ಮಾಗಡಿ: ತಾಲೂಕಿನ ಬೆಳಗವಾಡಿ ಮೂಲದ, ಪ್ರಸ್ತುತ ಕುಂಬಳಗೂಡು ಗ್ರಾಪಂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಕೆ.ತಿಮ್ಮಯ್ಯ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಿಗ್ಗೆ 6 ಗಂಟೆಗೆ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ, ಪಿಡಿಒ ತಿಮ್ಮಯ್ಯ ಅವರಿಗೆ ಸೇರಿದ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಸಿದರು. ಬೆಂಗಳೂರು ದಕ್ಷಿಣ ಜಿಲ್ಲಾ ಲೋಕಾಯುಕ್ತ ಎಸ್ಪಿ ಸ್ನೇಹ ಅವರ ನೇತೃತ್ವದ ನಾಲ್ಕು ಅಧಿಕಾರಿಗಳ ತಂಡ ದಾಳಿ ಮತ್ತು ತನಿಖೆ ನಡೆಸುತ್ತಿದೆ. ಬಿ.ಕೆ.ತಿಮ್ಮಯ್ಯ ಕಳೆದ ಎರಡು ವರ್ಷಗಳಿಂದ ಕುಂಬಳಗೂಡು ಗ್ರಾಪಂನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿರುವ ಪಿಡಿಒ ಅವರ ತೋಟದ ಮನೆ ಹಾಗೂ ಅವರ ಅಕ್ಕನ ಮಗನ ನಿವಾಸದ ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಒಟ್ಟು ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದೆ. ದಾಳಿಯ ವೇಳೆ ಸಿಕ್ಕ ಆಸ್ತಿ ಪಾಸ್ತಿಗಳ ಅಧಿಕೃತ ದಾಖಲೆಗಳ ಸಂಪೂರ್ಣ ಮಾಹಿತಿ ಲೋಕಾಯುಕ್ತ ಅಧಿಕಾರಿಗಳು ಬಿಡುಗಡೆ ಮಾಡಬೇಕಾಗಿದೆ.