ಕನ್ನಡಪ್ರಭ ವಾರ್ತೆ ವಿಜಯಪುರ

2025-26ನೇ ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ದೇಶದ ಪ್ರತಿಷ್ಠಿತ ವಸತಿ ಶಾಲೆಯಾದ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ತೆಗೆದುಕೊಂಡು ಐತಿಹಾಸಿಕ ಸಾಧನೆ ಮಾಡಿದ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್‌ನ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ವಿಶೇಷ ಸನ್ಮಾನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ದೇಶದ ಪ್ರತಿಷ್ಠಿತ ವಸತಿ ಶಾಲೆಯಾದ ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡು ಆಯ್ಕೆಯಾದ ವಿದ್ಯಾರ್ಥಿಗಳಾದ ಅಶ್ವಿಕ ಜಮಖಂಡಿ (272/300) ಹಾಗೂ ಮಲ್ಲಿಕಾರ್ಜುನ ಖಾನಾಪುರ(270/300) ಈ ಇಬ್ಬರೂ ಮಕ್ಕಳು ಗಣಿತ ವಿಷಯದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಅಂದರೆ 150/150 ಅಂಕಗಳನ್ನು ಪಡೆದುಕೊಂಡು ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯ ಇತಿಹಾಸದಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ತೆಗೆದುಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ. ರಾಜ್ಯಮಟ್ಟದ ಈ ಅಭೂತಪೂರ್ವ ಸಾಧನೆಯನ್ನು ಕೊಂಡಾಡಿ ಈ ಮಕ್ಕಳಿಗೆ ಸಂಸ್ಥೆಯ ವತಿಯಿಂದ 12ನೇ ತರಗತಿಯವರೆಗೆ ಶೇ.50 ರಷ್ಟು ಶಾಲಾ ಶುಲ್ಕವನ್ನು ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್‌ನ ವತಿಯಿಂದ ಕೊಡಲಾಗುವುದು ಎಂದು ಘೋಷಿಸಿ ಪ್ರಸ್ತುತ ವರ್ಷದ ಶುಲ್ಕದ ಹಣದ ಚೆಕ್ ಅನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.

ಮಕ್ಕಳ ಈ ಐತಿಹಾಸಿಕ ಸಾಧನೆಗೆ ಪಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಸಿಹಿ ತಿನ್ನಿಸಿ, ಸನ್ಮಾನಿಸಿ ಮುದ್ದು ಮಕ್ಕಳ ಮುಂದಿನ ಉಜ್ವಲ ಭವಿಷ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ, ಸಮಾಜ ಸೇವಕ ಶ್ರೀಶೈಲ ಮುಳಜಿ,ಸಂಗಮೇಶ ಪಾಟೀಲ, ಚೇತನ ಮೊಸಗೇರಿ, ಸಿದ್ಧರಾಮ ಖಾನಾಪುರ, ಮುಕ್ತಾ ಖಾನಾಪುರ, ಮಲ್ಲಿಕಾರ್ಜುನ ಜಮಖಂಡಿ, ಶಿವುಕುಮಾರ ಸಿಂದಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.