ಕನ್ನಡಪ್ರಭ ವಾರ್ತೆ ಮಂಡ್ಯ
ಆರೋಪಿಗಳನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದ ಪ್ರಸಂಗ ಹಿಂದೆಂದೂ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ಅಂತಹದೊಂದು ಹೊಸ ಪ್ರಯೋಗಕ್ಕೆ ಮದ್ದೂರು ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎಸ್.ನವೀನ್ ಮುಂದಾಗಿದ್ದರು. ಇದರ ಹಿಂದಿನ ಉದ್ದೇಶವೇನೆಂಬುದು ನಿಗೂಢ. ವಿಚಾರಣೆ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಕಲಹ ತಾರಕಕ್ಕೇರಿತ್ತು. ಏರಿದ ಧ್ವನಿಯಲ್ಲಿ ಇಬ್ಬರ ನಡುವೆ ಮಾತಿನ ಕಲಹವೇರ್ಪಟ್ಟು ಜನರು ಠಾಣೆ ಕಡೆ ಮುಖ ಮಾಡುವಂತಾಗಿತ್ತು. ಕೊನೆಗೆ ಠಾಣೆಯ ಕಿಟಕಿ-ಬಾಗಿಲುಗಳನ್ನು ಬಂದ್ ಮಾಡಿ ವಿಚಾರಣೆ ನಡೆಸುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದು ಸಹಜವಾಗಿಯೇ ಪೊಲೀಸ್ ಅಧಿಕಾರಿಗಳಿಗೆ ಪರಸ್ಪರ ಮುಜುಗರ ಉಂಟುಮಾಡಿತ್ತು.
ಪೊಲೀಸ್ ಇಲಾಖೆ ನಿಯಮದ ಪ್ರಕಾರ ಯಾವುದೇ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸುವ ಪದ್ಧತಿ ಇಲ್ಲ. ಆದರೆ, ಕಲಬೆರಕೆ ಹಾಲಿನಪುಡಿ ಪ್ರಕರಣದಲ್ಲಿ ಯು.ಸಿ.ಶಿವಕುಮಾರ್ ಮತ್ತು ಜಾಧವ್ ಅವರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿ ಕಲಹಕ್ಕೆ ಕಾರಣವಾಗಿದ್ದರು. ತನಿಖಾಧಿಕಾರಿಯ ಈ ನಡೆಯ ಬಗ್ಗೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳಲ್ಲೂ ಅಸಮಾಧಾನ ಮೂಡಿಸಿತ್ತು. ಅಂತಿಮವಾಗಿ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರು ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ ಎಸ್.ಬಿ.ಯಶವಂತಕುಮಾರ್ ಅವರಿಗೆ ತನಿಖೆಯ ಹೊಣೆಯನ್ನು ವಹಿಸಿದರು ಎಂದು ತಿಳಿದುಬಂದಿದೆ.ಇದರ ಜೊತೆಗೆ ರಾಜಕಾರಣಿಗಳು ಮತ್ತು ಪ್ರಭಾವಿಗಳ ಒತ್ತಡ ತನಿಖೆಯ ಮೇಲೆ ಬೀರುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣದಿಂದಲೂ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ ಎಂದೂ ಸಹ ಹೇಳಲಾಗುತ್ತಿದೆ.ಸಾಮಾನ್ಯ ಕೈದಿಯಂತೆ ಠಾಣೆಯಲ್ಲೇ ಕಾಲ ಕಳೆದ ಯು.ಸಿ.ಶಿವಕುಮಾರ್
ಶಿವಕುಮಾರ್‌ಗೆ ಜಾಧವ್ ಕೊಟ್ಟಿದ್ದ ೭೫ ಲಕ್ಷ ರು. ಹಣ ಹಂಚಿಕೆಯಾಗಿದೆಯಾ?
ತನಿಖೆ ಸಾಗುತ್ತಿರುವ ಹಾದಿಯನ್ನು ಬಹಳ ಕುತೂಹಲದಿಂದ ಮನ್‌ಮುಲ್‌ನ ಇತರೆ ನಿರ್ದೇಶಕರು ಎದುರು ನೋಡುತ್ತಿದ್ದಾರೆ. ಉಳಿದ ನಿರ್ದೇಶಕರು ಯಾರೂ ತುಟಿಬಿಚ್ಚಿ ಮಾತನಾಡುವ ಧೈರ್ಯ ತೋರುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ನಿರ್ದೇಶಕರೂ ದಿವ್ಯಮೌನಕ್ಕೆ ಶರಣಾಗಿದ್ದಾರೆ. ಇದೀಗ ಯು.ಸಿ.ಶಿವಕುಮಾರ್ ಪೊಲೀಸರ ಬಂಧನಕ್ಕೆ ಒಳಗಾಗಿರುವುದರಿಂದ ಸಹಜವಾಗಿಯೇ ನಿರ್ದೇಶಕರಲ್ಲಿ ನಡುಕ ಹೆಚ್ಚುವಂತೆ ಮಾಡಿದೆ.
