ಸ್ವಂತ ಆದಾಯ ಬಲದ ಮೇಲೆಯೇ ಕೇಂದ್ರ ನಗರ ಪಾಲಿಕೆ ₹3427 ಕೋಟಿ ಮೊತ್ತದ ಬಜೆಟ್‌ ಮಂಡನೆ

KannadaprabhaNewsNetwork |  
Published : Mar 28, 2026, 03:15 AM IST
Driver | Kannada Prabha

ಸಾರಾಂಶ

ಬೃಹತ್‌ ಯೋಜನೆಗಳ ಘೋಷಣೆಯಿಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಿಂತ ಸ್ವಂತ ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡು ನಗರ ಕೇಂದ್ರ ನಗರ ಪಾಲಿಕೆ 2026-27ನೇ ಸಾಲಿಗೆ 3426.60 ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್‌ ಯೋಜನೆಗಳ ಘೋಷಣೆಯಿಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಕ್ಕಿಂತ ಸ್ವಂತ ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡು ನಗರ ಕೇಂದ್ರ ನಗರ ಪಾಲಿಕೆ 2026-27ನೇ ಸಾಲಿಗೆ 3426.60 ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಗಿದೆ.

ನಗರದ ಪುರಭವನದಲ್ಲಿ ಶುಕ್ರವಾರ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ಪರವಾಗಿ ಹಣಕಾಸು ವಿಭಾಗದ ಉಪ ನಿಯಂತ್ರಕಿ ವಿಯಲಕ್ಷ್ಮೀ ಅವರು 2026-27ನೇ ಸಾಲಿನ ಬಜೆಟ್‌ ಮಂಡಿಸಿದರು. 3427.34 ಕೋಟಿ ರು. ಆದಾಯದ ಅಂದಾಜಿನೊಂದಿಗೆ 3426.60 ಕೋಟಿ ರು. ವೆಚ್ಚದ ಉಳಿತಾಯ ಬಜೆಟ್‌ ಮಂಡಿಸಲಾಯಿತು. ರಸ್ತೆ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣೆಯಂತಹ ನಿರ್ವಹಣಾ ಕಾರ್ಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಅದರ ಜತೆಗೆ 12 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ, ರಸ್ತೆ, ಸಾರ್ವಜನಿಕ ಸ್ಥಳಗಳ ಜಾಗತಿಕ ವಿನ್ಯಾಸಕ್ಕಾಗಿ ಪ್ರತ್ಯೇಕ ಅರ್ಬನ್‌ ಸೆಲ್‌ ಸ್ಥಾಪನೆ, ಪಾಲಿಕೆ ಕಟ್ಟಡಗಳಿಗೆ ಸೋಲಾರ್‌ ಅಳವಡಿಕೆ, ಮಕ್ಕಳಿಗಾಗಿ ಪುಟಾಣಿ ಪಾರ್ಕ್‌ಗಳ ಸ್ಥಾಪನೆ, ಪಾಲಿಕೆ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಎಐ ತರಬೇತಿ ಸೇರಿದಂತೆ ಮತ್ತಿತರ ಹೊಸ ಬಗೆಯ ಯೋಜನೆಗಳನ್ನು ಘೋಷಿಸಲಾಗಿದೆ.ಮುದ್ರಾಂಕ ಶುಲ್ಕದ ಮೇಲೆ ಶೇ. 2ರಷ್ಟು ತೆರಿಗೆ ವಸೂಲಿ:ನಗರ ಪಾಲಿಕೆಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ ಮೂಲಗಳಿಂದ ಮೂಲಕ 2025-26ಕ್ಕಿಂತ 2026-27ರಲ್ಲಿ 250 ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರಹಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆ 2025-26ನೇ ಸಾಲಿನಲ್ಲಿ 900 ಕೋಟಿ ರು.ಗಳ ತೆರಿಗೆ ಆದಾಯ ಸಂಗ್ರಹಿಸಲಾಗಿದ್ದು, ಅದೇ 2026-27ರಲ್ಲಿ 1150 ಕೋಟಿ ರು. ತೆರಿಗೆ ಆದಾಯ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರಮುಖವಾಗಿ ಹೊಸ ಖಾತೆಗಳನ್ನು ನೀಡುವಾಗ ಮುದ್ರಾಂಕ ಶುಲ್ಕದ ಮೇಲೆ ಶೇ. 