ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತ ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರದ (ಒಓಅಈಅ) ಉಪ ನಿರ್ದೇಶಕ ಕರಣ್ ಚೌಧರಿ ಅವರನ್ನೊಳಗೊಂಡ ಕೇಂದ್ರ ತಂಡವು ಕೆ.ಆರ್.ಎಸ್‌ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 173 ಮಿ.ಮೀ. ಮಳೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಶೇ.44ರಷ್ಟು ಕೊರತೆಯಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ 360 ಮಿ.ಮೀ. ಮಳೆಯಾಗಬೇಕಿದ್ದು, ಈವರೆಗೆ 173 ಮಿ.ಮೀ. ಮಳೆಯಾಗಿದೆ. ಮುಂಗಾರು ಪೂರ್ವ ಅವಧಿಯಾದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿಯೂ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ ಎಂದರು.ಕಳೆದ 20 ವರ್ಷಗಳ ಮಳೆ ದಾಖಲೆಗಳನ್ನು ಗಮನಿಸಿದಾಗ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾದ ವರ್ಷಗಳಲ್ಲಿ ಒಂದಾಗಿದೆ. ಮಳೆ ಕೊರತೆಯಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದರು.
ಪ್ರಸ್ತುತ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ ಹಾಗೂ ಮುಂದಿನ ದಿನಗಳ ಅಗತ್ಯವನ್ನು ಗಮನಿಸಿದರೆ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರಸಕ್ತ ಬರ ಪರಿಸ್ಥಿತಿಯಲ್ಲಿ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಹಾಗೂ ಮಿತವ್ಯಯದಿಂದ ಬಳಸುವುದು ಅಗತ್ಯವಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದರೊಂದಿಗೆ, ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
289 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಕೆ.ಆರ್. ನಂದಿನಿ
ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ ಏರಿಳಿತವಾಗುತ್ತಿದ್ದು, ಸದ್ಯ ಸುಮಾರು 29ರಿಂದ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸತತವಾಗಿ ಉತ್ತಮ ಮಳೆಯಾದಲ್ಲಿ ಅಂತರ್ಜಲ ಮರುಪೂರಣಗೊಂಡು ಪರಿಸ್ಥಿತಿ ಸುಧಾರಿಸಲಿದೆ. ಆದರೆ, ಮಳೆ ಕೊರತೆಯಿಂದಾಗಿ ಕೊಳವೆಬಾವಿಗಳ ನೀರಿನ ಇಳುವರಿ ಗಣನೀಯವಾಗಿ ಕುಸಿದಿದೆ ಎಂದರು.
ಸಭೆಯಲ್ಲಿ ಜಿಲ್ಲೆಯ ಮಳೆ ಪರಿಸ್ಥಿತಿ, ಕೃಷಿ ಹಾಗೂ ಬೆಳೆಗಳ ಸ್ಥಿತಿ, ಕುಡಿಯುವ ನೀರಿನ ಲಭ್ಯತೆ, ಜಲಾಶಯಗಳ ನೀರಿನ ಸಂಗ್ರಹ ಸೇರಿದಂತೆ ಬರ ಪರಿಸ್ಥಿತಿಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಕೇಂದ್ರ ತಂಡವು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.