ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಕೇಂದ್ರ ತಾರತಮ್ಯ

KannadaprabhaNewsNetwork | Updated : Sep 12 2024, 01:47 AM IST

ಸಾರಾಂಶ

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ವರ್ಷಗಳೇ ಕಳೆದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡದೆ ಕುಂಟುನೆಪ ಹೇಳುತ್ತಾ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸ್ವತಃ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಬರೆದ ಪತ್ರದಲ್ಲಿ ಜಗ್ಗಜಾಹೀರಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ವರ್ಷಗಳೇ ಕಳೆದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡದೆ ಕುಂಟುನೆಪ ಹೇಳುತ್ತಾ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸ್ವತಃ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಬರೆದ ಪತ್ರದಲ್ಲಿ ಜಗ್ಗಜಾಹೀರಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಆರೋಪಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಜಲಸಂಪನ್ಮೂಲ ಸಚಿವರ ಕಾರ್ಯದರ್ಶಿ ದೇಬಾಶ್ರೀ ಮುಖರ್ಜಿ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತಾಗೆ ಪತ್ರ ಬರೆದಿದ್ದು ಭದ್ರಾ ಮೇಲ್ದಂಡೆ ಯೋಜನೆಗೆ ಅಕ್ಟೋಬರ್ 2022ರಲ್ಲಿ ಅನುಮೋದನೆ ನೀಡಿ ₹5300 ಕೋಟಿ ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರದ ಸಾರ್ವಜನಿಕ ಹೊಡಿಕೆ ಮಂಡಳಿ ಶಿಫಾರಸ್ಸು ಮಾಡಿದೆ. ಅಲ್ಲದೆ ರಾಜ್ಯ ಸರ್ಕಾರದ ಕೋರಿಕೆಯಂತೆ ಆಗಸ್ಟ್ 2023ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆ-ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮದ ಅಡಿಯಲ್ಲಿ ಹಣಕಾಸಿನ ನೆರವು ನೀಡಲು ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಪ್ರಸ್ತಾವನೆ ತೆಗೆದುಕೂಂಡಿದ್ದು, ಆದಾಗ್ಯೂ ಈ ಯೋಜನೆ ಸಚಿವಾಲಯದ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಭಾಗಶಃ ಹಣಕಾಸಿನ ನೆರವಿಗೆ ಸೇರಿಸಲು ಮತ್ತು ಅನುಮೋದನೆ ನೀಡಲು ನವೀಕರಿಸಿದ ಹಣಕಾಸಿನ ವಿವರಗಳ ಸಂಕಲನದ ಅಗತ್ಯವಿದೆ ಎಂದರು.

ಇದರಲ್ಲಿ ಮಾಡಿದ ವೆಚ್ಚ, ಸಮತೋಲನ ವೆಚ್ಚ ಮತ್ತು ಬಾಕಿ ವೆಚ್ಚದ ಆಧಾರದ ಮೇಲೆ ನವೀಕರಿಸಿದ ಅರ್ಹ ಕೇಂದ್ರೀಯ ನೆರವು ಸೇರಿದಂತೆ ಯೋಜನೆಯ ಸೇರ್ಪಡೆಗೆ ಸಂಬಂಧಪಟ್ಟ ನಿರ್ಧಾರವು ಯೋಜನೆ ಅಡಿಯಲ್ಲಿ ಲಭ್ಯವಿರುವ ನಿಧಿಗಳು, ಬೌಗೋಳಿಕ ವಿತರಣೆ ಮತ್ತು ಇತರೆ ಆದ್ಯತೆಗಳ ಮೇಲೆ ಅವಲಂಬಿಸಿರುತ್ತದೆ ಎಂದು ಲಿಖಿತವಾಗಿ ಹೇಳುವ ಮೂಲಕ ಸದ್ಯದ ಮಟ್ಟಿಗೆ ಈ ಯೋಜನೆಗೆ ಕೇಂದ್ರ ಸರ್ಕಾರದ ಹಣಕಾಸಿನ ನೆರವು ಸಿಗುವುದು ಕಷ್ಟಸಾಧ್ಯ ಎಂಬುದನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದೆ ಎಂದರು. ಕೇಂದ್ರ ಸರ್ಕಾರ ಕೇವಲ ಚುನಾವಣೆಗಾಗಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಯೋಜನೆ ಎಂದು ಘೋಷಣೆ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನುದಾನ ಬಿಡುಗಡೆ ಮಾಡಲು ಸಾಕಷ್ಟು ತಾರತಮ್ಯ ನೀತಿ, ಹಲವು ಅನರ್ಥ ತಾಂತ್ರಿಕ ಕಾರಣಗಳನ್ನು ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ. ಈ ಬಗ್ಗೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರುವ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಂಸದರು, ಮುಖಂಡರು, ರೈತರು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ, ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಟ್ಟ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಮ್ಮ ಪಾಲಿನ ಹಕ್ಕನ್ನು ಪಡೆಯಲು ಸನ್ನದ್ಧರಾಗಬೇಕು ಎಂದು ಜಯಚಂದ್ರ ಹೇಳಿಕೆ ನೀಡಿದ್ದಾರೆ.

Share this article