ಕೇಂದ್ರದಿಂದ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು: ಎಚ್.ಕೆ. ಪಾಟೀಲ

KannadaprabhaNewsNetwork |  
Published : Jan 27, 2026, 03:15 AM IST
೨೬ಕೆಎಲ್‌ಆರ್-೬ಕೋಲಾರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ೭೭ನೇ ಗಣರಾಜ್ಯೋತ್ಸವ ದಿನಾಚರಣೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸುತ್ತಿರುವುದು. | Kannada Prabha

ಸಾರಾಂಶ

ತೆರಿಗೆ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದ್ದು, ​ಆರ್ಥಿಕ ಶಿಸ್ತು ಕಾಪಾಡಿಕೊಂಡಿರುವ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಶಿಕ್ಷೆ ನೀಡುತ್ತಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ದೇಶದಲ್ಲಿ ಸಂವಿಧಾನವೇ ಸರ್ವೋಚ್ಚ. ಆದರೆ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಮೇಲೆ ನಿರಂತರವಾಗಿ ಹಣಕಾಸಿನ ಅನ್ಯಾಯ ಎಸಗಲಾಗುತ್ತಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆರೋಪ ಮಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ತೆರಿಗೆ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದ್ದು, ​ಆರ್ಥಿಕ ಶಿಸ್ತು ಕಾಪಾಡಿಕೊಂಡಿರುವ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಶಿಕ್ಷೆ ನೀಡುತ್ತಿದೆ. ನಾವು ಕೇಂದ್ರಕ್ಕೆ ನೂರು ರುಪಾಯಿ ತೆರಿಗೆ ನೀಡಿದರೆ, ನಮಗೆ ಮರಳಿ ಸಿಗುತ್ತಿರುವುದು ಕೇವಲ ₹16. ಆದರೆ ಕೆಲವು ರಾಜ್ಯಗಳಿಗೆ 65ರಿಂದ 75 ಪ್ರತಿಶತದಷ್ಟು ಅನುದಾನ ನೀಡಲಾಗುತ್ತಿದೆ. ಇದು ಶಿಸ್ತುಬದ್ಧ ರಾಜ್ಯಗಳಿಗೆ ಮಾಡುತ್ತಿರುವ ದ್ರೋಹ ಎಂದು ಅವರು ಕಿಡಿಕಾರಿದರು.

ಕಡೆಗಣನೆ: ಕೇಂದ್ರ ಸರ್ಕಾರ ​ಬರ ಪರಿಹಾರ ಮತ್ತು ಭದ್ರಾ ಯೋಜನೆ ಕಡೆಗಣನೆ ಮಾಡಿದೆ. ಈ ಹಿಂದೆ ​ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ನಿಯಮಾನುಸಾರ ಬರಬೇಕಿದ್ದ ಪರಿಹಾರ ನೀಡಲಿಲ್ಲ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವಷ್ಟೇ ಪರಿಹಾರ ಬಿಡುಗಡೆ ಮಾಡಲಾಯಿತು. ಇನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟರೂ, ನಯಾಪೈಸೆ ಬಿಡುಗಡೆ ಮಾಡದೇ ವಂಚಿಸಲಾಗಿದೆ ಎಂದು ಹೇಳಿದರು.

​ರೈಲ್ವೆ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಸಚಿವರು, ಬೆಳಗಾವಿ-ಧಾರವಾಡ ಮತ್ತು ದಾವಣಗೆರೆ-ತುಮಕೂರು ರೈಲು ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಶೇ. 90ರಷ್ಟು ಭೂಮಿ ಹಸ್ತಾಂತರಿಸಿದೆ. ಆದರೂ ಕೇಂದ್ರ ಸರ್ಕಾರ ಅನುದಾನ ನೀಡದೆ ವಿಳಂಬ ಮಾಡುತ್ತಿದೆ. ಇದರಿಂದಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಅನಗತ್ಯವಾಗಿ 150 ಕಿಮೀ ಹೆಚ್ಚುವರಿ ಪ್ರಯಾಣ ಮಾಡುವಂತಾಗಿದೆ ಎಂದರು.

ಪಂಚಾಯತ್ ರಾಜ್ ಮತ್ತು ನರೇಗಾ ವ್ಯವಸ್ಥೆ ಮೇಲೆ ಕೇಂದ್ರ ಸರ್ಕಾರ ಪ್ರಹಾರ ನಡೆಸುತ್ತಿದ್ದು, ​ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಜನರಿಗೆ ನೀಡಲಾಗಿದ್ದ ಉದ್ಯೋಗದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ​ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯವನ್ನು ಬದಲಿಸಲಾಗುತ್ತಿದೆ. ಗ್ರಾಮಸ್ಥರಿಗೆ ಸಿಗಬೇಕಿದ್ದ ಉದ್ಯೋಗದ ಹಕ್ಕನ್ನು ಕಿತ್ತುಕೊಂಡು ಗುತ್ತಿಗೆದಾರರ ಕೈಗೆ ನೀಡುವ ಸಂಚು ನಡೆಯುತ್ತಿದೆ.​ ಹಳ್ಳಿಗಳಲ್ಲಿ ಅಭಿವೃದ್ಧಿ ನಿರ್ಧಾರ ಮಾಡುವ ಪಂಚಾಯಿತಿಗಳ ಹಕ್ಕನ್ನು ಕಿತ್ತುಕೊಂಡು, ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಈ ಕುರಿತು ನಾವು ಉಗ್ರ ಹೋರಾಟ ಮಾಡುತ್ತೇವೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಮರು ಜಾರಿಯಾಗುವರೆಗೂ ಹೋರಾಟ ಮಾಡುತ್ತೇವೆ ಎಂದರು.

​ಸಂವಿಧಾನಕ್ಕಿಂತ ಎತ್ತರದಲ್ಲಿ ಯಾರೂ ಇಲ್ಲ. ಒಕ್ಕೂಟ ವ್ಯವಸ್ಥೆ ಸರಿಯಾಗಿ ನಡೆಯಬೇಕೆಂದರೆ ಕೇಂದ್ರ ಮತ್ತು ರಾಜ್ಯಗಳು ಸಮಾನವಾಗಿ ಕೆಲಸ ಮಾಡಬೇಕು. ಕೇಂದ್ರದ ಈ ಜನವಿರೋಧಿ ಧೋರಣೆಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