ಮನ್‌ಮುಲ್ ಹಗರಣ: ನ್ಯಾಯಾಂಗ ತನಿಖೆಗೆ ಆಗ್ರಹ

KannadaprabhaNewsNetwork |  
Published : Oct 07, 2026, 01:45 AM IST
೬ಕೆಎಂಎನ್‌ಡಿ-೩ಹಾಲಿನಪುಡಿ ಕಲಬೆರಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ  ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮನ್‌ಮುಲ್ ಕತ್ತು ಹಿಸುಕಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಆಡಳಿತ ಮಂಡಳಿ ಮತ್ತು ಅಲ್ಲಿನ ಅಧಿಕಾರಿಗಳಿಗೆ ತಕ್ಕಪಾಠ ಕಲಿಸಬೇಕು. ರಾಜಕಾರಣಿಗಳು ಲೂಟಿ ಮಾಡಲು ಮನ್‌ಮುಲ್‌ನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ, ನಾಪತ್ತೆ ಪ್ರಕರಣ ಹಾಗೂ ಇತರೆ ಹಗರಣಗಳ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನ್‌ಮುಲ್ ಸಂಸ್ಥೆಯನ್ನು ದಿವಾಳಿ ಮಾಡಲು ಹೊರಟಿರುವ ಲೂಟಿಕೋರರು ಮತ್ತು ರೈತ ದ್ರೋಹಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಹಾಲಿನಪುಡಿ ಕಲಬೆರಕೆ ಮತ್ತು ಕಳ್ಳತನದ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಅನಗತ್ಯ ನೇಮಕಾತಿ, ಭ್ರಷ್ಟಾಚಾರ, ಟೆಂಡರ್ ಹಗರಣ, ಹಾಲು-ನೀರು ಹಗರಣ, ಭೂಮಿ ಖರೀದಿ ಹಗರಣ, ಮೆಗಾ ಡೇರಿ ಹಗರಣಗಳ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯಕೀಯ ವೆಚ್ಚ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಮನ್‌ಮುಲ್ ಕತ್ತು ಹಿಸುಕಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಆಡಳಿತ ಮಂಡಳಿ ಮತ್ತು ಅಲ್ಲಿನ ಅಧಿಕಾರಿಗಳಿಗೆ ತಕ್ಕಪಾಠ ಕಲಿಸಬೇಕು. ರಾಜಕಾರಣಿಗಳು ಲೂಟಿ ಮಾಡಲು ಮನ್‌ಮುಲ್‌ನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮನ್‌ಮುಲ್ ಹಗರಣವು ಮನೆ ಮನೆ ಮಾತಾಗಿದೆ. ರೈತರು ಹಾಲು ಕರೆಯುವುದನ್ನೇ ಜೀವನ ಮಾಡಿಕೊಂಡಿದ್ಧಾರೆ. ಅಂತಹ ಹಾಲಿಗೆ ನೀರು ಬೆರೆಸಿದರು. ಈಗ ಹಾಲಿನ ಪುಡಿ ಕಲಬೆರಕೆ ಮಾಡಿದ್ದಾರೆ. ನೇಮಕಾತಿಯಲ್ಲೂ ಅಕ್ರಮ ಎಸಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿಗಳು ಅಕಾರ ನಡೆಸಿ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇಂತಹವರು ಮತ್ತೆ ತಪ್ಪು ಮಾಡದ ರೀತಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ವಿವಿಧ ಸಂಘಟನೆಯ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ದೇವಿ, ಡಿ.ಕೆ.ಲತಾ, ಶೋಭಾ, ಎಂ.ಇ.ಮಹದೇವು, ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ್, ನಾಗಮಣಿ, ರಾಮಚಂದ್ರ, ಎಂ.ಕೆ.ಜವರೇಗೌಡ, ಬೋರಮ್ಮ, ಚಂದ್ರು ಇತರರು ಭಾಗವಹಿಸಿದ್ದರು.ಇಂದು ಬಿಜೆಪಿ ರೈತ ಮೋರ್ಚಾದಿಂದ ಮನ್ಮುಲ್‌ ಕಚೇರಿ ಮುತ್ತಿಗೆ

ಮದ್ದೂರು:ಮನ್ಮುಲ್‌ನಲ್ಲಿ ನಡೆದಿರುವ ಕೋಟ್ಯಂತರ ರು. ಭ್ರಷ್ಟಾಚಾರ, ಕಲಬೆರಕೆ ಹಾಲಿನ ಪುಡಿ ಪ್ರಕರಣದ ಬಗ್ಗೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಇಂದು ಗೆಜ್ಜಲಗೆರೆ ಗ್ರಾಮದ ಜಿಲ್ಲಾ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.