2ರಷ್ಟು ತೆರಿಗೆ ವಸೂಲಿಗೆ ನಿರ್ಧರಿಸಲಾಗಿದ್ದು, ಅದರಿಂದ ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ತೆರಿಗೆ ಪಾವತಿಗಾಗಿ ಪಾಲಿಕೆಯ ಕಂದಾಯಾಧಿಕಾರಿ ಕಿಯಾಸ್ಕ್‌ ಸೇವಾ ಕೇಂದ್ರಗಳನ್ನು ತೆರೆಯುವುದು, ತೆರಿಗೇತರ ಆದಾಯ ವೃದ್ಧಿಗೆ ನೂತನ ಪಾರ್ಕಿಂಗ್ ಪಾಲಿಕೆ ಹಾಗೂ ಹೊರಾಂಗಣ ಜಾಹೀರಾತುಗಳ ವೈಜ್ಞಾನಿಕ ನಿರ್ವಹಣೆ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಿಬಿಎಂಪಿ ಆಸ್ತಿಗಳ ವಾಣಿಜ್ಯ ಬಳಕೆಗೆ ಒತ್ತು ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.ತೆರಿಗೆಯೇತರ ಆದಾಯದ ಮೂಲಗಳಲ್ಲೊಂದಾದ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 90 ಕೋಟಿ ರು. ಹಂಚಿಕೆ ಮಾಡಲಾಗಿದೆ. ಅದರಲ್ಲಿ ರಸೆಲ್‌ ಮಾರುಕಟ್ಟೆ ಅಭಿವೃದ್ಧಿಗಾಗಿಯೇ 70 ಕೋಟಿ ರು. ವ್ಯಯಿಸುವ ಪ್ರಸ್ತಾಪ ಮಾಡಲಾಗಿದ್ದು, ಅಲ್ಲಿ ಸುಸಜ್ಜಿತ ವಾಹನ ನಿಲುಗಡೆ ಮತ್ತು ಪಾರಂಪರಿಕ ಕಟ್ಟಡ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಸಿಬ್ಬಂದಿ-ಅಧಿಕಾರಿಗೆ ತರಬೇತಿ:ಕೇಂದ್ರ ನಗರ ಪಾಲಿಕೆಯಲ್ಲಿ 1164 ಅಧಿಕಾರಿ ಮತ್ತು ಸಿಬ್ಬಂದಿ, 3464 ಪೌರಕಾರ್ಮಿಕರು, 410 ಹೊರಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದಕ್ಷ ಮತ್ತು ಜನಸ್ನೇಹಿ ಆಡಳಿತ ನೀಡುವ ಸಂಬಂಧ ತರಬೇತಿ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗುವುದು. ಆಸ್ತಿ ತೆರಿಗೆ ಸಮರ್ಪಕ ಪರಿಷ್ಕರಿಸಲು ಸಿಬ್ಬಂದಿಗೆ ಟೋಟಲ್‌ ಸ್ಟೇಷನ್‌ ಸರ್ವೇ ಹಾಗೂ ಜಿಪಿಎಸ್ ಸರ್ವೇ ತರಬೇತಿ ನೀಡುವುದು, ತಾಂತ್ರಿಕ ಅಧಿಕಾರಿಗಳಿಗೆ ಕೌಶಲ್ಯಾಭಿವೃದ್ಧಿಗೆ ನೂತನ ತಂತ್ರಜ್ಞಾನಗಳ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸುವುದಾಗಿ ಘೋಷಿಸಲಾಗಿದೆ.ರಸ್ತೆ ಅಗಲೀಕರಣಕ್ಕೆ ಒತ್ತು:ಹಲವು ವರ್ಷಗಳಿಂದ ಕೇವಲ ಚರ್ಚೆಯಲ್ಲಿರುವ ಪಾದರಾಯನಪುರ ಮುಖ್ಯ ರಸ್ತೆ ಅಗಲೀಕರಣವನ್ನು ಬಜೆಟ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಗಿದೆ. ಹೊಸದಾಗಿ ರೂಪಿಸಲಾಗುತ್ತಿರುವ ಮಹಾ ಯೋಜನೆ ಅಡಿಯಲ್ಲಿ ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರ ಮುಖ್ಯರಸ್ತೆಯನ್ನು 9 ಮೀ.ನಿಂದ 24 ಮೀ.ಗೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅದರ ಜತೆಗೆ ನಗರದ ವಾಣಿಜ್ಯ ಮಹತ್ವವನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಆಯಕ್ತ ರಸ್ತೆಗಳನ್ನು ಬ್ಯುಸಿನೆಸ್‌ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿಪಡಿಸುವುದಾಗಿ ಪ್ರಸ್ತಾಪಿಸಲಾಗಿದೆ.ಕೇಂದ್ರ-ರಾಜ್ಯ ಸರ್ಕಾರಗಳಿಗೆ ಕೃತಜ್ಞತೆ:

