ಕಾರ್ಕಳ: ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣಾಕಾಂಕ್ಷಿ ಪರೀಕ್ಷಾರ್ಥಿಗಳ ಪರಿಶ್ರಮಕ್ಕೆ ಕೊಳ್ಳಿ ಇಟ್ಟು, ಅವರ ಕನಸುಗಳನ್ನು ಭಗ್ನಗೊಳಿಸಿದ ಸಿಇಟಿ ಪ್ರಶ್ನಾಪತ್ರಿಕೆ ಸೋರಿಕೆ ಹಗರಣಕ್ಕೆ ಪ್ರಧಾನಿ ಮೋದಿ ಸರ್ಕಾರದ ಬಂಡವಾಳಶಾಹಿ ಪ್ರಾಯೋಜಿತ ಬೇಜವಾಬ್ದಾರಿ ಆಡಳಿತವೇ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.ಮಾಜಿ ಮುಖ್ಯಮಂತ್ರಿ ಮಾನ್ಯ ವೀರಪ್ಪ ಮೊಯ್ಲಿಯವರ ಮಹತ್ವಾಕಾಂಕ್ಷೆಯ ಸಿಇಟಿ ಮೂಲಕ ಗ್ರಾಮೀಣ ಪರಿಸರದ ಕಡು ಬಡವರಿಗೂ ವೈದ್ಯರಾಗುವ ಅವಕಾಶ ದೊರಕಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿದು, ಪಾರದರ್ಶಕತೆಯ ಹೆಸರಿನಲ್ಲಿ ಸಿಇಟಿಯಿಂದ ವೈದ್ಯಕೀಯ ಶಿಕ್ಷಣವನ್ನು ಪ್ರತ್ಯೇಕಿಸಿ, 2017ರಲ್ಲಿ ರಾಷ್ಟ್ರ ಮಟ್ಟದಲ್ಲಿ ನೀಟ್-ಯುಜಿ ವ್ಯವಸ್ಥೆಯನ್ನು ಜಾರಿಗೆ ತಂದು ಬಡ ವೈದ್ಯಕೀಯ ಶಿಕ್ಷಣಾಕಾಂಕ್ಷಿಗಳಿಗೆ ದ್ರೋಹ ಬಗೆದಿತ್ತು.ಆದರೆ ಇದೀಗ ಕೇಂದ್ರ ಸರ್ಕಾರದ ನೀಟ್ ಪರೀಕ್ಷಾ ವ್ಯವಸ್ಥೆಯೇ ಹಳಿ ತಪ್ಪಿದೆ. ನೀಟ್ ಪರೀಕ್ಷಾ ವ್ಯವಸ್ಥೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಡಿಎ)ಯ ಸ್ವೇಚ್ಛಾಚಾರ ಹಾಗೂ ಅತಂತ್ರ ನಡೆ ಒಂದು ಕಡೆಯಾದರೆ ಮತ್ತೊಂದೆಡೆ ಕೆಲ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪರೀಕ್ಷಾ ನಿರ್ವಹಣೆ ಕೆಲಸವನ್ನು ಗುತ್ತಿಗೆ ನೀಡಿರುವುದೇ ಈ ಮಹಾ ಭ್ರಷ್ಟಾಚಾರದ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಸಿಇಟಿ ಪರೀಕ್ಷೆಯ ಯಾವುದೇ ಅಕ್ರಮಕ್ಕೂ ಕೇಂದ್ರ ಸರ್ಕಾರ ನೇಮಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ ನೇರ ಹೊಣೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದುಪಡಿಸಿ ಹಿಂದಿನಂತೆ ರಾಜ್ಯ ಮಟ್ಟದ ಸಿಇಟಿ ಮೂಲಕವೇ ವೈದ್ಯಕೀಯ ಶಿಕ್ಷಣ ಪ್ರವೇಶ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇದರಿಂದ ಗ್ರಾಮೀಣ ಪರಿಸರದ ಕಡುಬಡ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನನಸಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.