ಅಬಕಾರಿ ಇಲಾಖೆ ‘ಲೈಸೆನ್ಸ್ ಮಾಯಜಾಲ’ ಬಯಲಾದ ಬೆನ್ನಲ್ಲೇ ಲೋಕೋಪಯೋಗಿ, ಇಂಧನ ಹಾಗೂ ನೀರಾವರಿ ಸೇರಿ ಸರ್ಕಾರದ ಇತರೆ ಇಲಾಖೆಗಳಲ್ಲಿರುವ ಅಧಿಕಾರಿಗಳ ‘ಸಿಂಡಿಕೇಟ್’ ಭೇದಿಸಲು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಅಬಕಾರಿ ಇಲಾಖೆ ‘ಲೈಸೆನ್ಸ್ ಮಾಯಜಾಲ’ ಬಯಲಾದ ಬೆನ್ನಲ್ಲೇ ಲೋಕೋಪಯೋಗಿ, ಇಂಧನ ಹಾಗೂ ನೀರಾವರಿ ಸೇರಿ ಸರ್ಕಾರದ ಇತರೆ ಇಲಾಖೆಗಳಲ್ಲಿರುವ ಅಧಿಕಾರಿಗಳ ‘ಸಿಂಡಿಕೇಟ್’ ಭೇದಿಸಲು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ತಮ್ಮ ಅಧಿಕಾರ ಬಳಸಿ ಸಂಬಂಧಿಕರು, ಸ್ನೇಹಿತರು ಹಾಗೂ ಆಪ್ತರಿಗೆ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಗುತ್ತಿಗೆ ಹಾಗೂ ಪರವಾನಗಿ ಹಂಚಿರುವ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಪ್ರತಿ ಇಲಾಖೆಯ ಪ್ರಮುಖ ಅಧಿಕಾರಿಗಳ ಪಟ್ಟಿ ತಯಾರಿಸಿ ಪೊಲೀಸರು ಶೋಧನೆಗಿಳಿದಿದ್ದಾರೆ. ಕೆಲವರ ಬಗ್ಗೆ ಪ್ರಾಥಮಿಕ ಹಂತದ ಪರಿಶೀಲನಾ ಕಾರ್ಯ ಮುಗಿದಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಇತ್ತೀಚೆಗೆ ತಮ್ಮ ಆಪ್ತರಿಗೆ ಸುಮಾರು 30ಕ್ಕೂ ಹೆಚ್ಚಿನ ಮದ್ಯ ಮಾರಾಟ ಪರವಾನಗಿಗಳನ್ನು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಹಾಗೂ ಲೋಕೋಪಯೋಗಿ ಇಲಾಖೆ ಮಂತ್ರಿ ಸತೀಶ್ ಜಾರಕಿಹೊಳಿ ಭಾವ ವೈ.ಮಂಜುನಾಥ್ ಅವರು ವಿತರಿಸಿದ್ದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದರು. ನಂತರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಅಬಕಾರಿ ಇಲಾಖೆಯ ಒಂಬತ್ತು ಉಪ ಆಯುಕ್ತರ ‘ಸಿಂಡಿಕೇಟ್’ ಪತ್ತೆಗೆ ಪೊಲೀಸರು ಕಡತಗಳ ಗಣಿಗಾರಿಕೆ ನಡೆಸಿದ್ದಾರೆ.
ಅಬಕಾರಿ ಇಲಾಖೆ ಮಾದರಿಯಲ್ಲೇ ಸರ್ಕಾರದ ಇತರೆ ಇಲಾಖೆಗಳಲ್ಲಿ ಕೂಡ ಅಭಿವೃದ್ಧಿ ಯೋಜನೆಗಳ ಗುತ್ತಿಗೆ ಹಾಗೂ ಆ ಯೋಜನೆಗಳಿಗೆ ಸಂಬಂಧಿಸಿದ ನಿರ್ವಹಣೆ ಪರವಾನಿಗೆಯಲ್ಲಿ ಅಕ್ರಮ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಾಹಿತಿ ಸಂಗ್ರಹ ಹೇಗೆ?:
ಲೋಕೋಪಯೋಗಿ, ಜಲಸಂಪನ್ಮೂಲ, ಇಂಧನ, ನಗರಾಭಿವೃದ್ಧಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೇರಿ ಪ್ರಮುಖ ಇಲಾಖೆಯಲ್ಲಿ ಕೋಟ್ಯಂತರ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಈ ಕಾಮಗಾರಿಗಳ ಗುತ್ತಿಗೆ ಹಂಚಿಕೆಯಲ್ಲಿ ಹಣ ಕೈ ಬದಲಾಗಿದ್ದು, ಭಾರೀ ಕಾಂಚಾಣ ಸದ್ದು ಮಾಡಿದೆ ಎಂದು ಲೋಕಾಯುಕ್ತ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.
