ಕನ್ನಡಪ್ರಭ ವಾರ್ತೆ ಮಂಡ್ಯ
ಶನಿವಾರ ನಗರದ ಸುಮರವಿ ಕಲ್ಯಾಣಮಂಟಪದಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಜಾಗೃತ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ‘ಕರ್ನಾಟಕಕ್ಕಾದ ತೆರಿಗೆ ಪಾಲಿನ ವಂಚನೆ-ರೈತರ ಗಾಯದ ಮೇಲೆ ಬರೆ’ ವಿಚಾರಗೋಷ್ಠಿಯಲ್ಲಿ ಪ್ರಧಾನ ಭಾಷಣ ಮಾಡಿದರು.
ಜಿಎಸ್‌ಟಿ ಪರಿಹಾರ ನಿಲ್ಲಿಸಿದ್ದರಿಂದ ವಾರ್ಷಿಕ ೩೧,೦೬೬ ಕೋಟಿ ರು., ೧೫ನೇ ಹಣಕಾಸು ಆಯೋಗ ಮಾಡಿದ ತೆರಿಗೆ ಪಾಲಿನ ಕಡಿತದಿಂದ ರಾಜ್ಯಕ್ಕೆ ೧೨,೯೬೭ ಕೋಟಿ, ಸೆಸ್ ಮತ್ತು ಸರ್‌ಚಾರ್ಜ್‌ಗಳಿಂದ ಆಗುತ್ತಿರುವ ನಷ್ಟ ೮,೦೬೦ ಕೋಟಿ ರು. ಆಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ೧.೮೫ ಲಕ್ಷ ಕೋಟಿ ರು. ವಂಚನೆಯಾಗಿದೆ ಎಂದು ವಿವರಿಸಿದರು.ಶಿಫಾರಸು ಹಿಂಪಡೆಯಲು ನಿರ್ದೇಶನ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಏಕಿಷ್ಟು ದ್ವೇಷ, ರಾಜ್ಯದ ಜನರಿಗೆ ಅನ್ಯಾಯ ಏಕೆ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಇದು ವಿರೋಧವಲ್ಲವೇ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೊಡುವುದಿಲ್ಲ ಎಂದರೆ ದೊಡ್ಡ ವಂಚನೆಯಲ್ಲವೇ. ಇದರಿಂದ ೧,೮೫,೪೬೮ ಕೋಟಿ ರು. ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ ಹಣ ನೀಡುತ್ತಿದೆಯಾದರೂ ಈ ಯೋಜನೆಗಳಿಗೆ ನೀಡುವ ಹಣದಲ್ಲಿ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರದ ಪಾಲೇ ದೊಡ್ಡದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ಕೇಂದ್ರ ೮೮೭೦ ಕೋಟಿ ರು. ನೀಡಿದರೆ ರಾಜ್ಯಸರ್ಕಾರ ೯೭೩೪ ಕೋಟಿ ರು., ಪಿಎಂ ಆವಾಸ್ (ರೂರಲ್)ಯೋಜನೆಗೆ ಕೇಂದ್ರದ ಪಾಲು ೫೨೮ ಕೋಟಿ ರು. ಇದ್ದರೆ ರಾಜ್ಯದ ಪಾಲು ೭೪೮೪ ಕೋಟಿ ರು., ಪಿಎಂ ಆವಾಸ್ (ಅರ್ಬನ್) ಯೋಜನೆಗೆ ಕೇಂದ್ರ ೨೫೩೬ ಕೋಟಿ ರು. ನೀಡಿದರೆ ರಾಜ್ಯಸರ್ಕಾರ ೪೨೭೨ ಕೋಟಿ ರು. ನೀಡುತ್ತಿದೆ. ಜಲಜೀವನ್ ಮಿಷನ್‌ಗೆ ಕೇಂದ್ರ ೧೧,೧೮೯ ಕೋಟಿ ರು. ಕೊಒಟ್ಟರೆ ರಾಜ್ಯಸರ್ಕಾರ ೧೫,೪೬೪ ಕೋಟಿ ರು., ಪಿಎಂ ಜನ ಆರೋಗ್ಯ ಯೋಜನೆಗೆ ಕೇಂದ್ರ ೨೭೮ ಕೋಟಿ ರು. ಕೊಟ್ಟರೆ ರಾಜ್ಯಸರ್ಕಾರ ೯೮೪ ಕೋಟಿ ರು. ನೀಡುತ್ತಿದೆ. ಇಲ್ಲಿ ಹೆಸರಿಗೆ ಮಾತ್ರ ಕೇಂದ್ರದ ಯೋಜನೆ. ಆದರೆ, ಆ ಯೋಜನೆಗಳಿಗೆ ಹೆಚ್ಚಿನ ಹಣಕಾಸು ಒದಗಿಸುತ್ತಿರುವುದು ರಾಜ್ಯಸರ್ಕಾರ ಎಂದು ಅಂಕಿ-ಅಂಶಗಳನ್ನು ತೆರೆದಿಟ್ಟರು.
ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿ. ಕೇಂದ್ರಕ್ಕೂ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಾ ಸ್ವಂತ ಬಲದ ಮೇಲೆ ಸರ್ಕಾರ ನಡೆಸುತ್ತಿದ್ದೇವೆ. ನಾವೇ ನಿಜವಾದ ದೇಶಪ್ರೇಮಿಗಳು. ನಾವು ದೇಶ ಒಡೆಯುವವರಲ್ಲ, ದೇಶ ಕಟ್ಟುವವರು. ನಮ್ಮ ತೆರಿಗೆ ಹಕ್ಕನ್ನು ಪ್ರತಿಪಾದಿಸಿದರೆ ಅದನ್ನು ದಮನ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದ್ರೋಹಿಗಳೆಂಬ ಪಟ್ಟ ಕಟ್ಟಲು ಹೊರಟಿದೆ. ಅನ್ಯಾಯವಾಗಿದ್ದರೆ ಕುಳಿತು ಮಾತುಕತೆಯ ಮೂಲಕ ಅದನ್ನು ಸರಿಪಡಿಸುವ ಸೌಜನ್ಯ ತೋರುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ತೀವ್ರ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಬಜೆಟ್ ಗಾತ್ರ ಹೆಚ್ಚಳ; ರಾಜ್ಯದ ಪಾಲು ಕುಸಿತ:ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಬಜೆಟ್‌ನ ಗಾತ್ರ ೭ ರಿಂದ ೮ ಲಕ್ಷ ಕೋಟಿ ಮಾತ್ರ ಇತ್ತು. ಈಗ ಅದರ ಗಾತ್ರ ೪೫.೩೦ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ೨೦೧೭-೧೮ರಲ್ಲಿ ರಾಜ್ಯಕ್ಕೆ ತೆರಿಗೆ ಪಾಲಿನ ಹಣ ಶೇ.೨೩.೨ರಷ್ಟು ಬಂದಿದ್ದರೆ, ೨೦೨೩-೨೪ರಲ್ಲಿ ಶೇ.೧೬.೯೪ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾದಂತೆ ಕರ್ನಾಟಕಕ್ಕೆ ಸಿಗುತ್ತಿರುವ ಪಾಲು ಕಡಿಮೆಯಾಗಿದೆ. ೨೦೧೭ರಲ್ಲಿ ೪೩೩೬೯ ಕೋಟಿ ರು. ಬಂದಿದ್ದರೆ ಈಗ ೫೫೫೨೯ ಕೋಟಿ ರು. ಮಾತ್ರ ದೊರಕುತ್ತಿದೆ. ನ್ಯಾಯಯುತ ರೀತಿಯಲ್ಲಿ ನೀಡಿದ್ದರೆ ಈಗ ೯೦ ಸಾವಿರ ಕೋಟಿ ರು. ಆಗಬೇಕಿತ್ತು ಎಂದು ಹೇಳಿದರು.