ಕನ್ನಡಪ್ರಭ ವಾರ್ತೆ ಕಲಬುರಗಿರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನ್ಯಾಯಯುತವಾಗಿ ತೆರಿಗೆ ಪಾಲು ನೀಡದೇ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ತೋರುತ್ತಿದೆ. ನಮ್ಮ ಏಳಿಗೆಗೆ ನಾವು ದುಡಿದು ಕಳುಹಿಸಿದ ತೆರಿಗೆಯಲ್ಲಿ ನಮ್ಮ ಪಾಲಿನ ತೆರಿಗೆ ಹಣ ಪಡೆಯಲು ಚಳುವಳಿ ಮಾಡುವ ಅನಿವಾರ್ಯತೆ ಒದಗಿ ಬಂದಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಶುಕ್ರವಾರ ಕಲಬುರಗಿ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಹನ್ನೆರಡನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮತ್ತು ವಚನ ಚಳುವಳಿಗೆ ನಾಂದಿ ಹಾಡಿದ ನಾಡು ನಮ್ಮದಾಗಿದೆ. ಭಕ್ತಿ ಚಳುವಳಿ, ಸ್ವಾತಂತ್ರ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿ, ಗೋಕಾಕ್ ಚಳುವಳಿ, ಅಪ್ಪಿಕೋ ಚಳುವಳಿ, ದಲಿತ ಚಳುವಳಿ, 371ಜೆ ಚಳುವಳಿ ಹೀಗೆ ಅನೇಕ ಚಳುವಳಿ ಕಂಡ ನಾವು ಇದೀಗ ನಮ್ಮ ನಾಡಿನ ಪ್ರಗತಿಗೆ ಕೇಂದ್ರದಿಂದ ಬರಬೇಕಾದ ತೆರಿಗೆಯ ಪಾಲು ಪಡೆಯಲು ಚಳುವಳಿ ಮಾಡಬೇಕಿದೆ ಎಂದು ಕರೆ ನೀಡಿದರು.
ನಾಲ್ವರಿಗೆ ಸನ್ಮಾನ:
ಸುಗಮ ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗೆ ಬಸಯ್ಯ ಬಿ. ಗುತ್ತೇದಾರ, ಜಾನಪದ-ತತ್ವಪದದಲ್ಲಿನ ಸೇವೆಗೆ ಸೂರ್ಯಕಾಂತ ಪೂಜಾರಿ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನಾಧರಿಸಿ ಸಾಹಿತಿ ಭೀಮಣ್ಣ ಬೋನಾಳ ಹಾಗೂ ಡೊಳ್ಳು ಕುಣಿತ ಕ್ಷೇತ್ರದಿಂದ ಸಂಜು ಬರಗಾಲಿ ಅವರಿಗೆ ಜಿಲ್ಲಾಡಳಿತ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಸ್ಥಬ್ದಚಿತ್ರಗಳ ಮೆರವಣಿಗೆ:
ನಂತರ ನಗರೇಶ್ವರ ಶಾಲೆಯಿಂದ ಆರಂಭವಾದ ವಿವಿಧ ಇಲಾಖೆಯ ಪ್ರಗತಿ ಬಿಂಬಿಸುವ ಸ್ಥಬ್ದಚಿತ್ರಗಳ ಮೆರವಣಿಗೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳ ಅದ್ಭುತ ಕಲಾ ಪ್ರರ್ದಶನ ಕಂಡುಬಂತು. ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗಿಯಾದರು.ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಶಶೀಲ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕನ್ನಡಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಶಾಲಾ ಮಕ್ಕಳು ಇದ್ದರು.
---------ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯಕ್ಕೆ ಅನ್ಯಾಯ69ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶದಲ್ಲಿ ಇದೀಗ ಕ್ಷೇತ್ರ ಪುನರ್ ವಿಂಗಡಣೆಯ ಮಾತು ಜೋರಾಗುತ್ತಿದೆ. ಪುನರ್ ವಿಂಗಡಣೆ ಜನಸಂಖ್ಯೆ ಆಧಾರದ ಮೇಲೆ ಮಾಡಲಾಗುತ್ತದೆ. ಈಗಿನ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯಯಾದರೆ ಪ್ರಸ್ತುತ ಇರುವ ಲೋಕಸಭಾ ಸದಸ್ಯರ ಸಂಖ್ಯೆ 543 ರಿಂದ 846ಕ್ಕೆ ತಲುಪಲಿದೆ ಎಂದರು.ಇದರಲ್ಲಿ ಉತ್ತರ ಭಾರತದಲ್ಲಿ 294 ಮತ್ತು ದಕ್ಷಿಣ ಭಾರತದಲ್ಲಿ ಕೇವಲ 23 ಸಂಖ್ಯೆ ಹೆಚ್ಚಲಿದೆ. ಇದರಿಂದ ನಾಡಿನ ಧ್ವನಿ ದಿಲ್ಲಿಗೆ ಮುಟ್ಟಿಸುವುದು ಕಷ್ಟವಾಗುವುದರಿಂದ ಪುನರ್ ವಿಂಗಡಣೆ ಅನಾಹುತ ತಪ್ಪಿಸಬೇಕಿದೆ ಎಂದರು.
ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ದಕ್ಷಿಣ ಭಾರತದ ಆಂಧ್ರ ಪ್ರದೇಶ ರಾಜ್ಯ 25 ರಿಂದ 20ಕ್ಕೆ, ತಮಿಳನಾಡು 39 ರಿಂದ 30ಕ್ಕೆ, ಕರ್ನಾಟಕ 28 ರಿಂದ 24ಕ್ಕೆ, ತೆಲಂಗಾಣಾ 17 ರಿಂದ 15ಕ್ಕೆ ಸಂಸತ್ ಸದಸ್ಯರ ಸ್ಥಾನ ಕುಸಿಯಲಿದೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ಸದಸ್ಯರ ಸಂಖ್ಯೆ ಸಹ ಹೆಚ್ಚಳವಾಗಲಿದೆ. ಪ್ರಗತಿ ಪರ ರಾಜ್ಯವನ್ನಾಗಿಸಲು ಜನಸಂಖ್ಯೆ ನಿಯಂತ್ರಿಸಿ ಅಭಿವೃದ್ಧಿಪರ ದಾಪುಗಾಲು ಇಡುತ್ತಿರುವ ನಮ್ಮ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ತಿಳಿಸಿದರು.----ಡೊಳ್ಳು 1 ಮತ್ತು ಡೊಳ್ಳು 2
ಕಲಬುರಗಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರ ದೇವಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಶಾಸಕ ಅಲ್ಲಂಪ್ರಭು ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಮನಿ, ಡಿಸಿ ಫೌಜಿಯಾ ತರನ್ನುಮ್ ಇದ್ದಾರೆ.-----
ಫೋಟೋ- ಡೊಳ್ಳು 3, ಡೊಳ್ಳು 4 ಮತ್ತು ಡೊಳ್ಳು 5ಕಲಬುರಗಿ ರಾಜ್ಯೋತ್ಸವದಲ್ಲಿ ಅನೇಕ ಸಾಧಕರಿಗೆ ಸನ್ಮಾನ ನಡೆಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಸಚಿವರು, ಶಾಸಕರು ಪುಷ್ಪ ಅರ್ಪಣೆ ಮಾಡಿದರು.