ನೀರಿಲ್ಲದೇ ಪರದಾಡುತ್ತಿದ್ದ ತಾಲೂಕಿನ ಹನುಮಾಪುರದ ಗ್ರಾಮದಲ್ಲಿ ದೊಡ್ಡಾಘಟ್ಟ ಚಂದ್ರೇಶ್ ಹೊಸ ಕೊಳವೆಬಾವಿ ಕೊರೆಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
ಕನ್ನಡಪ್ರಭವಾರ್ತೆ, ತುರುವೇಕೆರೆ
ನೀರಿಲ್ಲದೇ ಪರದಾಡುತ್ತಿದ್ದ ತಾಲೂಕಿನ ಹನುಮಾಪುರದ ಗ್ರಾಮದಲ್ಲಿ ದೊಡ್ಡಾಘಟ್ಟ ಚಂದ್ರೇಶ್ ಹೊಸ ಕೊಳವೆಬಾವಿ ಕೊರೆಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಿದ್ದಾರೆ.ಕೇಂದ್ರ ಸರ್ಕಾರದ ಜೆಜೆಎಂ ಅನುಷ್ಠಾನಕ್ಕೆ ಎಷ್ಟೇ ಬೆನ್ನು ಹತ್ತಿದ್ದರೂ ಅದು ಪೂರ್ಣವಾಗದೆ ಇರುವುದರಿಂದ ಅದು ಮರಿಚಿಕೆಯಾತ್ತು. ಇಲ್ಲಿ 90 ಕುಟುಂಬಗಳು ಕಳೆದ ಹಲವಾರು ತಿಂಗಳಿನಿಂದ ನೀರಿನಿಂದ ಪರದಾಡುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತ ಗ್ರಾಮದ ಯುವಕರು ದೊಡ್ಡಾಘಟ್ಟ ಚಂದ್ರೇಶ್ ರವರಲ್ಲಿ ಮನವಿ ಮಾಡಿಕೊಂಡಿದ್ದರು. ಕೂಡಲೇ ಬೋರ್ ವೆಲ್ ಕೊರೆಯುವ ವಾಹನದ ಮಾಲೀಕರಿಗೆ ಕರೆ ಮಾಡಿ ಪಾಯಿಂಟ್ ಗುರುತಿಸಿ ಕೊಳವೆಬಾವಿ ಕೊರೆಸಿದ್ದು 900 ಅಡಿಗೆ ನೀರು ಸಿಕ್ಕಿದೆ. ಈ ವೇಳೆ ಮಾತನಾಡಿದ ಚಂದ್ರೇಶ್ ಜನರು ಬೋರ್ ವೆಲ್ ನೀರನ್ನು ಮಿತವಾಗಿ ಬಳಸಬೇಕು. ಸದ್ಯ ಮಳೆ ಇಲ್ಲದ ಕಾರಣ ನೀರು ಕಡಿಮೆ ಪ್ರಮಾಣದಲ್ಲಿ ಬಂದಿದೆ. ಮಳೆ ಬಂದ ನಂತರ ಅಂತರ್ಜಲ ಮಟ್ಟ ಹೆಚ್ಚಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ತಮ್ಮ ಗ್ರಾಮದಲ್ಲಿ ಕೊರೆಸಿರುವ ಬೋರ್ ನಲ್ಲಿ ನೀರು ಬಂದ ಸುದ್ದಿ ತಿಳಿದ ಹನುಮಾಪುರದ ಜನರು ಹರ್ಷ ಚಿತ್ತರಾದರು. ತಮ್ಮ ಗ್ರಾಮಕ್ಕೆ ನೀರು ತಂದು ಕೊಟ್ಟ ದೊಡ್ಡಾಘಟ್ಟ ಚಂದ್ರೇಶ್ ಗೆ ನಮ್ಮೂರ ಭಗೀರಥ ಎಂದು ಹೇಳಿ ಕೊಂಡಾಡಿದರು. ಪುನಃ ಗಂಗಾಮಾತೆಗೆ ಪೂಜೆ ಸಲ್ಲಿಸಿ ನೀರನ್ನು ತಮ್ಮ ಮೈಮೇಲೆ ಪ್ರೋಕ್ಷಿಸಿಕೊಂಡು ಸಂತಸಪಟ್ಟರು.
ಈ ವೇಳೆ ಗ್ರಾಮದ ಮುಖಂಡರಾದ ಲೋಕೇಶ್, ಕೃಷ್ಣ, ನಾರಾಯಣಪ್ಪ, ಗೋವಿಂದಪ್ಪ, ರವಿ, ರಂಗನಾಥ್, ಮಂಜುನಾಥ್, ಹೇಮಕ್ಕ, ಪಲ್ಲವಿ, ಜ್ಯೋತಿ, ಛಾಯಾ, ವೈರಮುಡಿ, ಚಂದ್ರು ಸೇರಿದಂತೆ ಹಲವರು ಇದ್ದರು.