ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಪರ

KannadaprabhaNewsNetwork |  
Published : Jan 05, 2026, 01:30 AM IST
ಕೇಂದ್ರ ಸರ್ಕಾರ ರೈತ ಪರವಿರದೆ ಕಾರ್ಪೊರೇಟ್ ಸಂಸ್ಥೆ ಪರ ಕೆಲಸ ಮಾಡುತ್ತಿದೆ : ಮುರುಳಿಧರ್ ಹಾಲಪ್ಪ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಾದ ಅಂಬಾನಿ, ಅದಾನಿಗಳಿಗೆ ಸಾವಿರಾರು ಎಕರೆ ಜಮೀನು ನೀಡುತ್ತಿದ್ದು, ರಾಜ್ಯದ ಬಹುಮುಖ್ಯ ನೀರಾವರಿ ಯೋಜನೆಯಾದ ಎತ್ತಿನ ಹೊಳೆ ನೀರಾವರಿ ಯೋಜನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿಹಿಡಿದು ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಕನ್ನಡಪ್ರಭವಾರ್ತೆ ತಿಪಟೂರು

ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಾದ ಅಂಬಾನಿ, ಅದಾನಿಗಳಿಗೆ ಸಾವಿರಾರು ಎಕರೆ ಜಮೀನು ನೀಡುತ್ತಿದ್ದು, ರಾಜ್ಯದ ಬಹುಮುಖ್ಯ ನೀರಾವರಿ ಯೋಜನೆಯಾದ ಎತ್ತಿನ ಹೊಳೆ ನೀರಾವರಿ ಯೋಜನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿಹಿಡಿದು ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಎಂದು ಆಕ್ರೋಶ ವ್ಯಕ್ತಪಡಿಸಿದರು . ತಾಲೂಕಿನ ಕೆ.ಬಿ.ಕ್ರಾಸ್ ಮತ್ತು ಟೋಲ್ ಮಧ್ಯೆ ಹಾದು ಹೋಗುವ ಎತ್ತಿನಹೊಳೆ ಯೋಜನೆಯ ನಾಲಾ ಕಾಮಗಾರಿ ಸ್ಥಳದಲ್ಲಿ ಭಾನುವಾರ ನಾಲ್ಕು ತಾಲೂಕಿನ ಮುಖಂಡರುಗಳ ಜನಾಂದೊಲನ ಸಭೆಯ ನೇತೃತ್ವವಹಿಸಿ ಮಾತನಾಡಿದರು.

೨೦೧೪ರಲ್ಲಿ ಅಂದಿನ ಸಿಎಂ ಸಿದ್ಧರಾಮಯ್ಯನವರು ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ೨೩ಸಾವಿರ ಕೋಟಿ ರು. ಖರ್ಚಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಒಂದು ನಯಾಪೈಸೆ ಅನುನುದಾನ ನೀಡಿಲ್ಲ. ಸಂಪೂರ್ಣ ಕಾಮಗಾರಿಯ ಜವಾಬ್ದಾರಿ ರಾಜ್ಯ ಸರ್ಕಾರ ಹೊತ್ತಿದೆ. ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಂಟು ಜಿಲ್ಲೆಗಳ ರೈತರ ಬದುಕು ಹಸನಾಗುವುದರ ಜೊತೆಗೆ ಅಂತರ್ಜಲ ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಮುಖ್ಯವಾಗಿ ಇದು ಕೆರೆಗಳನ್ನು ತುಂಬಿಸುವ ಮತ್ತು ಕುಡಿಯುವ ನೀರಿನ ಯೋಜನೆ ಆಗಿದೆ. ಯೋಜನೆಯ ಕಾಮಗಾರಿಯ ಬಗ್ಗೆ ಪ್ರಾರಂಭದಲ್ಲೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಕಾಮಗಾರಿ ಶೇ.೯೦ರಷ್ಟು ಮುಗಿಯುವ ಹಂತ ತಲುಪುವ ಮಟ್ಟಕ್ಕೆ ಬಂದಾಗ ಅರಣ್ಯ ಮತ್ತು ಪರಿಸರ ಇಲಾಖೆ ತಕರಾರು ತೆಗೆದು ನಾಲೆ ಪಕ್ಕ ಹೆಚ್ಚುವರಿಯಾಗಿ ಜಾಗ ತೆಗೆದುಕೊಂಡಿದ್ದೀರಾ ಎಂದು ವಿನಾಕಾರಣ ೧೧ ಪ್ರಶ್ನೆ ಕೇಳಿದೆ. ಅರಣ್ಯ ಪ್ರದೇಶ ಬಳಕೆಯಾಗಿದೆ ಎಂದು ಹೇಳುತ್ತಿರುವ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಎತ್ತಿನಹೊಳೆ ನೀರಾವರಿ ಯೋಜನೆ ಇಲಾಖೆ ಈ ತಕರಾರಿಗೆ ಸರಿಯಾದ ಸಮಜಾಯಿಶಿ ನೀಡಿದೆ. ನವಂಬರ್ ತಿಂಗಳಲ್ಲಿ ದೆಹಲಿಗೆ ತೆರಳಿ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರನ್ನು ಭೇಟಿ ಮಾಡಿ ೭೬ ಲಕ್ಷ ಜನತೆಗೆ ಅನುಕೂಲವಾಗುತ್ತದೆ ಎಂದು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದಾಗ ತೊಡಕು ನಿವಾರಣೆಯ ಬಗ್ಗೆ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಜನವರಿ ಮೊದಲ ವಾರ ಬಂದರೂ ಇನ್ನೂ ಯಾವ ಬೆಳವಣಿಗೆಯೂ ಕಾಣುತ್ತಿಲ್ಲಾ. ಈ ನಿಟ್ಟಿನಲ್ಲಿ ಮುಂದೆ ತುಮಕೂರಿನಲ್ಲಿ ಲಕ್ಷಾಂತರ ಜನ ಸೇರಿಸಿ ಹೋರಾಟ ನಡೆಸಲಾಗುವುದು ಎಂದರು.

ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ನಮ್ಮ ರೈತರು ಕೃಷಿಗೆ ನೀರಿನ ಮೂಲಗಳಾದ ಅಂತರ್ಜಲ, ಕೆರೆ, ಕಟ್ಟೆಗಳನ್ನ ಅವಲಂಬಿಸಿಕೊಂಡಿರುತ್ತಾರೆ. ನಮ್ಮ ಸರ್ಕಾರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ನೀರು ಇಲ್ಲದಿದ್ದರೆ ವ್ಯವಸಾಯವಿಲ್ಲ. ಸತತವಾಗಿ ಒಂದೇ ಸಮನೆ ಮಳೆ ಬರುವುದಿಲ್ಲಾ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡಮನಸ್ಸು ಮಾಡಿ ಸಣ್ಣಪುಟ್ಟ ಲೋಪಗಳನ್ನು ಎತ್ತಿ ಹಿಡಿಯದೆ ಯೋಜನೆಗೆ ಹಸಿರು ನಿಶಾನೆ ತೋರಬೇಕು ಎಂದು ಆಗ್ರಹಿಸಿದರು. ತುಮಕೂರಿನ ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಜಿಲ್ಲೆಯ ಎತ್ತಿನ ಹೊಳೆ ಹೋರಾಟ ಮಾತ್ರವಲ್ಲದೆ ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆಯಿಂದಲೂ ಹೆಚ್ಚಿನ ಅನುಕೂಲತೆಯಾಗಬೇಕಾಗಿದೆ. ಯಾವುದೇ ಕೆಲಸ ಹೋರಾಟವಿಲ್ಲದೆ ಫಲಕಾರಿಯಾಗುವುದಿಲ್ಲ. ಜಿಲ್ಲೆಯಲ್ಲಿ ನೀರಿಗಾಗಿ ಹೋರಾಟ ಅನಿವಾರ್ಯವಾಗಿದೆ. ಎತ್ತಿನ ಹೊಳೆ ಯೋಜನೆ ನೀರಾವರಿ ಹೊರಾಟಕ್ಕೆ ಮುರಳಿಧರ ಹಾಲಪ್ಪ ಕಂಕಣಕಟ್ಟಿ ನಿಂತಿದ್ದಾರೆ. ಅವರ ಹೋರಾಟಕ್ಕೆ ನಮ್ಮ ಸರ್ಕಾರದ ಈ ಜನವಿರೋದಿ ಧೋರಣೆ ಸರಿ ಇಲ್ಲ. ಕೇಂದ್ರ ಸರ್ಕಾರ ಜನಪರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕೆಂದರು. ತಾಲೂಕು ಅಧ್ಯಕ್ಷರುಗಳಾದ ಹುಳಿಯಾರಿನ ಪಿ.ಟಿ. ಚಿಕ್ಕಣ್ಣ ತಿಪಟೂರು ಕಾಂತರಾಜು, ಗುಬ್ಬಿ ವೆಂಕಟೇಶ್, ತುರುವೇಕೆರೆ ಶಂಕರಪ್ಪ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂ, ಸಾವಯುವ ಕೃಷಿಕ ತರಬೇನಹಳ್ಳಿ , ಷಡಕ್ಷರಿ, ಪಕ್ಷದ ಸೇವಾದಳ ಕೆ.ಜಿ. ಕೃಷ್ಣೆಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷರುಗಳಾದ ದೇವರಾಜು, ನಾಗರಾಜು, ಲಕ್ಷ್ಮೀದೇವಮ್ಮ, ಪ್ರಸನ್ನಕುಮಾರ್, ಭಾಗ್ಯಮ್ಮ, ರಾಧಮ್ಮ, ಸುಕನ್ಯಾ, ಆದಿಲ್, ಚಿಕ್ಕನಾಯಕನಹಳ್ಳಿ ಸೇವಾದಳ ಗೋವಿಂದರಾಜು, ಸೇವಾದಳ ಕಿರಣ್ ಕುಮಾರ್ ಸೇರಿಂದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