ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಜಿಲ್ಲಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದರೆ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.ವಿವಾದಾತ್ಮಕ ಭಾಷಣ ವೈರಲ್
ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂಬ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದೇ ಭಾಷಣದಲ್ಲಿ 2028ರಲ್ಲಿ ಒಂದೇ ಸಲ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂಬ ರಾಜಕೀಯ ಹೇಳಿಕೆಯೂ ವ್ಯಾಪಕ ಗಮನ ಸೆಳೆದಿತ್ತು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾಷಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟವೆಯೇ ಅಥವಾ ಅದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಡಳಿತಾತ್ಮಕ ವಲಯದಲ್ಲೂ ಚರ್ಚೆ ಆರಂಭವಾಗಿತ್ತು.ಶಿವಾನಂದ ನೀಲಣ್ಣನವರ್ ನೇತೃತ್ವದಲ್ಲಿ ಮೇ 17ರಂದು ಸ್ವಚ್ಛ ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಸುಮಾರು 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಲಾಗಿತ್ತು. ಸರ್ದಾರ್ಸ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದ್ದು, ನಗರಾದ್ಯಂತ ಭಾರೀ ಪ್ರಮಾಣದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಅಗತ್ಯ ಆಡಳಿತಾತ್ಮಕ ಅನುಮತಿ, ಭದ್ರತಾ ಕ್ರಮಗಳು ಹಾಗೂ ಕಾನೂನು ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯೂ ಅನುಮತಿ ಇಲ್ಲದೇ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿತು.
ಅಧಿಕಾರಿಗಳ ನಿಗಾ:
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಪ್ರಭಾವ, ದೊಡ್ಡ ಮಟ್ಟದ ಹಣಕಾಸು ವ್ಯವಹಾರ, ಸಾವಿರಾರು ಜನರನ್ನು ಸೇರಿಸುವ ಪ್ರಯತ್ನ ಹಾಗೂ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಈಗ ಶಿವಂ ಅಸೋಸಿಯೇಟ್ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೂಡಿಕೆ ಸಂಗ್ರಹ ಕಾನೂನು ಬದ್ಧವಾಗಿತ್ತೇ?, ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ?, ಸಾರ್ವಜನಿಕರಿಗೆ ನೀಡಿದ ಭರವಸೆಗಳ ಸ್ವರೂಪ ಏನು? ಎಂಬ ಅಂಶಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಸಾರ್ವಜನಿಕರಲ್ಲಿ ಆತಂಕಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಹಲವರಲ್ಲಿ ಈಗ ಆತಂಕ ಮನೆ ಮಾಡಿದೆ. ಕೆಲವು ಹೂಡಿಕೆದಾರರು ತಮ್ಮ ಹಣದ ಭದ್ರತೆ ಬಗ್ಗೆ ಪ್ರಶ್ನೆ ಕೇಳತೊಡಗಿದ್ದು, ಇನ್ನೂ ಕೆಲವರು ಪರಿಸ್ಥಿತಿ ಗಮನಿಸುತ್ತಿದ್ದಾರೆ. ಅಧಿಕಾರಿಗಳ ತನಿಖೆಯ ಬಳಿಕವೇ ಶಿವಂ ಅಸೋಸಿಯೇಟ್‌ನ ನಿಜಸ್ವರೂಪ ಮತ್ತು ಹಣಕಾಸು ಚಟುವಟಿಕೆಗಳ ಕುರಿತು ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ.
ಬಾಕ್ಸ್ಹೆಚ್ಚಿನ ಬಡ್ಡಿದರದ ಆಮಿಷ
ಶಿವಂ ಅಸೋಸಿಯೇಟ್ ಸಂಸ್ಥೆ ಹೆಸರಿನಲ್ಲಿ ಶಿವಾನಂದ ನೀಲಣ್ಣವರ್ ಹೆಚ್ಚಿನ ಬಡ್ಡಿ ದರ ಕೊಡುವುದಾಗಿ ನಂಬಿಸಿ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಮಾಜಿ ಸೈನಿಕರು, ಯುವಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಾವಿರಾರು ಕೋಟಿ ರುಪಾಯಿ ಹೂಡಿಕೆ ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಣದ ಬಳಕೆ ಹಾಗೂ ವ್ಯವಹಾರಗಳ ಕುರಿತು ಈಗ ತನಿಖೆ ಆರಂಭವಾಗಿದೆ.ಕೆಲವು ಹೂಡಿಕೆದಾರರು ಸಂಸ್ಥೆಯ ಮೇಲಿನ ನಂಬಿಕೆಯಿಂದ ಹಣ ಹೂಡಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪ್ರಚಾರದ ವಿಡಿಯೋಗಳು ಮತ್ತು ಸಾರ್ವಜನಿಕ ಸಭೆಗಳಿಂದ ಪ್ರಭಾವಿತರಾಗಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಂಸ್ಥೆಯ ಕಾರ್ಯವೈಖರಿ, ಹಣಕಾಸು ಮೂಲಗಳು ಹಾಗೂ ವಹಿವಾಟಿನ ಪಾರದರ್ಶಕತೆ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿದೆ.