ರಾಜ್ಯ ಸರ್ಕಾರ ವಿರುದ್ಧ ಕೇಂದ್ರ ಸೇಡಿನ ರಾಜಕಾರಣ: ಮಾಜಿ ಸಚಿವ ಎಚ್.ಆಂಜನೇಯ

KannadaprabhaNewsNetwork | Published : Nov 27, 2024 1:03 AM

ಸಾರಾಂಶ

ಕೇಂದ್ರದ ಮೋದಿ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಮೇಲೆ ಗದಾಪ್ರಹಾರ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಬಾದಾಮಿ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸುವ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.ಮಂಗಳವಾರ ನಗರದ ಲೋಕೋಪಯೋಗಿ ಇಲಾಖೆ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆ ಜಾರಿ ಮಾಡಿದ ಕಾರಣ ಸಮಾಜದಲ್ಲಿನ ಎಲ್ಲ ಬಡವರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಆಶಯದಂತೆ ಸಮಬಾಳು, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಎಲ್ಲರಿಗೂ ಸಿಕ್ಕಿವೆ. ಬಡತನ, ಜಾತಿ ನಿರ್ಮೂಲನೆ ಮಾಡಿ ಸಮಾನತೆ, ಸಂಪತ್ತು ಹಂಚಿಕೆಯಾಗಬೇಕಿದೆ. ಶಿಕ್ಷಣ ಸಂಘಟನೆ ಮಾಡಿದರೆ ಸಂಘಟಿತರಾಗಿ ಸೌಲಭ್ಯ ಪಡೆದಿದ್ದಾರೆ. ಇನ್ನೂ ಕೆಲವರು ಬಡವರಾಗಿಯೇ ಉಳಿದಿದ್ದಾರೆ. ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮ ಅನುಷ್ಠಾನದಿಂದ ಅಂಬೇಡ್ಕರ್‌ ಕನಸು ನನಸಾಯಿತು ಎಂದರು.

ಮೋದಿ ಸರ್ಕಾರದ ಸುಳ್ಳು ಭರವಸೆ:

ಕೇಂದ್ರದ ಮೋದಿ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆ ಬೇರೆ ರಾಜ್ಯದಲ್ಲಿ ಟೀಕೆ ಮಾಡುವ ಪ್ರಧಾನಿ ಮೋದಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದರಿಂದ ಟೀಕೆ ಮಾಡಲು ಯಾವುದೇ ವಿಷಯಗಳಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಉಪಚುನಾವಣೆಯಲ್ಲಿ ಮೂರು ಸ್ಥಾನ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮೂಲಕ ಸಿದ್ದರಾಮಯ್ಯನವರಿಗೆ ರಾಜ್ಯದ ಜನರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ಗೆ ಜನರು ತಕ್ಕಪಾಠ ಕಲಿಸಿದ್ದಾರೆ ಎಂದರು.

ಬಾದಾಮಿ ಅಭಿವೃದ್ಧಿ ಸಿಎಂ ಗಮನಕ್ಕೆ ತರುವೆ:

ಐತಿಹಾಸಿಕ ಬಾದಾಮಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶೀಘ್ರದಲ್ಲಿಯೇ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ರಾಜಕೀಯವಾಗಿ ಸಿದ್ದರಾಮಯ್ಯನವರಿಗೆ ಪುನರ್ಜನ್ಮ ನೀಡಿದ ಬಾದಾಮಿ ಮತಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು, ಪ್ರವಾಸೋದ್ಯಮ ಅಭಿವೃದ್ಧಿ, ಶಾಲೆ, ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಹೆಚ್ಚಿನ ಅನುದಾನ ನೀಡಲು ಮನವಿ ಮಾಡುತ್ತೇವೆ ಎಂದರು.

ಒಳಮೀಸಲಾತಿ ಜಾರಿಗೆ ಮನವಿ:

ಸುಪ್ರೀಂಕೋರ್ಟ್‌ ಆದೇಶದಂತೆ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿ ಮಾಡುತ್ತಾರೆ. ಇದರ ಬಗ್ಗೆ ಅನುಮಾನ ಬೇಡ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರಲು ನಾವು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ರಮೇಶ ಪೂಜಾರ, ನಾಗರಾಜ ಮನ್ನಿಕೇರಿ, ಪ್ರವೀಣಕುಮಾರ ಜ್ಯೋತಿ, ಬಸವರಾಜ ಪಾತ್ರೋಟ, ಬಸವರಾಜ ತಳವಾರ, ಭೀಮಸಿ ಕಮ್ಮಾರ, ಯಲ್ಲಪ್ಪ ಪೂಜಾರಿ, ರಾಮಣ್ಣ ಬೇವಿನಮಟ್ಟಿ ಉಪಸ್ಥಿತರಿದ್ದರು.

Share this article