ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವೆ ಶೋಭಾ ಕರಂದ್ಲಾಜೆ

KannadaprabhaNewsNetwork |  
Published : May 02, 2026, 02:00 AM IST
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮಾತನಾಡಿದರು. | Kannada Prabha

ಸಾರಾಂಶ

ಬ್ರಿಟಿಷರ ಕಾಲದ ಕಾನೂನುಗಳು ಇಂದಿಗೂ ದೇಶದಲ್ಲಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾಗಿವೆ. ಭಾರತೀಯರಿಗೆ ಭಾರತೀಯತೆ ಇರುವ ಕಾನೂನು ಬೇಕಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಹುಬ್ಬಳ್ಳಿ:

ಕಾರ್ಮಿಕರ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಿಗಳು ಪರಸ್ಪರ ಉತ್ತಮವಾಗಿದ್ದಾರೆ. ಕೆಲಸ ಕೊಡುವವರು ಮತ್ತು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಆ ಕಾಲದಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ. ದೇಶದಲ್ಲಿ ಕಾರ್ಮಿಕರ ಚಿಂತನೆಯಲ್ಲಿ ಬದಲಾವಣೆ ಆಗಬೇಕಿದೆ ಎಂದರು.

ಬ್ರಿಟಿಷರ ಕಾಲದ ಕಾನೂನುಗಳು ಇಂದಿಗೂ ದೇಶದಲ್ಲಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾಗಿವೆ. ಭಾರತೀಯರಿಗೆ ಭಾರತೀಯತೆ ಇರುವ ಕಾನೂನು ಬೇಕಿದೆ. ಹಾಗಾಗಿಯೇ ಕೇಂದ್ರ ಸರ್ಕಾರ ಲೇಬರ್ ಕೋಡ್ ಜಾರಿಗೆ ತರಲಾಗುತ್ತಿದೆ ಎಂದ ಸಚಿವರು, ಇಂದಿಗೂ ಶೇ. 90ರಷ್ಟು ಕಾರ್ಮಿಕರು ಇಎಸ್ಐಸಿ ಮತ್ತು ಇಪಿಎಫ್‌ನಿಂದ ಹೊರಗಿದ್ದಾರೆ. ದೇಶದಲ್ಲಿ 80 ಕೋಟಿ ಜನರು ಮಾತ್ರ ಕೆಲಸ ಮಾಡುತ್ತಾರೆ. ಉಳಿದವರು ಮಕ್ಕಳು, ವೃದ್ಧರು, ಅಂಗವಿಕಲರಿದ್ದಾರೆ. ಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ಸಿಗುತ್ತವೆ. ಆದರೆ, ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಅವರಿಗೂ ಪಿಎಫ್, ಇಎಸ್ಐಸಿ ಸೌಲಭ್ಯಗಳು ದೊರೆಯಬೇಕು ಎಂದರು.

ಇಪಿಎಫ್, ಇಎಸ್‌ಐಸಿ ಕೇವಲ ಕೆಲವರಿಗೆ ಮಾತ್ರ ಸೀಮಿತ ಆಗಬಾರದು. ಮುಂದಿನ ದಿನಗಳಲ್ಲಿ ಇಎಸ್‌ಐಸಿ ಸೌಲಭ್ಯ, ಉಚಿತ ಚಿಕಿತ್ಸೆ ಎಲ್ಲ ವರ್ಗಕ್ಕೆ ಸಿಗಬೇಕು. ಕಾರ್ಮಿಕರು ಕೇವಲ ಇಎಸ್ಐಸಿಗೆ ಮಾತ್ರ ಅವಲಂಭಿತರಾಗದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸಹ ಅದರ ವೆಚ್ಚ ಭರಿಸಲಾಗುವುದು. ಮುಂದಿನ ದಿನಗಳಲ್ಲಿ ಪಿಎಫ್ ಹಣವನ್ನು ಎಟಿಎಂ ಮೂಲಕ ಪಡೆಯಬಹುದು ಎಂದು ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ‌ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆ ಸಬಲೀಕರಣ ಆಗಬೇಕಿದೆ. ಅದು ಕಾರ್ಮಿಕರಿಂದ ಮಾತ್ರ ಸಾಧ್ಯವಿದ್ದು ಅವರು ದೇಶದ ಆರ್ಥಿಕ ಬೆನ್ನೆಲುಬು ಆಗಿದ್ದಾರೆ. ಕಾರ್ಮಿಕರಿಗೂ ಕೂಡ ಹೆಚ್ಚಿನ ಸೌಲಭ್ಯ ಒದಗಿಸುವಂತಹ ಕಾರ್ಯಗಳಾಗಬೇಕು ಎಂದರು.

ಕರ್ನಾಟಕ-ಗೋವಾದ ಹೆಚ್ಚುವರಿ ಭವಿಷ್ಯ ನಿಧಿ ಆಯುಕ್ತ ಜಯಕುಮಾರ ಮಾತನಾಡಿದರು. ಈ ವೇಳೆ ಇಎಸ್‌ಐ ಮತ್ತು ಇಪಿಎಫ್ಒ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ವಿತರಿಸಲಾಯಿತು.

ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಶುತೋಷ್ ತಿವಾರಿ, ಸಹಾಯಕ ಕಾರ್ಮಿಕ ಆಯುಕ್ತ ಎಂ. ರಾಮನಾಥನ್, ಎಸ್ಎಸ್ಒ ನಿರ್ಮಲಾ ದಾವಣೆ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಮಾಜಿ ಮೇಯರ್ ವೀರಣ್ಣ ಸವಡಿ, ಮಹಾದೇವ ಕರಮರಿ, ಸಿದ್ದೇಶ್ವರ ಕಮ್ಮಾರ, ಉದಯ ರೇವಣಕರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಮರುಪಾವತಿ
32 ಕೋಟಿ ಅಸಂಘಟಿತ ಕಾರ್ಮಿಕರು ಇಎಸ್‌ಐ -ಇಪಿಎಫ್‌ಒ ವ್ಯಾಪ್ತಿಗೆ