ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು: ಶೋಭಾ ಕರಂದ್ಲಾಜೆ

KannadaprabhaNewsNetwork | Published : Feb 27, 2024 1:31 AM

ಸಾರಾಂಶ

ದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸಗಳನ್ನು ಕೇಂದ್ರ ಸರ್ಕಾರ ಯುದ್ದೋಪಾದಿಯಲ್ಲಿ ಮಾಡುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

- ರೈಲ್ವೆ ಅಭಿವೃದ್ಧಿ ಕಾಮಗಾರಿಗೆ ಚಿಕ್ಕಮಗಳೂರಲ್ಲಿ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸಗಳನ್ನು ಕೇಂದ್ರ ಸರ್ಕಾರ ಯುದ್ದೋಪಾದಿಯಲ್ಲಿ ಮಾಡುತ್ತಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ನಡೆದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಹತ್ತು ವರ್ಷದ ಅವಧಿಯಲ್ಲಿ 90 ಸಾವಿರ ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗಿದೆ. 25 ಸಾವಿರಕ್ಕಿಂತಲೂ ಹೆಚ್ಚು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಎಲ್ಲಾ ರೈಲ್ವೆ ಲೈನುಗಳ ವಿದ್ಯುಧೀಕರಣ ಮಾಡ ಲಾಗಿದೆ ಎಂದು ತಿಳಿಸಿದರು.

ಅಗತ್ಯವಿರುವ ರೈಲ್ವೆ ಮಾರ್ಗಗಳಿಗೆ ಡಬ್ಲಿಂಗ್ ರೈಲ್ವೆ ಲೈನ್‌ಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. ಮಿತಿ ಮೀರಿದ ರೈಲು ಸಂಚಾರದಿಂದಾಗಿ ರಾಜ್ಯಕ್ಕೆ ಅಗತ್ಯವಿದ್ದ ಕಲ್ಲಿದ್ದಲು ಪೂರೈಕೆ ಆಗುತ್ತಿರಲಿಲ್ಲ. ಇದೀಗ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಸರಕು ಸಾಗಣೆ ರೈಲುಗಳ ಸಂಚಾರ ಮತ್ತು ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಬೇರೆ ಬೇರೆ ಮಾರ್ಗಗಳನ್ನು ನಿರ್ಮಿಸುವ ಮೂಲಕ ಕ್ರಾಂತಿ ಮಾಡಲಾಗಿದೆ ಎಂದು ಹೇಳಿದರು.

ಕಳೆದ 70 ವರ್ಷಗಳ ಅವಧಿಯಲ್ಲಿ 74 ವಿಮಾನ ನಿಲ್ದಾಣಗಳಿದ್ದವು, ಆದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಹೊಸದಾಗಿ 74 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹಲವು ವರ್ಷಗಳ ಬೇಡಿಕೆಯಾಗಿದ್ದ, ಕಡೂರು - ಚಿಕ್ಕಮಗಳೂರು ರೈಲು ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಸಂಚರಿಸುವ ಚಾರ್ಮಾಡಿ ಘಾಟ್ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಕುಸಿಯುತ್ತಿದ್ದು, ಈ ವೇಳೆ ಸಕಲೇಶಪುರ, ಆಗುಂಬೆ ಅಥವಾ ಶೃಂಗೇರಿ ಮಾರ್ಗ ವಾಗಿ ದಕ್ಷಿಣ ಕನ್ನಡಕ್ಕೆ ತೆರಳಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿ ಚಾರ್ಮಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದೆ ಎಂದರು.

ಚಿಕ್ಕಮಗಳೂರಿನಿಂದ ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ರಸ್ತೆಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 400 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಶೃಂಗೇರಿಯಿಂದ ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಕೇಂದ್ರ ಸಚಿವರ ಮನವೂಲಿಸಿ 25 ಕೋಟಿ ರು. ಗಳನ್ನು ಮಂಜೂರು ಮಾಡಿಸಿದ್ದೇನೆ. ತಮ್ಮ ಬೇಡಿಕೆ ಮೇರೆಗೆ ಕೇಂದ್ರ ರೈಲ್ವೆ ಸಚಿವರು ಇಲಾಖೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ ಎಂದರು.

ಚಿಕ್ಕಮಗಳೂರಿನಿಂದ ಹೆಚ್ಚುವರಿ ರೈಲುಗಳ ಓಡಾಟಕ್ಕಾಗಿ ಕೇಂದ್ರ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಇದಕ್ಕೆ ಸಚಿವರು ಸ್ಪಂದಿಸಿ ಭರವಸೆ ನೀಡಿದ್ದಾರೆ. ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ಅಮೃತ್ ರೈಲ್ವೆ ನಿಲ್ದಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು 24 ಕೋಟಿ ಮೀಸಲಿಡಲಾಗಿದೆ. ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಲಿಪ್ಟ್ ಸೌಲಭ್ಯ, ಎಸ್ಕಲೇಟರ್ ನಿರ್ಮಿಸಲಾಗುವುದು. ರೈಲು ನಿಲ್ದಾಣದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗುವುದು, ಪ್ಲಾಟ್ ಪಾರಂ ಅಭಿವೃದ್ಧಿ ಮತ್ತು ಸಿ.ಸಿ ಕ್ಯಾಮರ ಅಳವಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಗೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಬೇಕಾದರೆ ರೈಲು ವ್ಯವಸ್ಥೆ, ರಸ್ತೆ ಸಂಪರ್ಕ ಅಭಿವೃದ್ಧಿ ಪಡಿಸಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ರೈಲು ಹಳಿಗಳ ಅಭಿವೃದ್ಧಿ ಸಾಕಷ್ಟು ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಮೈಸೂರು ರೈಲ್ವೆ ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್, ಅರಸೀಕೆರೆ ರೈಲ್ವೆ ವಾಣಿಜ್ಯ ವಿಭಾಗದ ನಿರೀಕ್ಷಕ ಅಂಬರೀಷ್ ಉಪಸ್ಥಿತರಿದ್ದರು. 26 ಕೆಸಿಕೆಎಂ 3

ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ನಡೆದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಡಿಸಿ ಮೀನಾ ನಾಗರಾಜ್‌, ಮೈಸೂರು ರೈಲ್ವೆ ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌ ಇದ್ದರು.

Share this article