ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಾಯಿಸಿ ಬಿಟ್ಟರು. ಇದೊಂದು ಮನೆಹಾಳು ಸರ್ಕಾರ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ತೀವ್ರ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರೇ ಆಕ್ರೋಶಗೊಂಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯನ್ನು ಸಾಯಿಸಿ ಬಿಟ್ಟರು. ಇದೊಂದು ಮನೆಹಾಳು ಸರ್ಕಾರ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ತೀವ್ರ ಕಿಡಿಕಾರಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರದ್ಯೋಗ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯ ಮಹಾ ಸುಳ್ಳಗಾರ. ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟಿದ್ದಾರೆ. ಸಿಎಂ ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಹಣ ಬೇರೆ ಕಡೆ ಬಳಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯ ಸರ್ಕಾರ ಕೇಂದ್ರದ ಹಣದಲ್ಲಿ ನಡೆಯುತ್ತಿದೆ. ನರೇಗಾ ಯೋಜನೆಯ ಹಣವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ. ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು 2023ರಲ್ಲಿ ಸಿದ್ದರಾಮಯ್ಯನವರಿಗೆ ಅಧಿಕಾರ ಕೊಡುವಾಗ ಉತ್ತಮ ಸ್ಥಿತಿಯಲ್ಲಿದ್ದ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಾರೆ. ಸಿದ್ಧರಾಮಯ್ಯನವರು ಕಳೆದ ವರ್ಷದಲ್ಲಿ ₹4 ಲಕ್ಷ 36 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಈ ವರ್ಷ ಅದು ₹5 ಲಕ್ಷ 55 ಸಾವಿರ ಕೋಟಿಗೆ ತಲುಪಿದೆ. ಆರ್ಥಿಕವಾಗಿ ಸಬಲವಾಗಿದ್ದ ಕರ್ನಾಟಕವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ದೂರಿದರು.ಯಾರು ಎಷ್ಟೇ ಲೂಟಿ ಹೊಡೆಯಲಿ ಸಿದ್ದರಾಮಯ್ಯನವರಿಗೆ ತಮ್ಮ ಕುರ್ಚಿ ಎರಡು ವರ್ಷ ಗಟ್ಟಿಯಾಗಿದ್ದರೆ ಸಾಕು ಎನ್ನುವಂತೆ ಇದ್ದಾರೆ. ಇನ್ನು ಡಿಕೆಶಿ ಅವರು ಅತೃಪ್ತ ಆತ್ಮವಾಗಿದ್ದು, ಕಳೆದ ವರ್ಷದಲ್ಲಿ 73 ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ. ಈ ಸರ್ಕಾರ ತೊಲಗದಿದ್ದರೆ ರಾಜ್ಯದಲ್ಲಿ ಏನೂ ಅಭಿವೃದ್ಧಿ ಮಾಡಲು ಆಗಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ 2024-25ರಲ್ಲಿ 16 ಸಾವಿರ ದ್ರಾಕ್ಷಿ ಬೆಳೆಗಾರರು ವಿಮೆ ಕಟ್ಟಿದ್ದರೂ ಅವರಿಗೆ ಸರಿಯಾಗಿ ವಿಮೆ ಬಂದಿಲ್ಲ. ಕಳೆದ ವರ್ಷ ಡಿಸೆಂಬರನಲ್ಲಿ ನಾವು ಹೋರಾಟಕ್ಕೆ ಮುಂದಾದಾಗ 15 ಸಾವಿರ 900 ರೈತರಿಗೆ ವಿಮೆ ಹಣ ಹಾಕಿದ್ದಾರೆ. ಇನ್ನೂ ಬಾಕಿ ಇರುವ 937 ರೈತರಿಗೆ ಹಣ ಬರಬೇಕಿದೆ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಕ್ಷೇತ್ರದಲ್ಲಿಯೇ 600 ಜನ ರೈತರಿಗೆ ಇನ್ಸುರೆನ್ಸ್ ಹಣ ಬಂದಿಲ್ಲ. ಅದನ್ನು ಇನ್ಸುರೆನ್ಸ್ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲದ ಕಾರಣದಿಂದ ಕಾಲಹರಣ ಮಾಡುತ್ತಿದ್ದಾರೆ. ಮುಂದಿನ 15 ದಿನಗಳಲ್ಲಿ ಇವರಿಗೆ ಹಣ ಕೊಡದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಸಿಲಿಂಡರ್ ಪೂರೈಕೆಗೆ ಕೇಂದ್ರದ ಕ್ರಮ:
ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದಿಢೀರ್ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೆಲ್ಲ ಗೊತ್ತಿದ್ದೂ ಕಾಂಗ್ರೆಸ್‍ನವರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‍ನವರ ಬೌದ್ಧಿಕ ದಿವಾಳಿತನ ತೋರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದಾಖಲೆಯ ಬಜೆಟ್ ಮಂಡಿಸಿದರು. ಆದರೆ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ವೇತನ ಕೊಡಲೂ ಸಾಧ್ಯವಾಗಿಲ್ಲ. ಕಳೆದ ಫೆಬ್ರುವರಿ ತಿಂಗಳ ವೇತನವನ್ನೇ ನೀಡಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಸತ್ಯನಾರಾಯಣ ಹೇಮಾದ್ರಿ, ವಿಜಯ ಜೋಶಿ ಇದ್ದರು.