ಮನ್‌ಮುಲ್ ಮಾಜಿ ಅಧ್ಯಕ್ಷರೊಬ್ಬರು ಬಂಧನಕ್ಕೊಳಗಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಯು.ಸಿ.ಶಿವಕುಮಾರ್ ಬಂಧನವನ್ನು ತಡೆಯುವುದಕ್ಕೆ ಪ್ರಭಾವಿ ರಾಜಕಾರಣಿಗಳು ಹರಸಾಹಸ ನಡೆಸಿದರು. ವಿಚಾರಣೆ ನೆಪದಲ್ಲೇ ಕಾಲ ದೂಡುವುದಕ್ಕೂ ಯತ್ನಿಸಿದರು. ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನ ನಡೆಸಿ ಅದರಲ್ಲೂ ವಿಫಲರಾದರು. ಕೊನೆಗೆ ಯು.ಸಿ.ಶಿವಕುಮಾರ್ ಬಂಧನ ಅನಿವಾರ್ಯವಾಯಿತು.
ಭದ್ರತೆಗೆ ೧೦ ಮಾಜಿ ಸೈನಿಕರ ನೇಮಕ, ಕಚೇರಿಯೊಳಗೆ ಮೊಬೈಲ್ ಬಳಕೆಗೆ ನಿಷೇಧ
ಹಾಲಿನ ಪುಡಿ ಗೋದಾಮು, ಉತ್ಪಾದನೆಯಾಗುವ ಸ್ಥಳ ಸೇರಿದಂತೆ ಆಯಕಟ್ಟಿನ ಜಾಗಗಳ ಮೇಲೆ ಕಣ್ಣಿಡುವಂತೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲಾಗಿದೆ. ಇವರು ಶಿಫ್ಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲನ್ನು ಅನ್‌ಲೋಡಿಂಗ್ ಮಾಡುವ ಸ್ಥಳ, ಹಾಲಿನ ಪುಡಿ ಪ್ಯಾಕಿಂಗ್ ಜಾಗ, ಗೋದಾಮಿಗೆ ರವಾನೆ ಮಾಡುವ ಸ್ಥಳ, ಸಾಗಣೆ ಮಾಡುವ ಜಾಗಗಳಲ್ಲಿ ಕಾರ್ಯನಿರ್ವಹಣೆಗೆ ನಿಯೋಜನೆ ಮಾಡಲಾಗಿದೆ.
ನೌಕರರು ಪ್ರವೇಶ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ಕೊಠಡಿಯಲ್ಲಿ ಎಲ್ಲರಿಗೂ ಪ್ರತ್ಯೇಕ ಬಾಕ್ಸ್ ನೀಡಿ ಕೀಯನ್ನೂ ನೀಡಲಾಗಿದೆ. ಕಚೇರಿ ಪ್ರವೇಶಿಸುವ ಮುನ್ನವೇ ಮೊಬೈಲ್‌ನ್ನು ಬಾಕ್ಸ್ ಒಳಗಿಟ್ಟು ಕೀಯನ್ನು ತಮ್ಮಲ್ಲೇ ಇಟ್ಟುಕೊಂಡು ಹೋಗಬಹುದು. ಕೆಲಸ ಮುಗಿಸಿದ ಬಳಿಕ ಮತ್ತೆ ಬಾಕ್ಸ್ ತೆರೆದು ಮೊಬೈಲ್‌ನ್ನು ತೆಗೆದುಕೊಂಡು ಹೋಗಬಹುದು. ನೌಕರರು ಕೆಲಸದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಮೊಬೈಲ್ ಸಂಭಾಷಣೆ, ವೀಕ್ಷಣೆ ಹೆಚ್ಚಿದ್ದರಿಂದ ಈ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಹತ್ತು ಮಂದಿ ಮಾಜಿ ಸೈನಿಕರನ್ನು ಆಯಕಟ್ಟಿನ ಜಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
- ರಘು, ವ್ಯವಸ್ಥಾಪಕ ನಿರ್ದೇಶಕರು, ಮನ್‌ಮುಲ್