ಕಳೆದೆರಡು ದಿನಗಳಿಂದ ಕೃಷ್ಣರಾಜಸಾಗರಕ್ಕೆ ಹರಿದು ಬರುತ್ತಿರುವ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ ೮೩.೬೪ ಅಡಿ ನೀರು ಸಂಗ್ರಹವಾಗಿದ್ದು, ೭೫೩೧ ಕ್ಯುಸೆಕ್ ನೀರು ಒಳಹರಿವು ದಾಖಲಾಗಿದೆ. ಹಾಲಿ ಜಲಾಶಯದಲ್ಲಿ ೧೨.೪೮ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ನೀರು ಹರಿಸುವ ವಿಚಾರವಾಗಿ ಚರ್ಚಿಸಲು ಜು.೧೦ ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ೩೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಕಬ್ಬಿನ ಬೆಳೆ ಒಣಗುತ್ತಿದೆ. ನೀರಿನ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಳ ರಕ್ಷಣೆಗೆ ತುರ್ತಾಗಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ಮನವಿ ಸಲ್ಲಿಸಿದರು.

ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಶುಕ್ರವಾರ (ಜು.೧೦) ಬೆಳಗ್ಗೆ ೧೧ ಗಂಟೆಗೆ ವಿಧಾನಸೌಧದಲ್ಲಿ ನೀರಾವರಿ ಸಲಹಾ ಸಮಿತಿ (ಐಇಇ) ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದೆರಡು ದಿನಗಳಿಂದ ಕೃಷ್ಣರಾಜಸಾಗರಕ್ಕೆ ಹರಿದು ಬರುತ್ತಿರುವ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ ೮೩.೬೪ ಅಡಿ ನೀರು ಸಂಗ್ರಹವಾಗಿದ್ದು, ೭೫೩೧ ಕ್ಯುಸೆಕ್ ನೀರು ಒಳಹರಿವು ದಾಖಲಾಗಿದೆ. ಹಾಲಿ ಜಲಾಶಯದಲ್ಲಿ ೧೨.೪೮ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚು ನೀರು ಹರಿದುಬರುವ ಸಾಧ್ಯತೆಗಳಿವೆ ಎಂದು ಸಚಿವರಿಗೆ ತಿಳಿಸಿದರು.

ಬೆಳೆಗಳ ರಕ್ಷಣೆಗೆ ಒಂದು ಕಟ್ಟು ನೀರು ಹರಿಸುವಂತೆ ರೈತರಿಂದ ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದೆ. ರೈತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರು ಹರಿಸದಿದ್ದರೆ ಕಬ್ಬು ಬೆಳೆ ನಷ್ಟಕ್ಕೊಳಗಾಗುವ, ಇಳುವರಿ ಕುಂಠಿತಗೊಳ್ಳುವ ಆತಂಕ ರೈತರಲ್ಲಿದೆ. ಆ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ರೈತರ ಪರವಾಗಿ ಶಾಸಕ ಪಿ.ರವಿಕುಮಾರ್ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಸಭೆಯಲ್ಲಿ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ರೈತರ ಅಗತ್ಯ ಹಾಗೂ ನೀರಾವರಿ ಪರಿಸ್ಥಿತಿಯ ಕುರಿತು ಸಮಗ್ರ ಚರ್ಚೆ ನಡೆಸಿ, ಮಂಡ್ಯ ಸೇರಿದಂತೆ ಕಾವೇರಿ ನೀರಾವರಿ ವ್ಯಾಪ್ತಿಯ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಒಂದು ಕಟ್ಟು ನೀರು ಹರಿಸಿದರೆ ೯ ರಿಂದ ೧೨ ತಿಂಗಳವರೆಗಿನ ಕಬ್ಬು ನಷ್ಟವಾಗುವುದನ್ನು ತಪ್ಪಿಸಬಹುದು. ಈ ಹಂತದ ಕಬ್ಬು ಜಿಲ್ಲೆಯಲ್ಲಿ ೨೪ ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿರುವುದರಿಂದ ಈ ಕಬ್ಬನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಅದಕ್ಕಾಗಿ ತಕ್ಷಣವೇ ನಾಲೆಗಳಿಗೆ ನೀರು ಬಿಡುಗಡೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶಾಸಕ ಪಿ.ರವಿಕುಮಾರ್ ಅವರ ರೈತರ ಪರವಾದ ಕಾಳಜಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರವೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರಿನ ವಿಚಾರವಾಗಿ ತುರ್ತು ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬನ್ನು ರಕ್ಷಣೆ ಮಾಡುವುದು ಮೊದಲ ಆದ್ಯತೆಯಾಗಿದೆ. ಹಾಗಾಗಿ ಒಂದು ಕಟ್ಟು ನೀರನ್ನು ಹರಿಸಿ ಬೆಳೆ ಉಳಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಶುಕ್ರವಾರದಂದು ಸಚಿವರು ಐಸಿಸಿ ಸಭೆ ಕರೆದಿದ್ದಾರೆ. ಅಂದು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರಿನ ಲಭ್ಯತೆಯ ಆಧಾರದ ಮೇಲೆ ನಾಲೆಗಳಿಗೆ ನೀರು ಬಿಡುಗಡೆ ಸಂಬಂಧ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.

- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