ಕೋಟ್ಯಂತರ ಗ್ರಾಹಕ ಕುಟುಂಬ ಹಾಗೂ ಮಕ್ಕಳು ಬಳಸುವ ಹಾಲು ಮತ್ತು ಹಾಲಿನ ಪುಡಿ ಕಲಬೆರಕೆ ಮಾಡಿರುವ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು. ಕಾಂಗ್ರೆಸ್ ಮುಖಂಡರು ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಚುನಾವಣೆಯಿಂದ ನಿರ್ಬಂಧಿಸಬೇಕು. ಐದಾರು ತಿಂಗಳ ಹಿಂದೆಯೇ ಗೊತ್ತಿದ್ದರೂ ಮುಚ್ಚಿಟ್ಟ ಆಡಳಿತ ಮಂಡಳಿ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗುವುದು.480 ಹುದ್ದೆಗಳ ನೇಮಕಾತಿ, ಮೇಘಾ ಡೇರಿ ಸ್ಥಾಪನೆ, ಹಾಲು-ನೀರು ಮಿಶ್ರಣ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು. ರೈತರಿಗೆ 5 ತಿಂಗಳಿಂದ ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗುವುದು.

ಮನ್ಮುಲ್ ಉಳಿವಿಗಾಗಿ ರೈತರೇ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಗೆ ಕರೆ ನೀಡುತ್ತಿದ್ದು, ರೈತರು ಡೇರಿ ಎಲ್ಲಾ ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರರು ಈ ಹೋರಾಟಕ್ಕೆ ಭಾಗಿಯಾಗಿ ರೈತರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡಬೇಕು. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷನೇ ಆರೋಪಿಯಾಗಿದ್ದು, ಇದರಲ್ಲಿ ಹಲವು ಕಾಣದ ದೊಡ್ಡ ದೊಡ್ಡ ತಿಮಿಂಗಿಲಗಳಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ತಿಳಿಸಿದೆ.ಮನ್ಮುಲ್ ನಲ್ಲಿ ಹಗರಣ: ಸಿಬಿಐಗೆ ವಹಿಸಿ ವಡ್ಡರಹಳ್ಳಿ ಧನಂಜಯ ಆಗ್ರಹ

ಕೆ.ಆರ್.ಪೇಟೆ:ಮನ್ಮುಲ್ ನಲ್ಲಿ ನಡೆದಿರುವ ಕೆನೆರಹಿತ ಹಾಲಿನ ಪುಡಿ ದಾಸ್ತಾನು ಕೊರತೆ, ಕಳ್ಳತನ, ಕಲಬೆರಕೆ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ತಾಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ವಡ್ಡರಹಳ್ಳಿ ಧನಂಜಯ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಸಹಕಾರ ಸಚಿವರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು ಮನ್ಮುಲ್ ಸಂಸ್ಥೆಯು ಜಿಲ್ಲೆಯ ಲಕ್ಷಾಂತರ ಹಾಲು ಉತ್ಪಾದಕ ರೈತರ ಜೀವನಾಡಿಯಾಗಿದೆ. ಆದರೆ, ಕೆಲವರು ಹಾಲಿನ ಪುಡಿ ಕಲಬೆರೆಕೆ ಮತ್ತು ದಾಸ್ತಾನು ಕೊರತೆ ಪ್ರಕರಣದಲ್ಲಿ ಸಂಸ್ಥೆಗೆ ಕೋಟ್ಯಾಂತರ ರು ನಷ್ಟ ಮಾಡಿ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.ಪ್ರಕರಣವನ್ನು ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದರೂ ಈ ಹಿಂದೆ ಇದೇ ಮನ್ಮುಲ್ ನಲ್ಲಿ ನಡೆದಿದ್ದ ನೀರು ಹಾಲಿನ ಪ್ರಕರಣದಂತೆ ಈ ತನಿಖೆಯೂ ಹಳ್ಳ ಹಿಡಿಯಬಹುದೆಂಬ ಭಾವನೆ ಹಾಲು ಉತ್ಪಾದಕರ ರೈತರು ಸೇರಿದಂತೆ ಜಿಲ್ಲೆ ಜನಸಾಮಾನ್ಯರಲ್ಲಿದೆ. ಪ್ರಕರಣದ ವ್ಯಾಪ್ತಿ ಕೇವಲ ಕಲಬೆರಕೆ, ಕಳ್ಳತನ ಹಾಗೂ ದಾಸ್ತಾನು ಕೊರತೆಗೆ ಸೀಮಿತವಾಗದೆ ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆ ತರಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಕರಣದ ಪಾರದರ್ಶಕ ತನಿಖೆಗಾಗಿ ರಾಜ್ಯ ಸರ್ಕಾರ ಮನ್ಮುಲ್ ಹಾಲಿನ ಪುಡಿ ಪ್ರಕರಣವನ್ನು ಸಿಬಿಐ ಗೆ ತನಿಖೆಗೆ ನೀಡುವ ಮೂಲಕ ರಾಜ್ಯದ ಹಾಲು ಉತ್ಪಾದಕರ ರೈತರು ಮತ್ತು ನಂದಿನಿ ಉತ್ಪನ್ನಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವಂತೆ ವಕೀಲ ಧನಂಜಯ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋರ್ಟ್‌ನಲ್ಲಿನ ಉಪ್ಪಾರ, ದಲಿತರ ಜಾಗ ಬಗ್ಗೆ ಗೊಂದಲ ಬೇಡ
ಬರದ ನಡುವೆ ದಸರಾ ಬೇಡ: ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ ನಿರಾಕರಿಸಲಿ: ಶಾಂತವೇರಿ ಗೋಪಾಲಗೌಡ