ಕೇಂದ್ರ ಸರ್ಕಾರ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಿದೆ: ರೈತ ಸಂಘ

ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋದ ಮೇಲೆ 3,454 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸಿದೆ. ಆದರೆ ನಾವು ಕೇಳಿದ್ದು ಸುಮಾರು 18 ಸಾವಿರ ಕೋಟಿ. ಹೀಗಾಗಿ ಈಗ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿನ ಹೋರಾಟ ಮುಂದುವರಿಸಬೇಕು.

KannadaprabhaNewsNetwork | Published : Apr 27, 2024 7:55 PM IST / Updated: Apr 28 2024, 12:08 PM IST

 ಮೈಸೂರು :  ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಿದೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋದ ಮೇಲೆ 3,454 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸಿದೆ. ಆದರೆ ನಾವು ಕೇಳಿದ್ದು ಸುಮಾರು 18 ಸಾವಿರ ಕೋಟಿ. ಹೀಗಾಗಿ ಈಗ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿನ ಹೋರಾಟ ಮುಂದುವರಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಕೇಂದ್ರದ ಎನ್.ಡಿ.ಆರ್.ಎಫ್ ಮಾನದಂಡದ ಅಡಿಯಲ್ಲಿ ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರ ಅತಿ ಕಡಿಮೆ ಪ್ರಮಾಣದ ಪರಿಹಾರ ಬಿಡುಗಡೆಗೊಳಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಳಿಕ, ಕೇಂದ್ರ ಬಿಜೆಪಿಯ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಚುನಾವಣೆ ವೇಳೆ ಬಿಜೆಪಿ ಮೈತ್ರಿ ಪಕ್ಷ ಸೋಲಿಸಿ, ರೈತರನ್ನು ಉಳಿಸಿ ಎಂಬ ಅಭಿಯಾನ ಹಮ್ಮಿಕೊಂಡಿದೆ. ಇದರ ಅಂಗವಾಗಿ ಮೊದಲನೇ ಹಂತದ ಚುನಾವಣೆ ವೇಳೆ ಸುಮಾರು ಶೇ. 4ರಷ್ಟು ರೈತರ ಮತಗಳು ಮೈತ್ರಿ ಪಕ್ಷ ವಿರುದ್ಧವಾಗಿ ಚಲಾವಣೆ ಆಗಿರುವ ಸಾಧ್ಯತೆ ಇದೆ. ಇದೇ ರೀತಿ ಎರಡನೇ ಹಂತದಲ್ಲಿಯೂ ಉತ್ತರ ಕರ್ನಾಟಕದಲ್ಲಿಯೂ ರೈತ ಸಂಘ ಅಭಿಯಾನ ಮುಂದುವರಿಸಲಿದೆ ಎಂದು ಅವರು ಹೇಳಿದರು.

ಇನ್ನು, ಬರಗಾಲದ ಕಾರಣ ಪಂಪ್ ಸೆಟ್ ಆಧರಿಸಿ ಕೃಷಿ ಮಾಡುವವರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರೊಡನೆ ವಿದ್ಯುತ್ ಸಂಪರ್ಕದ ಶುಲ್ಕ ಸುಮಾರು 28 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ತಮ್ಮ ಸ್ಥಾನ ಕಳೆದುಕೊಳ್ಳುವುದಾಗಿ ಅವರು ಭವಿಷ್ಯ ನುಡಿದರು.

ಪದಾಧಿಕಾರಿಗಳಾದ ನೇತ್ರಾವತಿ, ಹೊಸೂರು ಕುಮಾರ್, ಪಿ. ಮರಂಕಯ್ಯ, ಕಲ್ಲಹಳ್ಳಿ ಜಯಣ್ಣ, ಹೊಸಕೋಟೆ ಬಸವರಾಜ ಇದ್ದರು.

Share this article