ಕೇಂದ್ರ ನಗರ ಪಾಲಿಕೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನೆರವಿಗಾಗಿ ಹೊಗಳಿಕೆಯ ಮಾತನ್ನಾಡಿದ್ದು, 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗದ ಅಡಿಯಲ್ಲಿ 112.25 ಕೋಟಿ ರು. ನೀಡುವ ನಿರೀಕ್ಷೆಯಿದೆ. ಹಾಗೆಯೇ ರಾಜ್ಯದ ಎಸ್‌ಎಫ್‌ಸಿ ಅನುದಾನದ ಅಡಿ 90.97 ಕೋಟಿ ರು., ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ 200 ಕೋಟಿ ರು., ಎಸ್‌ಎಫ್‌ಸಿ ವಿಶೇಷ ಅನುದಾನದಡಿ 75 ಕೋಟಿ ರು. ಹಾಗೂ ವಿಶೇಷ ಮೂಲಭೂತ ಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ 375.61 ಕೋಟಿ ರು. ಅನುದಾನ ಲಭ್ಯವಾಗಲಿದೆ. ಈ ಅನುದಾನ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಬಲ ತುಂಬಲಿದೆ ಎಂದು ತಿಳಿಸಲಾಗಿದೆ.ಸಾರ್ವಜನಿಕ ಕಾಮಗಾರಿಗಳಿಗೆ ಹೆಚ್ಚಿನ ಒತ್ತು:

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 265 ಕಿಮೀ ಮುಖ್ಯ ಮತ್ತು 1346 ಉಪಮುಖ್ಯ ರಸ್ತೆಗಳಿವೆ. ಆ ರಸ್ತೆಗಳ ಡಾಂಬರೀಕರಣ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಪ್ರತಿ ವಾರ್ಡ್‌ ರಸ್ತೆಯನ್ನು ಗುಂಡಿ ಮುಕ್ತಗೊಳಿಸಲು ಆದ್ಯತೆ ನೀಡಲಾಗುತ್ತದೆ. ಒಟ್ಟಾರೆ ಸಾರ್ವಜನಿಕ ಕಾಮಗಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ಹಾಗೂ ಮುನ್ಸಿಪಲ್‌ ಬಾಂಡ್‌ ಮೂಲಕ ಸಂಗ್ರಹಿಸಲಾಗುವ 200 ಕೋಟಿ ರು. ಸೇರಿದಂತೆ ಒಟ್ಟು 1,760 ಕೋಟಿ ರು. ಹಂಚಿಕೆ ಮಾಡಲಾಗಿದೆ. 2026-27ನೇ ಸಾಲಿನಲ್ಲಿ 145 ಕಿಮೀ ಉದ್ದದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು ಹಾಗೂ 115 ಕಿಮೀ ಉದ್ದದ ವಾರ್ಡ್‌ ರಸ್ತೆಗಳ ಡಾಂಬರೀಕರಣ ಮಾಡಲಾಗುವುದು ಎಂದು ಉಲ್ಲೇಖಿಸಲಾಗಿದೆ.ಅದರ ಜತೆಗೆ ಸಾರ್ವಜನಿಕ ಕಾಮಗಾರಿ ಅಡಿಯಲ್ಲಿ 10 ಹೊಸ ಸಮುದಾಯ ಕಟ್ಟಡಗಳ ನಿರ್ಮಾನ ಕಾಮಗಾರಿ, ನಗರವನ್ನು ಪ್ರವಾಹ ಮುಕ್ತವಾಗಿಸಲು ಹಾಲಿ ಚಾಲ್ತಿಯಲ್ಲಿರುವ 69 ಕೋಟಿ ರು. ವೆಚ್ಚದಲ್ಲಿ 10.96 ಕಿಮೀ ಉದ್ದದ ಬೃಹತ್‌ ಮಳೆನೀರುಗಾಲುವೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ.

