ಹೇಮಾವತಿ ನದಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ: ಹೇಮಾವತಿ ಉಗಮ ಹಿತರಕ್ಷಣಾ ಒಕ್ಕೂಟ

KannadaprabhaNewsNetwork | Published : Apr 28, 2024 1:25 AM

ಸಾರಾಂಶ

ಹೇಮಾವತಿ ನದಿ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯನ್ನು ಕಾವೇರಿ ಉಗಮ ಸ್ಥಾನ ತಲಕಾವೇರಿ ಮಾದರಿಯಲ್ಲಿ ಪವಿತ್ರ ಪುಣ್ಯ ಕ್ಷೇತ್ರವನ್ನಾಗಿ ಪರಿವರ್ತಿಸಲು ಹೇಮೆ ನೀರಿನ ಪ್ರಯೋಜನ ಪಡೆಯುತ್ತಿರುವ 6 ಜಿಲ್ಲೆಗಳ ಸಮಾನ ಮನಸ್ಕ ಚಿಂತಕರು ಸೇರಿ ಟ್ರಸ್ಟ್ ರಚಿಸಿದ್ದು, ಹೇಮಾವತಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲು ಎಲ್ಲರೂ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಲಕಾವೇರಿ ಮಾದರಿಯಲ್ಲಿ ಹೇಮಾವತಿ ನದಿ ಉಗಮ ಸ್ಥಳವನ್ನು ಅಭಿವೃದ್ಧಿಗೊಳಿಸಲು ಪ್ರಾಧಿಕಾರ ರಚಿಸುವಂತೆ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಇತ್ತೀಚೆಗೆ ಪಟ್ಟಣದಲ್ಲಿ ಒಕ್ಕೂಟದ ಅಧ್ಯಕ್ಷ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿ.ಆರ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಹೇಮಾವತಿ ನದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಸದಸ್ಯರು ನಿರ್ಧರಿಸಿದರು.

ಬಾಲಕೃಷ್ಣ ಮಾತನಾಡಿ, ಹೇಮಾವತಿಯು ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ 250 ಕಿಮೀಗೂ ಹೆಚ್ಚು ಉದ್ದವಾಗಿ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು, ತುಮಕೂರು ಸೇರಿ 6 ಜಿಲ್ಲೆಗಳಲ್ಲಿ ಹರಿಯುತ್ತದೆ ಎಂದರು.

ಹೇಮಾವತಿ ನದಿ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯನ್ನು ಕಾವೇರಿ ಉಗಮ ಸ್ಥಾನ ತಲಕಾವೇರಿ ಮಾದರಿಯಲ್ಲಿ ಪವಿತ್ರ ಪುಣ್ಯ ಕ್ಷೇತ್ರವನ್ನಾಗಿ ಪರಿವರ್ತಿಸಲು ಹೇಮೆ ನೀರಿನ ಪ್ರಯೋಜನ ಪಡೆಯುತ್ತಿರುವ 6 ಜಿಲ್ಲೆಗಳ ಸಮಾನ ಮನಸ್ಕ ಚಿಂತಕರು ಸೇರಿ ಟ್ರಸ್ಟ್ ರಚಿಸಿದ್ದು, ಹೇಮಾವತಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲು ಎಲ್ಲರೂ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಸರ್ಕಾರ ಹೇಮಾವತಿ ಪ್ರಾಧಿಕಾರವನ್ನು ರಚಿಸಿದರೆ ಸಭಾಭವನ, ಅತಿಥಿ ಗೃಹ, ಶುದ್ಧಗಂಗಾ ಕುಡಿಯುವ ನೀರಿನ ಘಟಕದ ಸ್ಥಾಪನೆ, ರಸ್ತೆಗಳ ಅಗಲೀಕರಣ, ಹೇಮಾವತಿ ಮತ್ತು ಸೋಮಾವತಿ ಉದ್ಯಾನವನಗಳ ನಿರ್ಮಾಣ, ಸಾರಿಗೆ ವ್ಯವಸ್ಥೆ, ಕೆರೆಗಳ ಹೂಳೆತ್ತುವುದು, ಹೇಮಾವತಿ ಹೆಬ್ಬಾಗಿಲು ಮತ್ತು ಪ್ರತಿಮೆ ನಿರ್ಮಾಣ, ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ, 6 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಸಮ್ಮಿಲನದ ಹೇಮಾದ್ರಿ ಉತ್ಸವವನ್ನು ಪ್ರತಿವರ್ಷ ಆಯೋಜಿಸಿ ಜಾವಳಿಯನ್ನು ಸುಂದರ ಪ್ರವಾಸಿ, ಪವಿತ್ರ ಕ್ಷೇತ್ರವಾಗಿಸಬಹುದು ಎಂದರು.

ಹೇಮಾವತಿ ನದಿ ಒಡಲಿನಲ್ಲಿ ಅಕ್ರಮ ಮರಳು ದಂಧೆ ತಡೆ, ಹೇಮೆ ದಡದಲ್ಲಿರುವ ಪಟ್ಟಣಗಳು ಮತ್ತು ಕೈಗಾರಿಕೆಗಳಿಂದ ತ್ಯಾಜ್ಯದ ನೀರು ನದಿ ಸೇರದಂತೆ ತಡೆ ಹಿಡಿದು ಸಂರಕ್ಷಿಸುವುದು. ಪುಣ್ಯಕ್ಷೇತ್ರ ಹೊರನಾಡಿಗೆ ಹೋಗುವ ಪ್ರತಿಯೊಬ್ಬ ಭಕ್ತನೂ ಜಾವಳಿಯತ್ತ ಆಕರ್ಷಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಗೃಹಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಹೋರಾಟ ಸಮಿತಿ ಕಾರ್ಯದರ್ಶಿ ಎಂ.ವಿ.ಜಗದೀಶ್, ನಿರ್ದೇಶಕರಾದ ಟಿ.ಪಿ.ಸುರೇಂದ್ರ, ಬಿ.ಎಂ.ಸುರೇಶ್, ಶಶಿಧರ್, ಮನೋಹರ್, ಅನಂತ್, ಸಮಾಜ ಸೇವಕ ಮಲ್ಲಿಕಾರ್ಜುನ, ಪುಣ್ಯಭೂಮಿ ಸಂಸ್ಥೆ ಅಧ್ಯಕ್ಷ ವಿಠಲಾಪುರ ಸುಬ್ಬೇಗೌಡ, ಹಿರಿಯ ಪತ್ರಕರ್ತ ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಬಲ್ಲೇನಹಳ್ಳಿ ಮಂಜುನಾಥ್, ಮರುವನಹಳ್ಳಿ ಬಸವರಾಜು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಗೌಡ, ಮುಖಂಡರಾದ ರಾಮಸ್ವಾಮಿ, ದೇವೇಗೌಡ, ಬಿ.ಸಿ.ಎಸ್ ಕುಮಾರ್, ಸಿಂಧಘಟ್ಟ ನಾಗೇಶ್ ಸೇರಿ ಹಲವರು ಭಾಗವಹಿಸಿದ್ದರು.

Share this article