ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ಸ್ವ-ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ’ (ಆರ್‌ಎಸ್‌ಇಟಿಐ) ಯೋಜನೆ ಕುರಿತಂತೆ ಸಂಸದರ ಪ್ರಶ್ನೆಗೆ ಕೇಂದ್ರ ಸರ್ಕಾರದ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಭಾಗದ ಯುವಜನತೆಯಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ, ಅವರಿಗೆ ಸ್ವಯಂ ಉದ್ಯೋಗದ ದಾರಿ ತೋರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ ಗ್ರಾಮೀಣ ಬಡ ಯುವಜನತೆಯ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 632 ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯ ಯಶಸ್ಸು ಅಭೂತಪೂರ್ವವಾಗಿದ್ದು, ದೇಶಾದ್ಯಂತ ಲಕ್ಷಾಂತರ ಯುವಕ ಯುವತಿಯರು ಇದರ ಲಾಭ ಪಡೆದಿದ್ದಾರೆ. 2024-25ರ ಸಾಲಿನಲ್ಲಿ ದೇಶಾದ್ಯಂತ 6.21 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಅದರಲ್ಲಿ 4.67 ಲಕ್ಷಕ್ಕೂ ಅಧಿಕ ಮಂದಿ (ಶೇ.75) ಯಶಸ್ವಿಯಾಗಿ ಉದ್ಯೋಗಗಳಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ 4.51 ಲಕ್ಷ ಅಭ್ಯರ್ಥಿಗಳು ತರಬೇತಿ ಪಡೆದಿದ್ದು 3.08 ಲಕ್ಷ ಉದ್ಯೋಗ ನಿರತರಾಗಿದ್ದಾರೆ. (ಶೇ.68) ಕರ್ನಾಟಕದಲ್ಲೂ ಈ ಯೋಜನೆ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದ್ದು, ಒಟ್ಟು 32 ತರಬೇತಿ ಕೇಂದ್ರಗಳು ರಾಜ್ಯದ ಯುವಜನತೆಗೆ ಕೌಶಲ್ಯದ ತರಬೇತಿ ನೀಡುತ್ತಿವೆ. ಕಳೆದ ವರ್ಷ ರಾಜ್ಯದ 25,784 ಗ್ರಾಮೀಣ ಅಭ್ಯರ್ಥಿಗಳು ತರಬೇತಿ ಪಡೆದಿದ್ದು 18,276 ಉದ್ಯೋಗ ನಿರತರಾಗಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ನಮ್ಮ ಗ್ರಾಮೀಣ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬದ್ಧವಾಗಿದೆ. ಆರ್‌ಎಸ್ಇಟಿಐ ಕೇಂದ್ರಗಳು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಕೌಶಲ್ಯದ ಶಕ್ತಿ ತುಂಬುತ್ತಿವೆ. ನಮ್ಮ ಶಿವಮೊಗ್ಗದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಉಚಿತ ತರಬೇತಿ ಸೌಲಭ್ಯವನ್ನು ಪಡೆದುಕೊಂಡು, ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗ ನೀಡುವವರಾಗಿ ಬೆಳೆಯಬೇಕು. ಕನಿಷ್ಠ ಶೇ.70 ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ಖಾತ್ರಿ ನೀಡುವ ಈ ಯೋಜನೆಯು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತಿದೆ. ಕೇಂದ್ರದ ಮಹತ್ವದ ಯೋಜನೆ ಲಾಭ ನಮ್ಮ ಗ್ರಾಮೀಣ ಯುವ ಜನತೆಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ತಲುಪಬೇಕಿದೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.