ಗಣಿಗಾರಿಕೆಗೆ ರಾಜ್ಯದ ಶಿಫಾರಸಿನಂತೆ ಕೇಂದ್ರ ಅನುಮೋದನೆ-ಎಚ್‌ಡಿಕೆ

KannadaprabhaNewsNetwork |  
Published : Jun 19, 2024, 01:03 AM IST
14 | Kannada Prabha

ಸಾರಾಂಶ

ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 90 ಸಾವಿರ ಮರಗಳಿವೆ ಎನ್ನುವ ಸ್ಪಷ್ಟತೆಯೂ ಇಲ್ಲ. ಗಣಿಗಾರಿಕೆ 40-50 ವರ್ಷ ನಡೆಯುವ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಹಂತ-ಹಂತವಾಗಿ ಮರ ಕಡಿಯಲಾಗುತ್ತದೆ.

ಹುಬ್ಬಳ್ಳಿ:

ಸಂಡೂರು ದೇವದಾರಿ ಗಣಿಗಾರಿಕೆಗೆ 2016ರಲ್ಲೇ ಅಂದಿನ ರಾಜ್ಯ ಸರ್ಕಾರದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 404 ಹೆಕ್ಟೇರ್‌ಗೆ ಪರ್ಯಾಯವಾಗಿ 808 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣಗೊಳಿಸುವುದಾಗಿ ಗಣಿ ಕಂಪನಿ ಒಪ್ಪಿಕೊಂಡು ₹ 390 ಕೋಟಿ ರಾಜ್ಯ ಸರಕಾರಕ್ಕೆ ಪಾವತಿಸಿದೆ. ಗಣಿಗಾರಿಕೆ ವಿರೋಧಿಸುವವರು ಇದನ್ನು ತಿಳಿದುಕೊಳ್ಳಬೇಕೆಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಿರು ಮಾರಾಟಕ್ಕೆ ನಾನು ಸಹಿ ಹಾಕಿಲ್ಲ. 2005ರಲ್ಲಿ ಗಣಿಗಾರಿಕೆ ನಿಂತು ಹೋಗಿತ್ತು. ಅದರ ನಂತರ, ಅಲ್ಲಿ ಗುತ್ತಿಗೆ ಪಡೆದ ಕಂಪನಿಯು ರಾಜ್ಯ ಹಾಗೂ ಕೇಂದ್ರ ಸರಕಾರದ ಜತೆ ಸಾಕಷ್ಟು ಪ್ರಕ್ರಿಯೆ ನಡೆಸಿತ್ತು. 2016ರಲ್ಲಿ ರಾಜ್ಯ ಸರಕಾರ ದೇವದಾರಿ ಅರಣ್ಯ ಪ್ರದೇಶದಲ್ಲಿ 404 ಹೆಕ್ಟೇರ್‌ ಪ್ರದೇಶದಲ್ಲಿ ಅದಿರು ಉತ್ಪಾದನೆ ಮಾಡುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರ ಸಹಮತ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಉದ್ದೇಶಿತ ಗಣಿಗಾರಿಕೆ ಪ್ರದೇಶದಲ್ಲಿ 90 ಸಾವಿರ ಮರಗಳಿವೆ ಎನ್ನುವ ಸ್ಪಷ್ಟತೆಯೂ ಇಲ್ಲ. ಗಣಿಗಾರಿಕೆ 40-50 ವರ್ಷ ನಡೆಯುವ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಹಂತ-ಹಂತವಾಗಿ ಮರ ಕಡಿಯಲಾಗುತ್ತದೆ. ಅದೇ ಸಮಯಕ್ಕೆ ಅರಣ್ಯೀಕರಣ ಸಹ ನಡೆಯುತ್ತದೆ ಎಂದು ಸಮರ್ಥಿಸಿಕೊಂಡರು.

ಇಲಾಖೆಯಲ್ಲಿರುವ ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನು ಕ್ರೋಡ್ರೀಕರಿಸಿ, ಅಭಿವೃದ್ಧಿ ಕುರಿತು ಸೂಕ್ತ ಯೋಜನೆ ರೂಪಿಸಲಾಗುವುದು ಎಂದರು.

ರಾಜ್ಯ ಸರ್ಕಾರ ಏಕಾಏಕಿ ಇಂಧನ ಮೇಲಿನ ಸೆಸ್‌ ಹೆಚ್ಚಿಸಿರುವುದು ಸರ್ಕಾರದ ಪರಿಸ್ಥಿತಿ ಹೇಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಜನರಿಂದ ಹಣ ಪಡೆದು, ಜನರಿಗೆ ನೀಡುವುದರಲ್ಲಿ ಯಾವ ಎದೆಗಾರಿಕೆಯಿದೆ? ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಾಗಿ ಸಚಿವ ಎಂ.ಬಿ. ಪಾಟೀಲ ಅವರೇ ಹೇಳಿಕೆ ನೀಡಿದ್ದಾರೆ. ಕೇಂದ್ರಕ್ಕೆ ಬೊಟ್ಟು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕೇಂದ್ರವನ್ನು ಕೇಳಿ ಇವರು ತೈಲ ಬೆಲೆ ಹೆಚ್ಚಿಸಿಲ್ಲ ಎಂದು ಕಿಡಿಕಾರಿದರು.

ನಟ ದರ್ಶನ್‌ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವನಾಗಿ ನಾನು ಈ ಕುರಿತು ಮಾತನಾಡುವುದು ಸರಿಯಲ್ಲ. ಆದರೆ, ಕಾನೂನಿನ ಅಡಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ, ಸಾ.ರಾ. ಮಹೇಶ, ನಾಡಗೌಡ, ಶಿವಶಂಕರ ಕಲ್ಲೂರ ಸೇರಿದಂತೆ ಇತರರು ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?