ಅಲ್ಲದೆ, ಪ್ರತಿ ವಾರ್ಡ್‌ಗಳಿಗೆ ತಲಾ 2.25 ಕೋಟಿ ರು.ಗಳಂತೆ 141.75 ಕೋಟಿ ರು. ಮೀಸಲಿಡಲಾಗುತ್ತಿದೆ. ಅದರಲ್ಲಿ ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 1.50 ಕೋಟಿ ರು., ರಸ್ತೆ ಗುಂಡಿ ಮುಚ್ಚಲು, ಚರಂಡಿ ಹೂಳೆತ್ತಲು 75 ಲಕ್ಷ ರು. ವ್ಯಯಿಸಲಾಗುವುದು ಎಂದು ಘೋಷಿಸಲಾಗಿದೆ.

ಬ್ರ್ಯಾಂಡ್‌ ಬೆಂಗಳೂರು-ವೈಬ್ರೆಂಟ್‌ ಬೆಂಗಳೂರು:

ಬೆಂಗಳೂರಿನ ಬ್ರ್ಯಾಂಡ್‌ ಮೌಲ್ಯ ಕಾಪಾಡುವ ಉದ್ದೇಶದೊಂದಿಗೆ ಬ್ರ್ಯಾಂಡ್‌ ಬೆಂಗಳೂರು-ವೈಬ್ರೆಂಟ್‌ ಬೆಂಗಳೂರು ಅಡಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುದ್ಧಿಕರಣಕ್ಕಾಗಿ 15 ಕೋಟಿ ರು., ನಮ್ಮ ಸುರಕ್ಷಾ ಯೋಜನೆ ಅಡಿ 12 ಪ್ರಮುಖ ಜಂಕ್ಷನ್‌ಗಳ ಮೇಲ್ದರ್ಜೆಗೇರಿಸುವುದು, ಪಾದಚಾರಿಗಳ ಸುರಕ್ಷತೆಗಾಗಿ ಹೆಜ್ಜೆಹೆಜ್ಜೆಗೆ ಸುರಕ್ಷೆ ಎಂಬ ಹೊಸ ಯೋಜನೆ ಅಡಿ 50 ಕಿಮೀ ಪಾದಚಾರಿ ಮಾರ್ಗ ಸುಧಾರಣೆ ಮತ್ತು 15 ಕಿಮೀ ಹೊಸ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು. ಈ ಪಾದಚಾರಿ ಮಾರ್ಗಗಳನ್ನು ದಿವ್ಯಾಂಗ ಸ್ನೇಹಿ ಮತ್ತು ಮಳೆ ನೀರು ಕೊಯ್ಲಿಗೆ ಸಹಕಾರಿಯಾಗುವಂತಹ ಆಧುನಿಕ ವಿನ್ಯಾಸದ ಮೂಲಕ ಅಭಿವೃದ್ಧಿಪಡಿಸಲಾಗುವುದು ತಿಳಿಸಲಾಗಿದೆ.

ಎಲ್ಲ ಕಾಲದಲ್ಲೂ ರಸ್ತೆ ಗುಂಡಿ ಮುಚ್ಚಲು ಜೆಟ್‌ ಪ್ಯಾಚರ್‌ ಯಂತ್ರ ಮತ್ತು ತಂಪು ಡಾಂಬಾರು ತಂತ್ರಜ್ಞಾನ ಬಳಸಲಾಗುವುದು. ಇನ್ನು, ಜನನಿಬಿಡ ರಸ್ತೆಗಳ ಸ್ವಚ್ಛತೆಗಾಗಿ ಗುತ್ತಿಗೆ ಆಧಾರದಲ್ಲಿ 7 ಮೆಕ್ಯಾನಿಕಲ್‌ ಸ್ವೀಪಿಂಗ್ ಯಂತ್ರ ನಿಯೋಜಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್‌ ಕಡ್ಡಾಯ

ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜಿಸಿ ಪರಿಸರ ಸಂರಕ್ಷಣೆ ಮಾಡುವ ದೃಷ್ಟಿಯಿಂದಾಗಿ ಸಾವಿರಾರು ಜನರು ಕೆಲಸ ಮಾಡುವ ಪ್ರದೇಶಗಳಲ್ಲಿ ಪೇ ಆ್ಯಂಡ್‌ ಯೂಸ್‌ ಇವಿ ಚಾರ್ಜಿಂಗ್‌ ಪಾಯಿಂಟ್‌ ಸ್ಥಾಪಿಸಲಾಗುವುದು. ಅದರ ಜತೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಇವಿ ಚಾರ್ಜಿಂಗ್‌ ಕೇಂದ್ರ ಕಡ್ಡಾಯ ಅಳವಡಿಕೆ ವ್ಯವಸ್ಥೆ ಜಾರಿಗೊಳಿಸುವುದಾಗಿ ತಿಳಿಸಲಾಗಿದೆ.ನಗರ ಪಾಲಿಕೆ ಕಟ್ಟಡಗಳ ಎನರ್ಜಿ ಆಡಿಟ್‌, ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗುವುದು. ಆಮೂಲಕ ಸ್ವಾವಲಂಭಿ ವಿದ್ಯುತ್‌ ಬಳಕೆಗೆ ಆದ್ಯತೆ ನೀಡಲಾಗುವುತ್ತದೆ. ಪಾಲಿಕೆ ಆಟದ ಮೈದಾನಗಳು, ಉದ್ಯಾನಗಳು, ಬಯಲು ಮತ್ತು ಖಾಲಿ ಜಾಗಗಳಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಮಹಿಳೆಯರಿಗಾಗಿ 20 ಹೊಸ ಶೀ ಟಾಯ್ಲೆಟ್‌ ಹಾಗೂ 60 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಆಸ್ಪತ್ರೆಗಳ ಅಭಿವೃದ್ಧಿ:ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕೀಯ ಸೇವೆ ಬಲಪಡಿಸಲು ಪ್ರಸಕ್ತ ಸಾಲಿನಲ್ಲಿ 7 ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆಯ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಹಾಗೂ ಒಂದು ಆಸ್ಪತ್ರೆಯನ್ನು 50 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಅದಕ್ಕಾಗಿ 40 ಕೋಟಿ ರು. ಅನುದಾನ ಮೀಸಲಿಡಲಾಗುತ್ತಿದೆ. ವಿಶೇಷವಾಗಿ ಪೊಬ್ಬತ್ತಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಪುನರ್ವಸತಿಗಾಗಿ ವಾತ್ಸಲ್ಯ ಮನೆ ಆರೈಕೆ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.

ನಗರದ ಸಂಚಾರ ದಟ್ಟಣೆ ನಡುವೆ ತುರ್ತು ವೈದ್ಯಕೀಯ ನೆರವು ನೀಡಲು ಬೈಕ್‌ ಆಂಬ್ಯುಲೆನ್ಸ್‌ ಪ್ರಥಮ ಸ್ಪಂದನಾ ಘಟಕ ಯೋಜನೆ ಅನುಷ್ಠಾನಗೊಳಿಸಲಾಗುವುದು. ಅದಕ್ಕಾಗಿ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಹಾಗೆಯೇ, ಆರೋಗ್ಯ ಮಿತ್ರ ಯೋಜನೆ ಅಡಿಯಲ್ಲಿ ನಗರದ 22 ಸ್ಥಳಗಳಲ್ಲಿ ಸ್ಮಾರ್ಟ್‌ ವರ್ಚ್ಯುವಲ್ ಕ್ಲಿನಿಕ್‌ ಸ್ಥಾಪಿಸಲಾಗುತ್ತದೆ. ಅದರ ನಿರ್ವಹಣೆಗಾಗಿ 5.07 ಕೋಟಿ ರು. ಹಾಗೂ ಕೇಂದ್ರಿತ ಮೇಲ್ವಿಚಾರಣೆಗಾಗಿ 15 ಕ್ಯಾಬಿನ್‌ಗಳ ಕಮಾಂಡ್‌ ಸೆಂಟರ್‌ನ್ನು 5.03 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಒಟ್ಟಾರೆ ಯೋಜನೆಗಾಗಿ 19 ಕೋಟಿ ರು. ಖರ್ಚು ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬೀದಿ ನಾಯಿಗಳ ಪುನರ್ವಸತಿಗೆ ₹ ಕೋಟಿ

