲು ಮುಂದಾಗಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಟಿಂಗ್ ಮಾಡಿಸಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ ಅವರದ್ದು. ಈ ಕುರಿತು ಏನು, ಯಾರದು ಎಂಬುದನ್ನು ಹೇಳುವುದಕ್ಕೆ ನಾನು ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕೆಲವು ದಿನಗಳ ಹಿಂದೆ ರಾಜ್ಯದ ಪ್ರಭಾವಿ ನಾಯಕರೊಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕರೆಸಿಕೊಂಡು, ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಮಾತನಾಡಿದ್ದಾರೆ. ಇಷ್ಟು ದಿನ ಶೇ.75 ಕೊಡುತ್ತಿದ್ದೀರಿ, ಇನ್ನು ಮುಂದೆ ಶೇ.150 ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಷ್ಟು ನೀಡಲು ಸಾಧ್ಯವಿಲ್ಲ ಎಂದ ಉದ್ಯಮಿಗೆ, ಹಾಗಿದ್ದರೆ ರಾಜ್ಯ ಬಿಟ್ಟು ತೊಲಗಿ ಎಂದು ಬೆದರಿಕೆ ಹಾಕಿದ್ದಾರೆ. ಕಮಿಷನ್ ದರವನ್ನು ಶೇ. 75ರಿಂದ ಶೇ.150ಕ್ಕೆ ದಿಢೀರ್ ಹೆಚ್ಚಿಸಿದ ಆ ಪ್ರಭಾವಿ ನಾಯಕ ಯಾರು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಸ್ಟಿಂಗ್ ಆಪರೇಷನ್ ಭಯದಿಂದಾಗಿ ಲಂಚ ಪಡೆಯಲು ಹೊಸ ದಾರಿ ಕಂಡುಕೊಳ್ಳಲಾಗುತ್ತಿದೆ. ಈ ಸ್ಟಿಂಗ್ ಏಜೆನ್ಸಿಗಳು ಯಾವುವು ಎಂಬುದನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಸಬೇಕು. ಇದನ್ನು ನಾನಷ್ಟೇ ಅಲ್ಲ, ಸ್ವತಃ ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜಿಪಂ, ತಾಪಂ ಚುನಾವಣೆಗೆ ಮೈತ್ರಿ ಇನ್ನೂ ಅಂತಿಮವಾಗಿಲ್ಲ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು. ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವಾಗಿ ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕೆಂಬ ಅಪೇಕ್ಷೆ ಇದ್ದರೆ, ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಪರಸ್ಪರ ಸ್ಪಷ್ಟತೆ ಇರಬೇಕು. ಈ ಬಗ್ಗೆ ನಾವಿಬ್ಬರೂ ಕುಳಿತು, ಮತ್ತಷ್ಟು ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ: ಖಂಡ್ರೆ
ಮೀನು ಹಿಡಿಯುವ ಕಾರ್ಯ ಟೆಂಡರ್ ಮೂಲಕ ನಡೆಸಿ