ಬೆಲೆ ಏರಿಕೆ ಮೂಲಕ ಕೇಂದ್ರ ಪಿಕ್‌ ಪಾಕೆಟ್‌ : ಡಿ.ಕೆ. ಶಿವಕುಮಾರ

KannadaprabhaNewsNetwork | Updated : May 02 2025, 01:14 PM IST

ಸಾರಾಂಶ

ಕೇಂದ್ರ ಸರ್ಕಾರವೇ ಬೆಲೆ ಏರಿಕೆಯನ್ನು ಮಾಡಿದೆ. ಆದರೆ, ನಾವು ಐದು ಗ್ಯಾರಂಟಿ ಕೊಟ್ಟು ಶಕ್ತಿ ನೀಡಿದ್ದೇವೆ. ಆದರೂ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ.  

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರವು ಬೆಲೆ ಏರಿಕೆ ಮೂಲಕ ಜನರ ಪಿಕ್‌ ಪಾಕೆಟ್‌ ಮಾಡುತ್ತಿದೆ. ನಾವು (ರಾಜ್ಯ ಸರ್ಕಾರ) ಬೆಲೆ ಏರಿಕೆಯಿಂದ ಕೊಂಚ ನಿರಾಳ ಮಾಡಲು ಗ್ಯಾರಂಟಿ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮರ್ಥಿಸಿಕೊಂಡರು.

ನಗರದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವೇ ಬೆಲೆ ಏರಿಕೆಯನ್ನು ಮಾಡಿದೆ. ಆದರೆ, ನಾವು ಐದು ಗ್ಯಾರಂಟಿ ಕೊಟ್ಟು ಶಕ್ತಿ ನೀಡಿದ್ದೇವೆ. ಆದರೂ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಅದು ಜನಾಕ್ರೋಶ ಯಾತ್ರೆ ಮಾಡಿದ ದಿನವೇ ಕೇಂದ್ರ ಡಿಸೇಲ್‌ ದರ ಏರಿಸಿತು. ಆದರೂ ಕೇಂದ್ರದ ವಿರುದ್ಧ ಬಿಜೆಪಿ ಏಕೆ ಪ್ರತಿಭಟನೆ ಮಾಡುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಗರ ಜನಾಕ್ರೋಶ ಕೇಂದ್ರ ಸರ್ಕಾರದ ವಿರುದ್ಧವಿರಲಿ. ನಮ್ಮ ಸರ್ಕಾರದ ಮೇಲಲ್ಲ. ಮಹದಾಯಿ ವಿಚಾರದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿತು. ಆದರೆ, ಈ ವರೆಗೆ ಅನುಷ್ಠಾನ ಏಕೆ ಮಾಡಲಿಲ್ಲ? ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಂವಿಧಾನ ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ಇಂದು ಕಾರ್ಮಿಕ ದಿನ. ಇವತ್ತು 12,600 ಪೌರಕಾರ್ಮಿಕರಿಗೆ ಕಾಯಂ ಮಾಡಿ ಆದೇಶ ಪತ್ರ ನೀಡಿದ್ದೇವೆ ಎಂದರು.

20ಕ್ಕೆ ವಿಜಯನಗರದಲ್ಲಿ ಸಮಾವೇಶ: ಮೇ 20ಕ್ಕೆ ರಾಜ್ಯ ಸರ್ಕಾರಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಆ ವೇಳೆ ವಿಜಯನಗರದಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಲಾಗುವುದು. ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದೆ ಎಂದರು.

ಕಾರ್ಯಕ್ರಮ ನಡೆಸಲು ಬಿಡಲ್ಲ: ಬೆಳಗಾವಿಯಲ್ಲಿ ಕಾರ್ಯಕ್ರಮದ ವೇಳೆ ಬಿಜೆಪಿಯವರು ಪ್ರತಿಭಟನೆ ನಡೆಸಿದರು. ಈ ರೀತಿ ಮಾಡುವುದನ್ನು ಬಿಡಬೇಕು. ಇಲ್ಲದಿದ್ದಲ್ಲಿ ನಮ್ಮ ಕಾರ್ಯಕ್ರಮದ ವೇಳೆ ಏನಾದರೂ ಪ್ರತಿಭಟನೆ ನಡೆಸಿದರೆ ಮುಂದೆ ನೀವು ಎಲ್ಲೂ ಕಾರ್ಯಕ್ರಮವನ್ನೇ ಮಾಡಲು ಅವಕಾಶ ನೀಡಲ್ಲ. ಆ ರೀತಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Share this article