32 ಕೋಟಿ ಅಸಂಘಟಿತ ಕಾರ್ಮಿಕರು ಇಎಸ್‌ಐ -ಇಪಿಎಫ್‌ಒ ವ್ಯಾಪ್ತಿಗೆ

KannadaprabhaNewsNetwork |  
Published : May 02, 2026, 02:00 AM IST
ಶೋಭಾ ಕರಂದ್ಲಾಜೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಇಪಿಎಫ್‌ಒಗೆ ಪ್ರತಿ ವರ್ಷ ₹10ರಿಂದ ₹12 ಸಾವಿರ ಕೋಟಿಗೂ ಅಧಿಕ ಹಣ ನೀಡುತ್ತಿದೆ. ಇದರೊಟ್ಟಿಗೆ ವಿವಿಧ ರಾಜ್ಯಗಳು ಶೇ.1 ರಷ್ಟು ಸೆಸ್ ಸಂಗ್ರಹಿಸುತ್ತಿವೆ. ಇದರ ಸದುಪಯೋಗವಾಗದೇ ಹಗರಣಗಳ ವಾಸನೆ ಬರುತ್ತಿದೆ.

ಹುಬ್ಬಳ್ಳಿ:

ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದ 29 ಹಳೆಯ ಕಾರ್ಮಿಕ ಕಾನೂನು ಸರಳೀಕರಿಸಿ, 4 ನೂತನ ಕಾರ್ಮಿಕ ಸಂಹಿತೆ ಜಾರಿಗೆ ತರಲಾಗುತ್ತಿದ್ದು, ಸಾಮಾಜಿಕ ಭದ್ರತಾ ಸಂಹಿತೆಯಡಿ 32 ಕೋಟಿ ಅಸಂಘಟಿತ ಕಾರ್ಮಿಕರನ್ನು ಇಎಸ್‌ಐ, ಇಪಿಎಫ್‌ಒ ವ್ಯಾಪ್ತಿಗೆ ಸೇರಿಸಲಾಗುತ್ತಿದೆ ಎಂದು ರಾಜ್ಯ ಕಾರ್ಮಿಕ, ಉದ್ಯೋಗ ಇಲಾಖೆಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ, ಇಎಸ್‌ಐಸಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 4 ಸಂಹಿತೆಗಳು ಜಾರಿಗೊಂಡಿವೆ. ಈ ಸಂಹಿತೆಗಳನ್ನು ಬಹುತೇಕ ರಾಜ್ಯಗಳು ಒಪ್ಪಿಕೊಂಡಿದ್ದು, ವಿವಿಧ ರಾಜ್ಯಗಳ ಕೈಗಾರಿಕೆ, ಉತ್ಪಾದನೆಗೆ ಅನುಗುಣವಾಗಿ ಮೇ 5 ರಂದು 4 ಸಂಹಿತೆಗಳು ಕಾನೂನಾಗಿ ಮಾರ್ಪಾಡಾಗಲಿವೆ ಎಂದರು.

ಹಗರಣಗಳ ವಾಸನೆ:

ಕೇಂದ್ರ ಸರ್ಕಾರ ಇಪಿಎಫ್‌ಒಗೆ ಪ್ರತಿ ವರ್ಷ ₹10ರಿಂದ ₹12 ಸಾವಿರ ಕೋಟಿಗೂ ಅಧಿಕ ಹಣ ನೀಡುತ್ತಿದೆ. ಇದರೊಟ್ಟಿಗೆ ವಿವಿಧ ರಾಜ್ಯಗಳು ಶೇ.1 ರಷ್ಟು ಸೆಸ್ ಸಂಗ್ರಹಿಸುತ್ತಿವೆ. ಇದರ ಸದುಪಯೋಗವಾಗದೇ ಹಗರಣಗಳ ವಾಸನೆ ಬರುತ್ತಿದೆ. ಇದರ ತನಿಖೆ ನಡೆಸಲಾಗುವುದು. ಬಿಜೆಪಿ ಬಿಟ್ಟು ಉಳಿದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾರ್ಮಿಕರ ಕಲ್ಯಾಣವಾಗುತ್ತಿಲ್ಲ. ಕೇಂದ್ರ ಸರ್ಕಾರದ ಕಾರ್ಮಿಕ ನಿಧಿ ಸಹ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ₹200 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಇಎಸ್‌ಐ ಆಸ್ಪತ್ರೆ ನಿರ್ಮಿಸಿದೆ. ಆದರೆ, ರಾಜ್ಯ ಸರ್ಕಾರ ಇದರ ಉದ್ಘಾಟನೆಗೂ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ಗೂಂಡಾ ಸರ್ಕಾರ ನೆಲಕಚ್ಚಲಿವೆ:

ಪಂಚ ರಾಜ್ಯ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಗೂಂಡಾ ಸರ್ಕಾರಗಳು ನೆಲಕಚ್ಚಲಿದ್ದು, ಎನ್‌ಡಿಎ ಮೈತಿಕೋಟ ಅಧಿಕಾರದ ಗದ್ದುಗೆ ಏರಲಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಗಲಿದೆ ಎಂದು ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳೆಯರಿಗೆ ಮೀಸಲಾತಿ ನೀಡುವ "ನಾರಿಶಕ್ತಿ ವಂದನಾ ವಿಧೇಯಕ "ವನ್ನು ಲೋಕಸಭೆಯ ಕಳೆದ ಅಧಿವೇಶನದಲ್ಲಿ ಮಂಡಿಸಿತ್ತು. ಆದರೆ, ಈ ಮಸೂದೆಗೆ ವಿರೋಧಿಸುವ ಮೂಲಕ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಹಿಳಾ ವಿರೋಧಿ ಧೋರಣೆ ತೋರಿವೆ. ಮಹಿಳಾ ಮೀಸಲಾತಿ, ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಮರುಪಾವತಿ
ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವೆ ಶೋಭಾ ಕರಂದ್ಲಾಜೆ