ಪ್ರತಿ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಕಾರ್ಯದರ್ಶಿ, ಮುಖ್ಯ ಅಭಿಯಂತರ, ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಯೋಜನಾಧಿಕಾರಿಗಳು ಸೇರಿ ಪ್ರಮುಖ ಅಧಿಕಾರಿಗಳ ಪಟ್ಟಿಯನ್ನು ಲೋಕಾಯುಕ್ತ ಪೊಲೀಸರು ತಯಾರಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಅಧಿಕಾರಿಗಳು ಎಷ್ಟೆಷ್ಟು ಗುತ್ತಿಗೆ (ಟೆಂಡರ್) ಹಾಗೂ ಪರವಾನಗಿ ವಿತರಿಸಿದ್ದಾರೆಂಬ ಕುರಿತು ತನಿಖಾ ತಂಡಗಳು ಮಾಹಿತಿ ಸಂಗ್ರಹಿಸುತ್ತಿವೆ. ಇದಕ್ಕಾಗಿ ಬೆಂಗಳೂರು ಲೋಕಾಯುಕ್ತ ಪೊಲೀಸ್ ಘಟಕದ ಪ್ರತಿ ಇನ್ಸ್‌ಪೆಕ್ಟರ್‌ಗಳಿಗೆ ಅಧಿಕಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಆ ಗುತ್ತಿಗೆದಾರನ ಮತ್ತು ಅಧಿಕಾರಿಗಳ ನಡುವಿನ ನಂಟಿನ ಕುರಿತು ಪೊಲೀಸರು ಕೆದಕುತ್ತಿದ್ದಾರೆ. ಕೆಲ ಕಾಮಗಾರಿಗಳ ಗುತ್ತಿಗೆಯನ್ನು ಅಕ್ರಮವಾಗಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಅಧಿಕಾರಿಗಳು ನೀಡಿದ್ದಾರೆ. ಆನ್‌ಲೈನ್ ಟೆಂಡರ್ ಅರ್ಜಿ ಸಲ್ಲಿಸಿದರೂ ಕೆಲ ಅಧಿಕಾರಿಗಳು ಕೈ ಚಳಕ ತೋರಿಸಿದ್ದಾರೆ. ನಿರ್ದಿಷ್ಟ ಕಾಮಗಾರಿಗಳ ಗುತ್ತಿಗೆಯಲ್ಲಿ ಅನ್ಯರು ಅರ್ಜಿ ಸಲ್ಲಿಸದಂತೆ ಕೆಲವರು ಭಾನಗಡಿ ನಡೆಸಿದ್ದಾರೆ. ಕೆಲ ಅಸಮರ್ಪಕ ಮಾಹಿತಿ ಎಂಬ ಕಾರಣ ನೀಡಿ ಅರ್ಜಿಯನ್ನು ಅನರ್ಹಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಕ್ಷನ್ 11ರಡಿ ಕ್ರಮ ಸಾಧ್ಯತೆ
ಸರ್ಕಾರಿ ಅಧಿಕಾರಿಗಳ ಸಿಂಡಿಕೇಟ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ)ಯ ಸೆಕ್ಷನ್ 11ರಡಿ ತನಿಖೆಗೆ ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ಆಪ್ತರು ಹಾಗೂ ಸಂಬಂಧಿಕರಿಗೆ ಸಮ ‘ಪಾಲು’ ಸಿಗಲಿದೆ. ಇದಕ್ಕಾಗಿಯೇ ಅಧಿಕಾರಿಗಳ ಉಪಕೃತರಾದವರ ಮೇಲೆಯೇ ತನಿಖೆಗೆ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
