ಬೆಂಗಳೂರು : ಹೆಬ್ಬಾಳ - ಸರ್ಜಾಪುರ ಮೆಟ್ರೋಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಹಸಿರು ನಿಶಾನೆ

KannadaprabhaNewsNetwork | Updated : Oct 14 2024, 11:38 AM IST

ಸಾರಾಂಶ

ಮಹತ್ವದ ಬೆಳವಣಿಗೆಯಲ್ಲಿ ನಗರದ ಹೆಬ್ಬಾಳದಿಂದ ‘ಟೆಕ್‌ ಹಬ್‌’ ಸರ್ಜಾಪುರ ಸಂಪರ್ಕಿಸಲಿರುವ (37 ಕಿ.ಮೀ) ನಮ್ಮ ಮೆಟ್ರೋ 3ಎ ಹಂತದ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.

 ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ನಗರದ ಹೆಬ್ಬಾಳದಿಂದ ‘ಟೆಕ್‌ ಹಬ್‌’ ಸರ್ಜಾಪುರ ಸಂಪರ್ಕಿಸಲಿರುವ (37 ಕಿ.ಮೀ) ನಮ್ಮ ಮೆಟ್ರೋ 3ಎ ಹಂತದ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.

ಮುಂದಿನ ಹಂತವಾಗಿ ಕೇಂದ್ರ ಸಚಿವ ಸಂಪುಟ ಯೋಜನೆಗೆ ಒಪ್ಪಿಗೆ ನೀಡಬೇಕಿದ್ದು, ಅದಕ್ಕೂ ಮುನ್ನ ಆರ್ಥಿಕ ಇಲಾಖೆಯು ವಿಸ್ತೃತ ಯೋಜನಾ ವರದಿಯನ್ನು ಪರಿಶೀಲಿಸಿ ಅನುದಾನದ ಕುರಿತು ನಿರ್ಣಯ ಕೈಗೊಳ್ಳಲಿದೆ. 2022-23ರ ಬಜೆಟ್‌ನಲ್ಲಿ ಈ ಯೋಜನೆಗೆ ಸರಿಸುಮಾರು ₹16,500 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಆದರೆ ವಿಸ್ತೃತ ಯೋಜನಾ ವರದಿ ಬಳಿಕ ಈ ಯೋಜನೆಯ ವೆಚ್ಚ ₹27,000 ಕೋಟಿಗೆ ತಲುಪಿದೆ.

ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ಸಂಪುಟ ₹15600 ಕೋಟಿ ಮೊತ್ತದ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಹಸಿರು ನಿಶಾನೆ ನೀಡಿತ್ತು. ಇದೀಗ ಸಂಚಾರ ದಟ್ಟಣೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ 3ಎ ಹಂತಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿರುವುದರಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮೊದಲ ಒಪ್ಪಿಗೆ ದೊರೆತಂತಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ಬಾಳದಿಂದ ಸರ್ಜಾಪುರದವರೆಗೆ ಈ ಮಾರ್ಗ ಸಂಪರ್ಕಿಸಲಿದೆ. ಕೋರಮಂಗಲ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಿತ ಸ್ಥಳಗಳಲ್ಲಿ 3ಎ ಹಾದುಹೋಗುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಕಳೆದ ಜೂನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಈ ಯೋಜನೆಯ ಡಿಪಿಆರ್‌ ಸಲ್ಲಿಸಿತ್ತು. ಸರ್ಕಾರ ತನ್ನ ಒಪ್ಪಿಗೆ ನೀಡಿ ಕೇಂದ್ರದ ಅನುಮತಿಗಾಗಿ ಯೋಜನಾ ವಿವರ ಕಳುಹಿಸಿತ್ತು.

ಡಿಪಿಆರ್‌ ಪ್ರಕಾರ ಸುರಂಗ ಮಾರ್ಗ ಹಾಗೂ ಎತ್ತರಿಸಿದ ಮಾರ್ಗ (ಎಲಿವೆಟೆಡ್‌) ಸೇರಿ ಒಟ್ಟೂ 28 ನಿಲ್ದಾಣಗಳನ್ನು 3ಎ ಹಂತ ಹೊಂದಿದೆ. ಸರ್ಜಾಪುರದಿಂದ ಕೋರಮಂಗಲ 3ನೇ ಬ್ಲಾಕ್‌ವರೆಗೆ ಎತ್ತರಿಸಿದ ಮಾರ್ಗ ಇರಲಿದ್ದು, ಇಲ್ಲಿ 15 ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. 3ನೇ ಬ್ಲಾಕ್‌ನಿಂದ ವೆಟರ್ನರಿ ಕಾಲೇಜಿನವರೆಗೆ ಸುರಂಗ ಮಾರ್ಗವಿರಲಿದ್ದು 11 ನಿಲ್ದಾಣಗಳು ಇರಲಿವೆ. ಮುಂದಿನ ಗಂಗಾನಗರ, ಹೆಬ್ಬಾಳ ನಿಲ್ದಾಣಗಳು ಪುನಃ ಎಲಿವೆಟೆಡ್‌ ಆಗಿರಲಿವೆ.

ಹೆಬ್ಬಾಳದಲ್ಲಿ ಸುರಂಗರಸ್ತೆಯ ಯೋಜನೆಯೂ ಹಾದು ಹೋಗಲಿರುವ ಕಾರಣ ಬಿಬಿಎಂಪಿ ಜೊತೆಗೆ ನಗರಾಭಿವೃದ್ಧಿ ಇಲಾಖೆ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ನಿಲ್ದಾಣಗಳ ವಿವರ: ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಮಾಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲ್‌ರಾಂ, ದೊಡ್ಡಕನ್ನಳ್ಳಿ, ಕೈಕೊಂಡನಹಳ್ಳಿ, ಬೆಳ್ಳಂದೂರು ಗೇಟ್‌, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆ.ಆರ್.ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್‌, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ವೆಟರ್ನರಿ ಕಾಲೇಜ್, ಗಂಗಾನಗರ ಮತ್ತು ಹೆಬ್ಬಾಳದಲ್ಲಿ ನಿಲ್ದಾಣ ಇರಲಿದೆ. ಸರ್ಜಾಪುರದಲ್ಲಿ ಡಿಪೋ ನಿರ್ಮಾಣ ಆಗಲಿದೆ.

4 ಇಂಟರ್‌ಚೇಂಜ್‌:

1. ಅಗರ (ನೀಲಿ ಮಾರ್ಗ)2. ಡೈರಿ ಸರ್ಕಲ್‌ (ಗುಲಾಬಿ ಮಾರ್ಗ)3. ಕೆ.ಆರ್‌.ಸರ್ಕಲ್‌ (ನೇರಳೆ ಮಾರ್ಗ)4.ಹೆಬ್ಬಾಳ (ಕಿತ್ತಳೆ ಮಾರ್ಗ)

Share this article