ಅಭಿವೃದ್ಧಿ ಭಾರತ ಪರಿಕಲ್ಪನೆಯ ಕೇಂದ್ರ ಬಜೆಟ್: ಡಾ.ಘಾರ್ಗೆ

KannadaprabhaNewsNetwork |  
Published : Feb 13, 2024, 12:47 AM IST
ಪೋಟೋ: 12ಎಸ್‌ಎಂಜಿಕೆಪಿ05ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ “ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ವಿಶ್ಲೇಷಣೆ” ಕಾರ್ಯಕ್ರಮವನ್ನು ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ನಿರ್ದೇಶಕ ಡಾ.ರಮಾನಂದ ಘಾರ್ಗೆ ಉದ್ಘಾಟಿಸಿದರು. | Kannada Prabha

ಸಾರಾಂಶ

2047ರ ವೇಳೆಗೆ ಭಾರತ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡಲು ಸಂಬಂಧಿಸಿದ ನಿರ್ದೇಶನಗಳು ಮತ್ತು ಅಭಿವೃದ್ಧಿ ವಿಧಾನವನ್ನು ಆಧರಿಸಿದ ಘೋಷಣೆಗಳು ಮತ್ತು ಕಾರ್ಯತಂತ್ರಗಳನ್ನು ಕೇಂದ್ರ ಬಜೆಟ್ ಒಳಗೊಂಡಿದೆ ಎಂದು ಡಾ.ರಮಾನಂದ ಘಾರ್ಗೆ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಭಿವೃದ್ಧಿ ಭಾರತ ನಿರ್ಮಾಣದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪೂರಕವಾದ ಬಜೆಟ್‌ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ನಿರ್ದೇಶಕ ಡಾ.ರಮಾನಂದ ಘಾರ್ಗೆ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ವಿಶ್ಲೇಷಣೆ’ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಜೆಟ್‌ನಲ್ಲಿ ರೈಲ್ವೇ, ಡಿಫೆನ್ಸ್, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. 2047ರ ವೇಳೆಗೆ ಭಾರತ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡಲು ಸಂಬಂಧಿಸಿದ ನಿರ್ದೇಶನಗಳು ಮತ್ತು ಅಭಿವೃದ್ಧಿ ವಿಧಾನವನ್ನು ಆಧರಿಸಿದ ಘೋಷಣೆಗಳು ಮತ್ತು ಕಾರ್ಯತಂತ್ರಗಳನ್ನು ಬಜೆಟ್ ಒಳಗೊಂಡಿದೆ ಎಂದು ತಿಳಿಸಿದರು.ಯುವಜನತೆಗೆ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ ಒಂದು ಲಕ್ಷ ಕೋಟಿ ರು. ಗಳ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಪ್ರಸ್ತಾಪಿಸಿಲ್ಲ. ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.

ಮೇಲ್ಛಾವಣಿ ಸೌರಶಕ್ತಿ ಬಳಕೆ ಮೂಲಕ ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪಡೆಯುವ ಯೋಜನೆ ರೂಪಿಸಲಾಗಿದೆ. ರೈಲ್ವೇ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯವನ್ನು ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವಜ್ರ ಮಹೋತ್ಸವ ಆಚರಿಸುತ್ತಿರುವ ಸಂಘವು ನಿರಂತರವಾಗಿ ವಿಶೇಷ ಉಪನ್ಯಾಸ, ಸಂವಾದ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಉದ್ಯಮಿಗಳಿಗೆ ಬಜೆಟ್‌ನಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನವನ್ನು ಪ್ರತಿ ವರ್ಷ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.

ಲೆಕ್ಕ ಪರಿಶೋಧಕ ಕೆ.ಲಕ್ಷ್ಮಣ ರಾವ್ ಅವರು ಎಂಎಸ್‌ಎಂಇ ಕ್ಷೇತ್ರದಲ್ಲಿ ಬಜೆಟ್ ಪರಿಣಾಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹಾ ಸಮಿತಿ ಚೇರ‍್ಮನ್ ಇ.ಪರಮೇಶ್ವರ್ ಪ್ರಾಸ್ತಾವಿಕ ಮಾತನಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!