ಮಳೆ ಇಲ್ಲದೇ ಒಣಗಿದ ಬೆಳೆಗಳ ಪರಿಶೀಲಿಸಿದ ಕೇಂದ್ರ ಬರ ಅಧ್ಯಯನ ತಂಡ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಗದಗ ಜಿಲ್ಲೆಯ ಗದಗ ತಾಲೂಕಿನ ಮುಳಗುಂದ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಜಮೀನುಗಳಿಗೆ ಶುಕ್ರವಾರ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಒಣಗಿದ ಬೆಳೆಗಳ ಪರಿಶೀಲಿಸಿತು.

ಜಿಲ್ಲೆಯ ಸ್ಥಿತಿ ಅವಲೋಕನ, ರೈತರೊಂದಿಗೆ ಚರ್ಚೆ, ಬೆಳೆಹಾನಿ ಹೊಲಕ್ಕೆ ತೆರಳಿ ಪರಿಶೀಲನೆ

ಗದಗ: ಜಿಲ್ಲೆಯಾದ್ಯಂತ ತೀವ್ರ ಬರಗಾಲದ ಛಾಯೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಶುಕ್ರವಾರ ಜಿಲ್ಲೆಯ 3 ತಾಲೂಕುಗಳ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರೊಂದಿಗೆ ಚರ್ಚಿಸಿ, ಮಳೆಕೊರತೆಯಿಂದಾಗಿ ಹಾನಿಗೊಳಗಾದ ಜಮೀನುಗಳಿಗೆ ತೆರಳಿ ಅಗತ್ಯ ಮಾಹಿತಿ ಪಡೆದರು. ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಗದಗ ತಾಲೂಕುಗಳಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ಅವರ ನೇತೃತ್ವದ ಬರ ಅಧ್ಯಯನ ತಂಡದ ಸದಸ್ಯರು ಲಕ್ಷ್ಮೇಶ್ವರ ತಾಲೂಕಿನ ಹುಲಗೇರಿ ಬಣ, ಇಟ್ಟಿಗೇರಿ ಕೆರೆ, ದೊಡ್ಡೂರ, ಸೂರಣಗಿ, ಶಿರಹಟ್ಟಿ ತಾಲೂಕಿನ ಚಿಕ್ಕಸವಣೂರ, ಬೆಳ್ಳಟ್ಟಿ, ವಡವಿ, ದೇವಿಹಾಳ, ಛಬ್ಬಿ, ಶೆಟ್ಟಿಕೇರಿ ಕ್ರಾಸ, ಹಾಗೂ ಗದಗ ತಾಲೂಕಿನ ಮುಳಗುಂದ ಗ್ರಾಮಗಳ ಕೃಷಿ ಪ್ರದೇಶಕ್ಕೆ ಭೇಟಿ ಮಳೆ ಕೊರತೆಯಿಂದಾಗಿ ಹಾನಿಗೊಳಗಾದ ಗೋವಿನ ಜೋಳ, ಭತ್ತ, ಮೆನಸಿನಕಾಯಿ,ಶೇಂಗಾ, ಈರುಳ್ಳಿ, ಹತ್ತಿ ಸೇರಿದಂತೆ ವಿವಿಧ ಮುಂಗಾರು ಬೆಳೆಗಳ ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಥ್: ಕೇಂದ್ರ ಬರ ಅಧ್ಯಯನ ತಂಡದಲ್ಲಿ ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ವ್ಹಿ.ಆರ್. ಠಾಕ್ರೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿ ರಾಮ ಹಾಗೂ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ನಿರ್ದೇಶಕ ಕರೀಗೌಡ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತಹಸೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.ಅಧಿಕಾರಿಗಳ ಸಭೆ: ಜಿಲ್ಲೆಯ 3 ತಾಲೂಕುಗಳ ವಿವಿಧ ಗ್ರಾಮಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡುವ ಪೂರ್ವದಲ್ಲಿಯೇ ಗದಗ ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಬರದ ಸ್ಥಿತಿಗತಿಯ ಕುರಿತು ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ತೀವ್ರ ಮಳೆ ಕೊರತೆಯಾಗಿದೆ. ಜೂನನಿಂದ ಸೆಪ್ಟೆಂಬರ್‌ ವರೆಗೆ ವಾಡಿಕೆ ಮಳೆ 372 ಮೀ.ಮೀ ಆಗಬೇಕಿತ್ತು, ಆದರೆ ಅತ್ಯಂತ ಕನಿಷ್ಠ ಮಳೆಯಾಗಿದೆ. ಜೂನ್‌ನಲ್ಲಿ ಶೇ.54, ಆಗಸ್ಟ್‌ನಲ್ಲಿ ಶೇ.62ರಷ್ಟು ಮಳೆ ಕೊರತೆಯಾಗಿದ್ದು ಸಂಪೂರ್ಣ ಬರಗಾಲ ಆವರಿಸಿದೆ. ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಡರಗಿ ಹೊರತು ಪಡಿಸಿ ಉಳಿದ 6 ತಾಲೂಕುಗಳು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲೆಯ 6 ತಾಲೂಕುಗಳಲ್ಲಿ 62132 ಹೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬಿತ್ತನೆಯಾಗಿ ಶೇ.89.88ರಷ್ಟು ಬಿತ್ತನೆಯಾಗಿತ್ತು, ಇದರಲ್ಲಿ 21337 ಹೆ ಈರುಳ್ಳಿ, 40350 ಹೆ, ಮೆಣಸಿನಕಾಯಿ, 445 ಹೆ ಪ್ರದೇಶದಲ್ಲಿ ಟೊಮೆಟೊ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ನೆಲ ಕಚ್ಚಿದೆ. ಜಿಲ್ಲೆಯಲ್ಲಿ ಒಟ್ಟು 1.63 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆ ಮಾಡಲಾಗಿತ್ತು. ಆ ಪೈಕಿ 1.54 ಲಕ್ಷ ಹೆಕ್ಟೆರ್‌ ಪ್ರದೇಶದ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಗದಗ ಜಿಲ್ಲೆಯಲ್ಲಿ 21553.22 ಲಕ್ಷ ಮೊತ್ತದ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷಿ ಇಲಾಖೆಯ 16061.44 ಲಕ್ಷ ಹಾಗೂ ತೋಟಗಾರಿಕೆ ಇಲಾಖೆಯ 5491.78 ಲಕ್ಷ ಬೆಳೆ ಹಾನಿಯಾಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಸಹ ಕುಸಿದಿರುತ್ತದೆ. ಸೆ 15ರಂದು 7.57 ಮೀಟರ್‌ನಲ್ಲಿದ್ದ ಅಂತರ್ಜಲ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 10.51 ಮೀಟರ್ ತಲುಪಿದೆ. ಇದರಿಂದ ಜನ ಜಾನುವಾರುಗಳಿಗೆ ನೀರು ಪೂರೈಕೆ ಕಷ್ಟ ಸಾಧ್ಯ ಎಂದರು. ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಹಾಗೂ ಎಸ್ಪಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ತಹಶೀಲ್ದಾರರು ಸೇರಿದಂತೆ ವಿವಿಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Share this article