ನಗರದಲ್ಲಿ ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಪಶುಪಾಲನಾ ವಿಭಾಗಕ್ಕೆ 5 ಕೋಟಿ ರು. ಹಂಚಿಕೆ ಮಾಡಲಾಗಿದೆ. ಅದರಲ್ಲಿ ಬೀದಿ ನಾಯಿಗಳ ಪುನರ್ವಸತಿಗಾಗಿ 2 ಕೋಟಿ ರು. ಖರ್ಚು ಮಾಡುವುದಾಗಿ ತಿಳಿಸಲಾಗಿದೆ ಹಾಗೂ ವೈಜ್ಞಾನಿಕ ಆಶ್ರಯ ತಾಣಗಳು ವಿಶೇಷ ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅದರ ಜತೆಗೆ ಸಾಕು ಪ್ರಾಣಿಗಳು ಮತ್ತು ಸಮುದಾಯದ ನಾಯಿಗಳ ಉಚಿತ ಹಾಗೂ ತ್ವರಿತ ಚಿಕಿತ್ಸೆಗಾಗಿ 50 ಲಕ್ಷ ರು. ವೆಚ್ಚದಲ್ಲಿ ಹೊಸ ಪಶು ಚಿಕಿತ್ಸಾಲಯ ಹಾಗೂ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕಾಗಿ 1 ಕೋಟಿ ರು. ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಲಾಗುತ್ತದೆ ಎಂದು ಪ್ರಸ್ತಾಪಿಸಲಾಗಿದೆ.

ಇನ್ನು, ನಗರದ ಉದ್ಯಾನಗಳ ನಿರ್ವಹಣೆಗಾಗಿ 19 ಕೋಟಿ ರು. ಹಾಗೂ ಸಮಗ್ರ ಅಭಿವೃದ್ಧಿ, ಮೇಲ್ದರ್ಜೆಗೇರಿಸಲು 15 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅದರ ಜತೆಗೆ ಮಕ್ಕಳ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿ ಸಿಎಸ್‌ಆರ್‌ ನಿಧಿ ಸಹಯೋಗದಲ್ಲಿ ಪುಟಾಣಿ ಪಾರ್ಕ್‌ ಸ್ಥಾಪಿಸಲಾಗುವುದು. ಹಾಗೆಯೇ, ರಸ್ತೆ ಬದಿ 50 ಸಾವಿರ ಸಸಿಗಳನ್ನು ನೆಡಸಲು ನಿರ್ಧರಿಸಲಾಗಿದೆ ಹಾಗೂ ಸಾರ್ವಜನಿಕರಿಗೆ ವಿತರಿಸಲು 25 ಸಾವಿರ ಸಸಿಗಳನ್ನು ಬೆಲೆಸಲಾಗುವುದು ಎಂದು ತಿಳಿಸಲಾಗಿದೆ.

500 ಒಂಟಿ ಮನೆಗಳ ನಿರ್ಮಾಣ

ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿರುವ ಒಂಟಿ ಮನೆ ಯೋಜನೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ. ಅದರಂತೆ 500 ಅರ್ಹ ಫಲಾನುಭವಿಗಳಿಗೆ 35.70 ಕೋಟಿ ರು. ವೆಚ್ಚದಲ್ಲಿ ಒಂಟಿ ಮನೆ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಪರಿಶಿಷ್ಟ ಜಾತಿ/ಪಂಗಡದ ವೃತ್ತಿನಿರತ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ 4 ಕೋಟಿ ರು. ವೆಚ್ಚದಲ್ಲಿ ಇ-ವೆಂಡಿಂಗ್‌ ವಾಹನಗಳ ವಿತರಣೆ, ಸಾರಥಿ ಯೋಜನೆ ಅಡಿ 450 ನಿರುದ್ಯೋಗಿಗಳಿಗೆ ಆಟೋ ಮತ್ತು ಕಾರು ಖರೀದಿಗೆ ಸಹಾಯಧನ ನೀಡುವುದು ಹಾಗು ವೀಶೇಷ ಚೇತನರಿಗೆ ಎಲೆಕ್ಟ್ರಿಕ್‌ ವಾಹನ ನೀಡುವ ಪ್ರಸ್ತಾಪ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ:

