ಕನ್ನಡಪ್ರಭ ವಾರ್ತೆ ಅರಸೀಕೆರೆ
ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನಫೆಡ್ ಮೂಲ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು ಅನ್ನದಾತರಿಗೆ ನೆರವಾಗಲಿದೆ ಎಂದು ತಾಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಕೇಂದ್ರದ ನಿಲುವನ್ನು ಸ್ವಾಗತಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾತಾಳಕ್ಕೆ ಕುಸಿದಿರುವ ಕೊಬ್ಬರಿ ಬೆಲೆಯಿಂದ ತೆಂಗು ಬೆಳೆಗಾರರು ಹೈರಾಣಾಗಿದ್ದರು. ವಾಸ್ತವ ಮನಗಂಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಡಿ.ರೇವಣ್ಣ ಹಾಗೂ ಸಿ.ಎನ್.ಬಾಲಕೃಷ್ಣ ಅವರನ್ನೊಳಗೊಂಡ ತೆಂಗು ಬೆಳೆಯುವ ಜಿಲ್ಲೆಯ ಜೆಡಿಎಸ್ ಶಾಸಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದಿದ್ದರು. ಈ ವೇಳೆ ಸಮಸ್ಯೆಯ ಗಂಭೀರತೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ತೋಟಗಾರಿಕಾ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದೀಗ ವರಿಷ್ಠರ ಮನವಿಗೆ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಜ.೨೦ ರಿಂದ ತೆಂಗು ಬೆಳೆಗಾರರ ಹೆಸರು ನೋಂದಣಿಗೂ ಅನುವು ಮಾಡಿದೆ. ಇಡೀ ಪ್ರಕ್ರಿಯೆ ಮೂರ‍್ನಾಲ್ಕು ತಿಂಗಳು ನಡೆಯಲಿದ್ದು ತಾಲೂಕಿನ ಅರ್ಹ ರೈತರು ಪ್ರಯೋಜನ ಪಡೆದುಕೊಳ್ಳಬೇಕು.ಜತೆಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅನುಕೂಲ ಎಲ್ಲ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಎಪಿಎಂಸಿ ಹಾಗೂ ನಫೆಡ್ ಮೂಲಕ ಖರೀದಿಯಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ನೋಡಿಕೊಳ್ಳಬೇಕು. ಪ್ರಾಂಗಣದಲ್ಲಿ ಮಧ್ಯವರ್ತಿಗಳ ಹಾವಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ತಿಳಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಮುಖಂಡರಾದ ಬಿ.ಜಿ.ನಿರಂಜನ್, ಗಣೇಶ್, ನಗರಸಭೆ ಸದಸ್ಯ ಜಾಕೀರ್ ಹುಸೇನ್, ಲಾಳನಕೆರೆ ಯೋಗೀಶ್, ರಮೇಶ್ ಹಾಜರಿದ್ದರು.ತಾಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.