ಬಳ್ಳಾರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌ನ 139ನೇ ಪಕ್ಷ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನ ಪಾತ್ರ, ದೇಶದ ಬಡತನ ನಿವಾರಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡ ಕ್ರಮಗಳು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ದುಡಿವ ಜನರ ಹಿತ ಕಾಯಲು ಕಾಂಗ್ರೆಸ್ ಅನುಷ್ಠಾನಗೊಳಿಸಿದ ಯೋಜನೆಗಳು ಕುರಿತು ವಿವರಿಸಿದರಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡಿ, ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳ ನಾಶಕ್ಕೆ ಮುಂದಾಗಿದೆ. ಉದ್ಯೋಗ ಸೃಷ್ಟಿಗೆ ಯಾವುದೇ ಒತ್ತು ನೀಡದೆ ಬರೀ ಸುಳ್ಳುಗಳನ್ನು ಹೇಳಿ, ದೇಶದ ಯುವ ಸಮುದಾಯಕ್ಕೆ ವಂಚಿಸಿದೆ ಎಂದು ಆರೋಪಿಸಿದರು.ಪಕ್ಷದ ಅಧ್ಯಕ್ಷ ಮಹ್ಮದ್ ರಫೀಕ್, ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಲ್. ಮಾರೆಣ್ಣ ಅವರು ಮಾತನಾಡಿ, ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರಲ್ಲದೆ, ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ, ಬಲಿದಾನ ನೀಡಿದ ಕಾಂಗ್ರೆಸ್‌ಗೆ ತನ್ನದೇ ಆದ ಇತಿಹಾಸವಿದೆ ಎಂದರು.
ಪಕ್ಷದ ಜಿಲ್ಲಾ ಕಚೇರಿ ಬಳಿ ಧ್ವಜಾರೋಹಣ ನೆರವೇರಿಸಲಾಯಿತು. ಇದೇ ವೇಳೆ ಮಹಾತ್ಮ ಗಾಂಧೀಜಿ, ಜವಾಹರ ಲಾಲ್ ನೆಹರು ಸೇರಿದಂತೆ ರಾಷ್ಟ್ರೀಯ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಲಾಯಿತು. ಪಕ್ಷದ ಜಿಲ್ಲಾ ಪ್ರಮುಖರಾದ ಎಂ.ಡಿ. ಗೌಸ್, ಯಾಳ್ಪಿ ಮೇಟಿ ದಿವಾಕರಗೌಡ, ಮುಲ್ಲಂಗಿ ನಂದೀಶ್, ಕೆ. ತಾಯಪ್ಪ, ಎರಕುಲಸ್ವಾಮಿ, ಬಿ.ಎಂ. ಪಾಟೀಲ್, ಬಿ.ಎ. ಮಲ್ಲೇಶ್ವರಿ, ಕೆ. ವೀರೇಶ್, ಟಿ. ಗಂಗಾಧರ, ಕೆ. ಮಲ್ಲಿಕಾರ್ಜುನ ಹಾಗೂ ಎನ್. ರಾಜಶೇಖರ್ ಉಪಸ್ಥಿತರಿದ್ದರು.ಸಂಸ್ಥಾಪನಾ ದಿನ:
ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶ್ ಪ್ರಸಾದ್ ಮಾತನಾಡಿ, ಕಾಂಗ್ರೆಸ್ ಹಿನ್ನೆಲೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ಹಾಗೂ ದೇಶದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಕಾಂಗ್ರೆಸ್ ಈವರೆಗೆ ಕೈಗೊಂಡಿರುವ ಕಾರ್ಯಕ್ರಮಗಳು ಕುರಿತು ತಿಳಿಸಿದರು.ಪಕ್ಷದ ಮುಖಂಡರಾದ ವೆಂಕಟೇಶ್ ಹೆಗಡೆ, ಜೋಗಿನ ಈಶ್ವರಪ್ಪ, ಸಂಗನಕಲ್ಲು ವಿಜಯಕುಮಾರ್, ಪಿ. ರಂಜಾನ್ ಬಾಷಾ, ಬಿ. ಹನುಮಂತಪ್ಪ, ಜೋಗಿನ ವಿಜಯಕುಮಾರ್, ಪುನೀತ್ ಕುಮಾರ್, ವಿ. ನಾಗಿರೆಡ್ಡಿ, ಬಿ. ಶ್ರೀನಿವಾಸಮೂರ್ತಿ ಮತ್ತಿತರರು ಭಾಗವಹಿಸಿದ್ದರು.