ನಗರ ಪಾಲಿಕೆ ಶಾಲೆ-ಕಾಲೇಜು ವಿದ್ಯಾರ್ಥಿಗಳ ಉದ್ಯೋಗ ಮತ್ತು ಉಜ್ವಲ ಭವಿಷ್ಯಕ್ಕಾಗಿ ಸೂಕ್ತ ವೃತ್ತಿ ಮಾರ್ಗದರ್ಶನ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ನೀಡಲಾಗುವುದು. ಅದರೊಂದಿಗೆ ವಿವಿಧ ಕ್ರೀಡೆಗಳ ತರಬೇತಿ ಕೊಡಿಸಲಾಗುವುದು ಮತ್ತು ಉಚಿತವಾಗಿ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಗುವುದು. ಪ್ರಮುಖವಾಗಿ ಪಾಲಿಕೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತರಬೇತಿ ಹಾಗೂ ಸಾರ್ವನಿಕರಿಗೆ ಸೈಬರ್ ವಂಚನೆ ಮತ್ತು ಆನ್‌ಲೈನ್‌ ಹಗರಣಗಳಿಂದ ಸಂರಕ್ಷಿಸಲು ಸೈಬರ್‌ ಕವಚ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಆದಾಯ ಎಷ್ಟು? ವೆಚ್ಚ ಎಷ್ಟು? ಕೇಂದ್ರ ನಗರ ಪಾಲಿಕೆಯು 2026-27ನೇ ಸಾಲಿನಲ್ಲಿ ಸ್ವಂತ ಸಂಪನ್ಮೂಲಗಳಿಂದ 2342.20 ಕೋಟಿ ರು.ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 884.50 ಕೋಟಿ ರು. ಅನುದಾನ ಹಾಗೂ ಮುನಿಸಿಪಲ್‌ ಬಾಂಡ್‌ನಿಂದ ವಿತರಣೆ ಮೂಲಕ 200 ಕೋಟಿ ರು. ಸೇರಿದಂತೆ ಒಟ್ಟು ಸ್ವೀಕೃತಿ 3427.34 ಕೋಟಿ ರು.ಗೆ ಏರಿಕೆಯಾಗುವ ಅಂದಾಜಿಸಲಾಗಿದೆ.ಆ ಮೊತ್ತದಲ್ಲಿ ಸಿಬ್ಬಂದಿ ವೆಚ್ಚಗಳಿಗೆ 364.73 ಕೋಟಿ ರು., ಆಡಳಿತ ವೆಚ್ಚಕ್ಕೆ 110.88 ಕೋಟಿ ರು., ಘನತ್ಯಾಜ್ಯ ನಿರ್ವಹಣೆಗೆ 225 ಕೋಟಿ ರು., ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವಾಗಿ 297.45 ಕೋಟಿ ರು., ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ 174.79 ಕೋಟಿ ರು., ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ 2146.60 ಕೋಟಿ ರು., ಠೇವಣಿ ಮತ್ತು ಕರಗಳ ಮರುಪಾವತಿಗೆ 107.10 ಕೋಟಿ ರು. ಸೇರಿದಂತೆ ಒಟ್ಟು 3246.55 ಕೋಟಿ ರು. ವ್ಯಯಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಬಜೆಟ್‌ನಲ್ಲಿ ಕಗ್ಗಗಳ ಉಲ್ಲೇಖ!

ಕೇಂದ್ರ ನಗರ ಪಾಲಿಕೆ ಬಜೆಟ್‌ನಲ್ಲಿ ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗಗಳನ್ನು ಬಳಸಲಾಗಿದೆ. ಬಾಳ್ವೆ ಒಂದು ಕಲೆ, ಬದುಕು ಒಂದು ಹಬ್ಬ, ಎಲ್ಲರ ಜತೆ ಬಾಳುವುದು ಅದರ ಗುಟ್ಟು ಎಂಬ ಕಗ್ಗದ ಸಾಲುಗಳು ಸೇರಿದಂತೆ ಹಲವು ಕಗ್ಗಗಳನ್ನು ಉಲ್ಲೇಖಿಸಿ ಬಜೆಟ್‌ನ ಸಾರವನ್ನು ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುನ್ಸಿಪಲ್ ಬಾಂಡ್ ಮೂಲಕ ಪೂರ್ವ ಪಾಲಿಕೆಗೆ ₹200 ಕೋಟಿ ಸಂಗ್ರಹ ಗುರಿ
ಬೆಂಗಳೂರಿನ ಪೂರ್ವ, ಕೇಂದ್ರ ಪಾಲಿಕೆಗಳಿಂದ ₹7,316 ಕೋಟಿ ಬಜೆಟ್‌ ಮಂಡನೆ