ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಕೆಪಿಎಸ್ ಶಾಲೆಯಲ್ಲಿ 2009-10ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಾಲಾ ಆವರಣದಲ್ಲಿ ಗುರುಗಳ ಸ್ಮರಿಸಲು ಹಮ್ಮಿಕೊಳ್ಳಲಾಗಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಸರ್ಕಾರಿ ಶಾಲೆ ಉಳಿಯಲು ಹೊಸ ಭಾಷ್ಯ ಬರೆಯಿತು.
30ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಸುಮಾರು 16 ವರ್ಷಗಳ ನಂತರ ಒಂದೆಡೆ ಕಲೆತು ಕುಣಿದು ಕುಪ್ಪಳಿಸಿದರು. ಪರಸ್ಪರ ಆಲಿಂಗನ ಮಾಡಿಕೊಂಡು ಕೈಕೈ ಕುಲುಕಿದರು. ಬಡತನದ ಬೇಗೆಯಲ್ಲಿ ಓದಿ ಉನ್ನತ ಹುದ್ದೆ ಪಡೆದು ಸ್ವಾವಲಂಬನೆ ಬದುಕು ಕಂಡ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.ಕಿಕ್ಕೇರಿಯಲ್ಲಿನ ಕೆಪಿಎಸ್ ಶಾಲೆಗೆ ಕಾಲ್ನಡಿಗೆಯಲ್ಲಿ ಬಂದು ಓದು ಕಲಿಯುತ್ತಿದ್ದ ರೀತಿ, ಮಳೆಯಲ್ಲಿ ನೆನೆದು ಮನೆಗೆ ತೆರಳುತ್ತಿದ್ದ ಸ್ಥಿತಿ, ಶಿಕ್ಷಕರು ತಿಳಿಸಿದ ಪಾಠ ಕಂಠ ಪಾಠ ಮಾಡಿ ಒಪ್ಪಿಸಲು ಪಡುತ್ತಿದ್ದ ಫಜೀತಿ ಎಲ್ಲವನ್ನು ಶಿಕ್ಷಕರ ಮುಂದೆ ತೆರೆದಿಟ್ಟರು.
ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ, ಬ್ಯಾಂಕ್ ಸೇವೆ, ಶಿಕ್ಷಕ ವೃತ್ತಿ, ಉಪನ್ಯಾಸಕ, ಇಂಜಿನಿಯರ್, ಪ್ರಗತಿಪರರೈತ ಮತ್ತಿತರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಬಲು ದೂರದಿಂದತಮ್ಮ ನೆಚ್ಚಿನ ಗುರುಗಳಿಗೆ ವಂದಿಸಿ, ಅಭಿನಂದಿಸಿ ಆಶೀರ್ವಾದ ಪಡೆಯಲು ತುದಿಗಾಲಲ್ಲಿ ನಿಂತಿದ್ದರು.
ಗುರುಗಳಾದ ಎಸ್.ಎಂ.ಬಸವರಾಜು, ಬಿ.ಎನ್. ಪರಶಿವಮೂರ್ತಿ, ಎಸ್. ಭಾಸ್ಕರ್, ಎಸ್.ಎ. ಕುಮಾರ್, ಎಚ್.ಆರ್. ಸುಧೀರ್, ಅಶೋಕ್, ಮದರಸಾಬ್, ಎಚ್.ಎಸ್. ಗೀತಾ, ಜೆ. ರಶ್ಮಿ, ಎಚ್.ಎಸ್. ದಿವ್ಯಕಲಾ, ಮಾಲತಿ, ಎಂ.ಆರ್.ಜಗದಾಂಭ, ಸುಮಾವತಿ, ಸಹಾಯಕಚಂದ್ರೇಗೌಡಅವರಿಗೆ ನೆನಪಿನ ಗುರುಕಾಣಿಕೆ ನೀಡಿ ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಿ ಸಂಭ್ರಮಿಸಿದರು. ಶಿಷ್ಯರೊಂದಿಗೆ ಗುರುಗಳು ಕುಳಿತು ಹೋಳಿಗೆ ಊಟ ಸವಿದರು.